BELAGAVI NEWS :
ಡ್ರಗ್ಸ್ ಎಂಬ ಮಾದಕ ವ್ಯಸನ ದೇಶದ ಮುಂದಿನ ಸಾಮಾಜಿಕ ಸವಾಲಾಗಿದ್ದು, ಇದನ್ನು ತಡೆಯಲು ಸರ್ಕಾರದ ಜೊತೆಗೆ ಯುವ ಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು.
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪದವಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಡ್ರಗ್ಸ್ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ 'ಬೇಡ ಬ್ರೋ,ಡ್ರಗ್ಸ್' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಡ್ರಗ್ಸ್ ಇಡೀ ದೇಶಕ್ಕೆ ದೊಡ್ಡ ಪಿಡುಗಾಗಿ ಕಾಯುತ್ತಿದೆ. ಎಷ್ಟೇ ಕಠಿಣ ಕ್ರಮ ಕೈಗೊಂಡರು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ವಿಶ್ವದ ದೊಡ್ಡ ರಾಷ್ಟ್ರವೆಂದು ಕರೆಸಿಕೊಳ್ಳುವ ಅಮೆರಿಕ ಕೂಡ ಈ ಸಮಸ್ಯೆಯಿಂದ ಹೊರತಾಗಿಲ್ಲ. ಹೀಗಾಗಿ ಪ್ರತಿಯೊಬ್ಬರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು" ಎಂದು ಹೇಳಿದರು.
"ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಡ್ರಗ್ಸ್ ಜಾಲವನ್ನು ನಿರ್ಮೂಲನೆ ಮಾಡುವ ಸಂಕಲ್ಪವನ್ನು ಎಲ್ಲರೂ ಕೈಗೊಳ್ಳಬೇಕು. ವಿಶೇಷವಾಗಿ ಯುವಕರು ಯಾವುದೇ ಮಾದಕ ವಸ್ತುಗಳನ್ನು ಸೇವಿಸುವುದಿಲ್ಲ ಎಂಬ ದೃಢ ಮನೋಬಲ ಬೆಳೆಸಿಕೊಳ್ಳಬೇಕು. ಡ್ರಗ್ಸ್ ನಿಂದ ದೂರವಿರುವ ಜೀವನ ಶೈಲಿಯೇ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದಾರಿ" ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ನ ದುಷ್ಪರಿಣಾಮಗಳು, ಆರೋಗ್ಯದ ಮೇಲೆ ಅದರ ಪರಿಣಾಮ, ಕುಟುಂಬ ಮತ್ತು ಸಮಾಜದ ಮೇಲೆ ಉಂಟಾಗುವ ಅನಾಹುತಗಳ ಕುರಿತು ಜಾಗೃತಿ ಮೂಡಿಸಲಾಯಿತು. "ಬೇಡ ಬ್ರೋ, ಡ್ರಗ್ಸ್" ಅಭಿಯಾನದ ಮೂಲಕ ಯುವಜನರಲ್ಲಿ ಮಾದಕ ವ್ಯಸನದ ವಿರುದ್ಧ ಅರಿವು ಮೂಡಿಸಿ, ಡ್ರಗ್ಸ್ ಮುಕ್ತ ಬೆಳಗಾವಿ ಹಾಗೂ ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪಕ್ಕೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಲಾಯಿತು.
ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಡ್ರಗ್ಸ್ ಜಾಲವು ದಿನದಿಂದ ದಿನಕ್ಕೆ ಹೊಸ ರೂಪದಲ್ಲಿ ವಿಸ್ತರಿಸುತ್ತಿದ್ದು, ಮಾದಕ ವಸ್ತುಗಳನ್ನು ತಯಾರಿಸಲು ಹಾಗೂ ಪೂರೈಕೆ ಮಾಡಲು ದುಷ್ಕರ್ಮಿಗಳು ನಾನಾ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಡ್ರಗ್ಸ್ ತಯಾರಿಸಲು ಹೊಸ ಹೊಸ ವಿಧಾನಗಳನ್ನು ಬಳಸಲಾಗುತ್ತಿದೆ. ಹಲವು ಔಷಧಗಳು ಮತ್ತು ಮಾತ್ರೆಗಳ ದುರುಪಯೋಗವು ನಡೆಯುತ್ತಿದೆ. ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವುದು ಸಮಾಜಕ್ಕೆ ದೊಡ್ಡ ಸವಾಲಾಗಿದೆ. ಶತ್ರು ರಾಷ್ಟ್ರಗಳು ನಮ್ಮ ದೇಶದ ಯುವ ಜನತೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಮಾದಕ ವಸ್ತುಗಳ ಜಾಲವನ್ನು ಬಳಸಲು ಪ್ರಯತ್ನಿಸುತ್ತಿವೆ. ಅವರ ಪ್ರಮುಖ ಗುರಿಯೇ ಯುವಕರು. ನಗರಗಳಿಗೆ ಸೀಮಿತವಾಗಿದ್ದ ಡ್ರಗ್ಸ್ ಸಮಸ್ಯೆ ಈಗ ಹಳ್ಳಿಗೂ ವ್ಯಾಪಿಸಿದ್ದು, ಎಂಟನೇ ತರಗತಿಯ ವಿದ್ಯಾರ್ಥಿಗಳು ವ್ಯಸನಕ್ಕೆ ಒಳಗಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ" ಎಂದು ಹೇಳಿದರು.
