belagavi news :
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಅನ್ನು 55,000 ಪ್ರೇಕ್ಷಕರ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿರುವ ಮಹತ್ವಕಾಂಕ್ಷಿ ಯೋಜನೆ ರೂಪಿಸಿರುವುದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, "ನಾನು Eden Gardens, Wankhede Stadium ಹಾಗೂ Narendra Modi Stadium ಸೇರಿದಂತೆ ಹಲವು ಕ್ರೀಡಾಂಗಣಗಳನ್ನು ನೋಡಿದ್ದೇನೆ. ಅವುಗಳ ಮಟ್ಟಕ್ಕೆ ನಮ್ಮ ಚಿನ್ನಸ್ವಾಮಿ ಮೈದಾನ ಇನ್ನೂ ತಲುಪಿಲ್ಲ. ಪ್ರೇಕ್ಷಕರ ಅನುಕೂಲಕ್ಕೆ ಹಾಗೂ ವೀಕ್ಷಣಾ ಅನುಭವವನ್ನು ಗಮನದಲ್ಲಿಟ್ಟುಕೊಂಡು ದೊಡ್ಡಮಟ್ಟದ ಅಭಿವೃದ್ಧಿ ಅಗತ್ಯವಿದೆ" ಎಂದು ಹೇಳಿದರು.
ಪ್ರಸ್ತುತ 32 ಸಾವಿರ ಸಾಮರ್ಥ್ಯ ಹೊಂದಿರುವ ಮೈದಾನದಲ್ಲಿ ಎಲ್ಲಾ ಆಸನಗಳಿಂದ ಪಂದ್ಯವನ್ನು 360 ಡಿಗ್ರಿಯಿಂದ ವೀಕ್ಷಿಸಲು ಸಾಧ್ಯ ವಾಗುವುದಿಲ್ಲ. ಟಿಕೆಟ್ ಮಾರಾಟವು ಸುಮಾರು 20 ಸಾವಿರಕ್ಕೆ ಸೀಮಿತವಾಗುತ್ತದೆ ಎಂದು ಅವರು ವಿವರಿಸಿದ್ದರು. ಈ ಹಿನ್ನಲೆ, ಸ್ಟೇಡಿಯಂ ಸಾಮರ್ಥವನ್ನು 55,000ಕ್ಕೆ ಹೆಚ್ಚಿಸಿ ವಿಶ್ವಮಟ್ಟದ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಿದಲಾಗಿದೆ. ಆದರೆ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದೆ ಎಂದು ಅವರು ತಿಳಿಸಿದರು.
ಈ ಯೋಜನೆ ಸಾಕಾರವಾದರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ದೇಶದ ಅತ್ಯಾಧುನಿಕ ಕ್ರಿಕೆಟ್ ಕ್ರೀಡಾಂಗಣಗಳ ಸಾಲಿಗೆ ಸೇರುವ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು, ಕರ್ನಾಟಕದಲ್ಲಿ ಮತ್ತೆ ಪ್ರಮುಖ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಸಂಸ್ಥೆಯ ತಂಡದ ಸಮೂಹ ಪ್ರಯತ್ನವೇ ಕಾರಣ ಎಂದು ಹೇಳಿದ್ದಾರೆ.
"ಕೆಎಸ್ಸಿಎಗೆ ಬೇರೆ ಯಾರೇ ಆಯ್ಕೆಯಾಗಿದ್ದರು ಬೆಂಗಳೂರಿನಲ್ಲಿ ಐಪಿಎಲ್ ಹಾಗೂ ಅಂತರಾಷ್ಟ್ರೀಯ ಪಂದ್ಯಗಳನ್ನು ನಡೆಸುವುದು ಸುಲಭ ವಾಗಿರುತ್ತಿರಲಿಲ್ಲ. ನಮ್ಮ ತಂಡ ಅಧಿಕಾರಕ್ಕೆ ಬಂದ ಬಳಿಕವೇ ಈ ಅವಕಾಶಗಳು ಕರ್ನಾಟಕಕ್ಕೆ ಲಭಿಸಿವೆ " ಎಂದು ಅವರು ತಿಳಿಸಿದರು.
ಈ ಸಾಧನೆಯ ಹಿಂದೆ ಕೆಎಸ್ಸಿಎ ಅಧಿಕಾರಿಗಳಾದ ಸಂತೋಷ್ ಮೆನನ್, ವಿನಯ್ ಮೃತ್ಯುಂಜಯ, ಮಧುಕರ್, ಅವಿನಾಶ್ ವೈದ್ಯ, ಸುಜಿತ್ ಸೋಮಸುಂದರ್ ಹಾಗೂ ದಿಗ್ಗಜ ಆಟಗಾರರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನ ಮತ್ತು ಸಹಕಾರ ಪ್ರಮುಖ ಪಾತ್ರ ವಹಿಸಿದೆ ಎಂದು ವೆಂಕಟೇಶ್ ಪ್ರಸಾದ್ ಹೇಳಿದರು.
