Balagavi News:
ದಾವಣಗೆರೆ: ಇಲ್ಲಿನ ಸರ್ವೇಕ್ಷಣಾ ಘಟಕದ ಸಿಬ್ಬಂದಿಯ ಪ್ರಯತ್ನದಿಂದ ಜಿಲ್ಲೆಯ 7 ಗ್ರಾಮಗಳನ್ನು ಸಂಪೂರ್ಣ ತಂಬಾಕು ಮುಕ್ತಗೊಳಿಸಿದ್ದಾರೆ. ದಾವಣಗೆರೆ ತಾಲೂಕಿನ ಹುಳುಪಿನಕಟ್ಟೆ ಗ್ರಾಮ ಸೇರಿದಂತೆ ವಿವಿಧ, ತಾಲೂಕು ವ್ಯಾಪ್ತಿಯ ಸುಲ್ತಾನಿಪುರ, ಓಬಣ್ಣನಹಳ್ಳಿ, ಒಂಟಿಹಾಳ, ತಿಮ್ಲಾಪುರ್, ಹಟ್ಟಿಹಾಳ, ನರೇನಹಳ್ಳಿ ತಂಬಾಕು ಮುಕ್ತವಾಗಿವೆ. ವಿಶೇಷವಾಗಿ ಹುಳುಪಿನಕಟ್ಟೆ ಗ್ರಾಮದಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳೇ ಸಂಪೂರ್ಣವಾಗಿ ಮಾಯವಾಗಿವೆ.
ಈ ವೇಳೆ ಹುಳುಪಿನಕಟ್ಟೆ ಗ್ರಾಮದಲ್ಲಿ ತಂಬಾಕು ಮಾರಾಟ ಮಾಡುವ ಗೂಡಂಗಡಿಗಳೇ ಸಂಪೂರ್ಣವಾಗಿ ಇಲ್ಲದಿರುವುದು ಕಂಡುಬಂದಿದೆ. ಗ್ರಾಮದಲ್ಲಿ ಯುವಕರು ತಂಬಾಕು ಸೇವನೆ ತ್ಯಜಿಸಿರುವ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಕೂಡ ತಂಬಾಕು ತಂದು ಮಾರಾಟ ಮಾಡುವುದು ನಿಲ್ಲಿಸಿದ್ದಾರೆ ಎಂದು ಗ್ರಾಮಸ್ಥ ಬಸವರಾಜಪ್ಪ ತಿಳಿಸಿದ್ದಾರೆ.
ಗ್ರಾಮದ ನಿವಾಸಿ ಬಸವರಾಜಪ್ಪ ಮಾತನಾಡಿ, " ನಮ್ಮ ಊರು ಸಂಪೂರ್ಣ ತಂಬಾಕು ಮುಕ್ತವಾಗಿದೆ. ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ. ಯುವಕರು, ವೃದ್ಧರು ಯಾರು ಕೂಡ ತಂಬಾಕು ಸೇವಿಸುತ್ತಿಲ್ಲ. ಒಬ್ಬರನ್ನು ನೋಡಿ ಮತ್ತೊಬ್ಬರು ತಂಬಾಕು ತ್ಯಜಿಸಿದ್ದಾರೆ. ಈಗ ಗ್ರಾಮದಲ್ಲಿ ಅಡಿಕೆ ಎಲೆ ಮಾತ್ರ ಬಳಸಲಾಗುತ್ತಿದೆ" ಎಂದು ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ 7 ಗ್ರಾಮಗಳು ತಂಬಾಕು ಮುಕ್ತ ಗ್ರಾಮಗಳಾಗಿ ರೂಪಗೊಂಡಿದ್ದು, ಈ ಯಶಸ್ಸಿಗೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದ ನಿರಂತರ ಜಾಗೃತಿ ಪ್ರಮುಖ ಕಾರಣವಾಗಿದೆ ಎಂದು ಜಿ. ಪಂ. ಸಿಇಓ ಗಿತ್ತೆ ಮಾಧವ ವಿಠಲ್ ರಾವ್ ತಿಳಿಸಿದ್ದಾರೆ.
ಅವರು ಮಾತನಾಡಿ, "ನಮ್ಮ ಜಿಲ್ಲೆಯ 7 ಗ್ರಾಮಗಳಲ್ಲಿ ಈಗ ತಂಬಾಕು ಸಿಗುವುದಿಲ್ಲ, ಯಾರು ಸೇವಿಸುತ್ತಿಲ್ಲ. ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ 20 ಗ್ರಾಮಗಳನ್ನು ತಂಬಾಕು ಮುಕ್ತ ಮಾಡಲು ಆಯ್ಕೆ ಮಾಡಲಾಗಿತ್ತು. ಪಿಡಿಓ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಜನರು ತಂಬಾಕು ಸೇವನೆ ನಿಲ್ಲಿಸಿದರೆ ಅಂಗಡಿಗಳಲ್ಲೂ ಮಾರಾಟ ನಿಂತುಹೋಗುತ್ತದೆ" ಎಂದು ಹೇಳಿದ್ದಾರೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ಮಾತನಾಡಿ, ತಂಬಾಕು ಮಾರಾಟ ಹಾಗೂ ಸೇವನೆ ಕಡಿಮೆ ಇರುವ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳಾಗಿ ಘೋಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಉಳಿದ 13 ಗ್ರಾಮಗಳನ್ನು ಇದೇ ವರ್ಷದಲ್ಲಿ ತಂಬಾಕು ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಇದಕ್ಕಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದ್ದು ಪಿಡಿಓ ನೋಡಲ್ ಆಫೀಸರ್ ಆಗಿ, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತಯರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.
ದಾವಣಗೆರೆಯ ಈ ತಂಬಾಕು ಮುಕ್ತ ಅಭಿಯಾನ ರಾಜ್ಯದ ಇತರ ಜಿಲ್ಲೆಗಳಿಗೂ ಮಾದರಿಯಾಗುತ್ತಿದೆ.
Also Read:
RBI Repo Rate Update: ಸಾಲಗಾರರಿಗೆ ಬಡ್ಡಿದರ ಏರಿಕೆ ಶಾಕ್ ಇಲ್ಲ, ಆರ್‌ಬಿಐ ಮಹತ್ವದ ನಿರ್ಧಾರ