ವಿದೇಶಗಳಿಂದ ಅಕ್ರಮವಾಗಿ ಡ್ರಗ್ಸ್ ಪೂರೈಕೆ ಆಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಿದ್ದು, ರಾಜಸ್ಥಾನ ಮತ್ತು ಪಂಜಾಬ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ದೊಡ್ಡ ಜಾಲಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.
"ಕರ್ನಾಟಕ ಮಾರ್ಗವಾಗಿ ಕೇರಳಕ್ಕೆ ಡ್ರಗ್ ಸಾಗಾಟವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಕ್ರಮ ಸಾಗಾಟದ ವೇಳೆ ರಾಜ್ಯದಲ್ಲಿ ಹಲವು ಬಾರಿ ಮಾದಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ,ಸಣ್ಣ ಪ್ರಮಾಣದ ಅಕ್ರಮ ಘಟಕಗಳಲ್ಲಿ ಡ್ರಗ್ಸ್ ಪ್ಯಾಕಿಂಗ್ ನಡೆಸಲಾಗುತ್ತಿರುವ ಮಾಹಿತಿಯು ಇದೆ. ಇಂತಹ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾರ್ವಜನಿಕರ ಸಹಕಾರ ಮತ್ತು ಯುವಜನರ ಜಾಗೃತಿ ಅತ್ಯಗತ್ಯ" ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಡ್ರಗ್ಸ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸೂಚನೆ ನೀಡಲಾಗಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು. "ಅಬಕಾರಿ ಇಲಾಖೆ ಜೊತೆಗೆ ಸಮನ್ವಯ ಸಾಧಿಸಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದಲ್ಲಿ ಡ್ರಗ್ಸ್ ಹಾವಳಿಯನ್ನು ತಡೆಗಟ್ಟಲು ನಗರ ಪ್ರದೇಶಗಳಷ್ಟೇ ಅಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ವ್ಯಾಪಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ವ್ಯಸನ ಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಸರ್ಕಾರ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದೆ. ಅಗತ್ಯವಿದ್ದರೆ ಹಾಗೂ ಪಾಲಕರ ಒಪ್ಪಿಗೆ ದೊರೆತರೆ ಕಾಲೇಜು ವಿದ್ಯಾರ್ಥಿಗಳ ಆರೋಗ್ಯ ತಪಾಸನೆಯ ಭಾಗವಾಗಿ ರಕ್ತ ಪರೀಕ್ಷೆ ನಡೆಸುವ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ" ಎಂದು ಹೇಳಿದರು.
'ಮಾದಕ ವಸ್ತು ಭಸ್ಮಾಸುರ ಇದ್ದಂತೆ' : ನಗರ ಪೊಲೀಸ್ ಆಯುಕ ಭೂಷಣ್ ಬೊರಸೆ
ಕಾರ್ಯಕ್ರಮದಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಮಾದಕ ವಸ್ತುಗಳು ಸಮಾಜಕ್ಕೆ ಭಸ್ಮಾಸುರದಂತಿರುವ ಅಪಾಯವಾಗಿದ್ದು, ಅದನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬ ನಾಗರಿಕನ ಸಹಾಯ ಅಗತ್ಯ ಎಂದು ಹೇಳಿದರು.