ಇದೇ ವೇಳೆ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ ಅವರು, ಅಕ್ಟೋಬರ್ ನಲ್ಲಿ ಬೆಂಗಳೂರಿನಲ್ಲಿ ಏಕದಿನ ಪಂದ್ಯ ಹಾಗೂ ಡಿಸೆಂಬರ್ ನಲ್ಲಿ ಎಂ.ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಅಂತರಾಷ್ಟ್ರೀಯ ಟಿ-20 ಪಂದ್ಯ ನಡೆಸಲಿದೆ ಎಂದು ಘೋಷಿಸಿದರು.
ಈ ಘೋಷಣೆಯಿಂದ ಬೆಂಗಳೂರು ಹಾಗೂ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿದ್ದು, ಚಿನ್ನಸ್ವಾಮಿ ಮೈದಾನ ಮತ್ತೊಮ್ಮೆ ಜಾಗತಿಕ ಕ್ರಿಕೆಟ್ ಗಮನ ಸೆಳೆಯಲು ಸಜ್ಜಾಗಿದೆ.
"ಆನೇಕಲ್ ನಲ್ಲಿ ನಿರ್ಮಾಣದಲ್ಲಿರುವ ಎರಡನೇ ಅಂತರಾಷ್ಟ್ರೀಯ ಮೈದಾನಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ನಮ್ಮನ್ನು ಸರ್ಕಾರ ಗಮನಕ್ಕೆ ತೆಗೆದುಕೊಳ್ಳುತ್ತದೋ ಅಥವಾ ಇಲ್ಲವೋ ಎನ್ನುವುದು ನಮ್ಮ ಕೈಯಲ್ಲಿಲ್ಲ" ಎಂದು ಇದೇ ವೇಳೆ ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು, ಮುಂದಿನ ದಿನಗಳಲ್ಲಿ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.
"ಐಪಿಎಲ್ 8 ತಿಂಗಳಿಗೊಂದಿಗೆ ನಡೆದಿದ್ದು, ನಂತರ 10 ತಂಡಗಳಿಗೆ ವಿಸ್ತರಿಸಲಾಗಿದೆ. ಅದೇ ಮಾದರಿಯಲ್ಲಿ ಮಹಾರಾಜ್ ಟ್ರೋಫಿಯಲ್ಲೂ ಹೊಸ ತಂಡಗಳನ್ನು ಸೇರಿಸಲಾಗುವುದು. ಭವಿಷ್ಯದಲ್ಲಿ ಬೆಳಗಾವಿ ತಂಡವನ್ನು ನೋಡಬಹುದು" ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.
ಆದರೆ, ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಪಂದ್ಯಗಳು ಅಥವಾ ಮಹಾರಾಜ ಟ್ರೋಫಿ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಮಾತನಾಡಿದ ಅವರು, ಲಾಜಿಸ್ಟಿಕ್ ಸವಾಲುಗಳಿರುವುದರಿಂದ ಅದು ಸಧ್ಯಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. "ಬೆಳಗಾವಿಯಿಂದ ಬೆಂಗಳೂರಿಗೆ ತಂಡಗಳ ಸಂಚಾರ ವ್ಯವಸ್ಥೆ ಕಷ್ಟಕರವಾಗುತ್ತದೆ. ಆದರೆ ಬಿಸಿಸಿಐ ದೇಶಿಯ ಪಂದ್ಯಗಳು ಹಾಗೂ ಅಭ್ಯಾಸ ಪಂದ್ಯಗಳನ್ನು ಬೆಳಗಾವಿಯಲ್ಲಿ ನಡೆಸಲು ಅವಕಾಶವಿದೆ" ಎಂದು ಹೇಳಿದರು.
ಇದೇ ವೇಳೆ ಬೆಳಗಾವಿಯ ಸತ್ಯಾತ್ಮ ತೀರ್ಥ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೆಂಕಟೇಶ್ ಪ್ರಸಾದ್ ಅವರು ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು. ಕಾರ್ಯಕ್ರಮದಲ್ಲಿ V. N. Patil, Avinash Potdar ಹಾಗೂ Vilas Joshi ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕ್ರಿಕೆಟ್ ಅಭಿವೃದ್ಧಿ ಜೊತೆಗೆ ಪರಿಸರ ಜಾಗೃತಿಯು ಒತ್ತು ನೀಡಿದ ವೆಂಕಟೇಶ್ ಪ್ರಸಾದ್ ಅವರ ಹೇಳಿಕೆಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.
Also Read:
ಮಂತ್ರಾಲಯ ಮಠದಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ: ಕೊಠಡಿ ಸಿಗದೇ ಪರದಾಡುತ್ತಿರುವ ಭಕ್ತರು