"ಜುಲೈ ಒಂದರಂದು ಮುಖ್ಯಮಂತ್ರಿ 'ಬೇಡ ಬ್ರೋ, ಡ್ರಗ್ಸ್' ಅಭಿಯಾನಕ್ಕೆ ಚಾಲನೆ ನೀಡಿದ್ದು, ಇಂದು ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಭಿಯಾನಕ್ಕೆ ಜಿಲ್ಲಾಮಟ್ಟದಲ್ಲಿ ಚಾಲನೆ ನೀಡಿದ್ದಾರೆ. ದೇಶದಲ್ಲಿ ಲಕ್ಷಾಂತರ ಜನರು ಡ್ರಗ್ಸ್ ವ್ಯಸನಕ್ಕೆ ಒಳಗಾಗಿದ್ದಾರೆ. ಈ ಪಿಡುಗನ್ನು ನಿರ್ಮೂಲನೆ ಮಾಡಲು ಸರ್ಕಾರ ಅಥವಾ ಪೊಲೀಸರು ಮಾತ್ರ ಸಾಕಾಗುವುದಿಲ್ಲ. ಪ್ರತಿಯೊಬ್ಬ ನಾಗರಿಕ, ವಿದ್ಯಾರ್ಥಿ, ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು" ಎಂದು ಕರೆ ನೀಡಿದರು.
ಡ್ರಗ್ಸ್ ಹಾವಳಿ ದೇಶದ ಅಭಿವೃದ್ಧಿಗೆ ದೊಡ್ಡ ಅಡ್ಡಿಯಾಗಿದ್ದು, ಯುವಜನತೆಯ ಭವಿಷ್ಯವನ್ನು ಕತ್ತಲೆಯತ್ತ ತಳ್ಳುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. "ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಮಾದಕ ವಸ್ತುಗಳ ಹಾವಳಿಯನ್ನು ಸಂಪೂರ್ಣ ನಿಯಂತ್ರಿಸ ಬೇಕು. ಯುವಕರು ಡ್ರಗ್ಸ್ ನಿಂದ ದೂರವಿದ್ದು ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು" ಎಂದು ಭೂಷಣ ಬೊರಸೆ ಹೇಳಿದರು.
'ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಿ':ಎಸ್ ಪಿ ಕೆ.ರಾಮಾನುಜನ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮಾನುಜನ್ ಮಾತನಾಡಿ,ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣವು ಕೇವಲ ಪೊಲೀಸರ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವು ಹೌದು ಎಂದು ಹೇಳಿದರು.
ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಅದರಲ್ಲೂ ಯುವಕ-ಯುವತಿಯರು ಹೆಚ್ಚಿನ ಜಾಗೃತಿವಹಿಸಿ, ತಮ್ಮ ಸ್ನೇಹಿತರನ್ನು ಮಾದಕ ವ್ಯಸನದಿಂದ ದೂರ ಬಿಡುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಡ್ರಗ್ಸ್ ಸೇವನೆಯಿಂದ ಒಬ್ಬ ವ್ಯಕ್ತಿಯ ಭವಿಷ್ಯ ಮಾತ್ರವಲ್ಲ, ಮತ್ತು ದೇಶದ ಅಭಿವೃದ್ಧಿಗೂ ದಕ್ಕೆಯಾಗುತ್ತದೆ ಎಂಬ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು. ನಿಮ್ಮ ಸುತ್ತಮುತ್ತ ಯಾರಾದರೂ ಡ್ರಗ್ಸ್ ಸೇವನೆ ಅಥವಾ ಅಕ್ರಮ ಮಾರಾಟದಲ್ಲಿ ತೊಡಗಿರುವ ಮಾಹಿತಿ ದೊರೆತರೆ ಕೆಎಸ್‌ಪಿ (KSP) ಆ್ಯಪ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿ. ಸಾರ್ವಜನಿಕರ ಸರ್ಕಾರದಿಂದಲೇ ಡ್ರಗ್ಸ್ ಜಾಲವನ್ನು ಸಂಪೂರ್ಣ ಮಟ್ಟ ಹಾಕಲು ಸಾಧ್ಯ" ಎಂದು ಅವರು ಮನವಿ ಮಾಡಿದರು.
'ವ್ಯಸನಕ್ಕೆ ಮೊದಲೇ ಭಯ ಮೂಡಬೇಕು' : ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಮಾದಕ ವೇಸನದ್ ವಿರುದ್ಧ ಸಮಾಜದಲ್ಲಿ ಭಯ ಮತ್ತು ಜಾಗೃತಿ ಎರಡನ್ನು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
"ಡ್ರಗ್ಸ್ ಹೇಳಿದಂತೆ ಯಾವುದೇ ದುಷ್ಟ ಚಟ ಯುವಕರು ಹೆಜ್ಜೆ ಇಡುವ ಮುನ್ನ ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಹಾಗೂ ಭಯ ಇರಬೇಕು. ಮಾದಕ ವಸ್ತುಗಳ ಅಪಾಯದ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿದರೆ ಮಾತ್ರ ಈ ಪಿಡುಗನ್ನು ನಿಯಂತ್ರಿಸಲು ಸಾಧ್ಯ. ಒಮ್ಮೆ ನೀವು 'ಬೇಡ' ಎಂದು ಹೇಳಿದರೆ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬಹುದು. ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಇಂತಹ ವ್ಯಸನದತ್ತ ಸಾಗುತ್ತಿರುವುದು ಕಂಡು ಬಂದರೆ ಮೌನವಾಗಿರಬೇಡಿ. ಅವರಿಗೆ ತಿಳುವಳಿಕೆ ನೀಡಿ, 'ಬೇಡ ಬ್ರೋ, ಡ್ರಗ್ಸ ' ಎಂದು ಮನವೊಲಿಸಿ" ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ಲೆಡರ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಆಸಿಫ್ ಸೇಠ್ ಒತ್ತಾಯ
ಕಾರ್ಯಕ್ರಮದಲ್ಲಿ ಶಾಸಕ ಆಸೀಫ್ ಸೇಠ್ ಮಾತನಾಡಿ, ಡ್ರಗ್ಸ್ ಪೆಡ್ಲರ್ ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಒಬ್ಬ ಡ್ರಗ್ ಪೆಡ್ಲರ್ ಸಾವಿರಾರು ಯುವಕರ ಭವಿಷ್ಯವನ್ನು ಹಾಳು ಮಾಡುವ ಸಾಮರ್ಥ್ಯ ಹೊಂದಿದ್ದಾನೆ. ಆದ್ದರಿಂದ ಇಂತಹ ಸಮಾಜಘಾತಕ ಶಕ್ತಿಗಳ ವಿರುದ್ಧ ಯಾವುದೇ ರಾಜಿ ಮಾಡಿಕೊಳ್ಳದೆ ಕಾನೂನು ಪ್ರಕಾರ ಅತ್ಯಂತ ಕಠಿಣ ಕ್ರಮ ಜಾರಿಗೊಳಿಸಬೇಕು. ಡ್ರಗ್ಸ್ ಜಾಲವನ್ನು ಬೇರು ಸಮೇತ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಕಾರ್ಯಾಚರಣೆ ನಡೆಸಬೇಕು" ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಕಾಲೇಜಿನ ಉಪನ್ಯಾಸಕರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ, ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸುವ ಸಂಕಲ್ಪ ಮಾಡಿದರು.
ಡ್ರಗ್ಸ ಮಾರಾಟಗಾರರ ವಿರುದ್ಧ ಕಠಿಣ ಶಿಕ್ಷೆಗೆ ವಿದ್ಯಾರ್ಥಿಗಳ ಒತ್ತಾಯ
ಡ್ರಗ್ಸ್ ವಿರುದ್ಧದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಮಾದಕ ವಸ್ತುಗಳ ಮಾರಾಟ ಮತ್ತು ಪೂರೈಕೆ ತಡೆಯಲು ಅತ್ಯಂತ ಕಠಿಣ ಕಾನೂನು ಕ್ರಮಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
"ನಮ್ಮ ಕಾಲೇಜು ಕ್ಯಾಂಪಸ್ ನಲ್ಲಿ ಯಾರಾದರೂ ಡ್ರಗ್ಸ್ ಅಥವಾ ಇತರೆ ಮಾದಕ ವಸ್ತುಗಳನ್ನು ಬಳಸುತ್ತಿರುವುದು ಅಥವಾ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲು ನಾವು ಸಿದ್ದರಿದ್ದೇವೆ. ಯುವಜನರ ಭವಿಷ್ಯ ಹಾಳು ಮಾಡುತ್ತಿರುವ ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಡ್ರಗ್ಸ್ ಪೆಡ್ಲರ್ ಗಳ ವಿರುದ್ಧ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ಆಗ ಮಾತ್ರ ಸಮಾಜದಲ್ಲಿ ಭಯ ಮೂಡಿ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತದೆ" ಎಂದು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಈ ಅಭಿಯಾನವು ಕಾರ್ಯಕ್ರಮದ ಭಾಗವಾಗಿ ನಡೆದ ಮುಕ್ತ ಚರ್ಚೆಯ ಸಂದರ್ಭದಲ್ಲಿನ ಅವರ ವೈಯಕ್ತಿಕ ಅಭಿಪ್ರಾಯವಾಗಿತ್ತು.
ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತ್ಯಾಗರಾಜನ್, ಡಿಸಿಪಿ ನಿರಂಜನ ರಾಜೆ ಅರಸ್, ಪ್ರಶಿಕ್ಷಣಾರ್ಥಿ ರೋಹಿತ್ ಸಿಂಗ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಾಧ್ಯಾಪಕರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ, ಡ್ರಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು.