belagavi news:
ಬೆಳಗಾವಿ: ಬೆಳಗಾವಿ ತಾಲೂಕಿನ Sambra ದಲ್ಲಿರುವ ವಿಮಾನ ನಿಲ್ದಾಣದ ಟರ್ಮಿನಲ್ - 2 ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಹೊಸ ಟರ್ಮಿನಲ್ ಕಟ್ಟಡಕ್ಕೆ ಐತಿಹಾಸಿಕ ಸ್ಪರ್ಶ ನೀಡುವ ಉದ್ದೇಶದಿಂದ ಬೆಳಗಾವಿಯ ಪ್ರಸಿದ್ಧ Kamal Basadi ಮಾದರಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ಜೊತೆಗೆ ಒಳಾಂಗಣದಲ್ಲಿ ರಾಣಿ ಚೆನ್ನಮ್ಮ ಅವರ ಜೀವನ ಹಾಗೂ ಹೋರಾಟವನ್ನು ಪರಿಚಯಿಸುವ ವಿಶೇಷ ಆರ್ಟ್ ಗ್ಯಾಲರಿಯನ್ನು ನಿರ್ಮಿಸಲಾಗುತ್ತಿದೆ.
ಕಮಲ ಬಸದಿ ಬೆಳಗಾವಿಯ ಹೆಮ್ಮೆಯ ಪ್ರತೀಕವಾಗಿದ್ದು, ಶತಮಾನಗಳ ಇತಿಹಾಸ ಮತ್ತು ವಿಶಿಷ್ಟ ಶಿಲ್ಪಕಲೆಯಿಂದ ಪ್ರವಾಸಿಗರರನ್ನು ಆಕರ್ಷಿಸುತ್ತಿದೆ. ಇದೆ ಐತಿಹಾಸಿಕ ವಾಸ್ತು ಶಿಲ್ಪದ ಸೊಬಗನ್ನು ಪ್ರತಿ ಬಿಂಬಿಸುವ ರೀತಿಯಲ್ಲಿ ಈಗ ವಿಮಾನ ನಿಲ್ದಾಣದ ಟರ್ಮಿನಲ್ -2 ರೂಪುಗೊಳ್ಳುತ್ತಿದೆ.
ಜಿಲ್ಲೆಯ ಇತಿಹಾಸ, ಕಲೆ, ವಾಸ್ತುಶಿಲ್ಪ, ಪರಂಪರೆ, ಸಂಸ್ಕೃತಿ ಹಾಗೂ ಕುರಾನ್ತನಾ ಸ್ಮಾರಕಗಳ ಪರಿಚಯವನ್ನು ದೇಶವಿದೇಶಗಳ ಪ್ರಯಾಣಿಕರಿಗೆ ನೀಡುವ ಉದ್ದೇಶದಿಂದ ಈ ವಿನ್ಯಾಸವನ್ನು ಆಯ್ಕೆ ಮಾಡಲಾಗಿದೆ. ಆಧುನಿಕ ಸೌಲಭ್ಯಗಳೊಂದಿಗೆ ಸ್ಥಳೀಯ ಸಾಂಸ್ಕೃತಿಕ ವೈಭವವನ್ನು ಜೋಡಿಸುವ ಈ ಯೋಜನೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೊಸ ಗುರುತು ನೀಡುವ ನಿರೀಕ್ಷೆ ಮೂಡಿಸಿದೆ.
🛩️ ವಿಮಾನ ನಿಲ್ದಾಣವೇ ಈಗ ಐತಿಹಾಸಿಕ ಕಲಾ ವೈಭವದ ಪ್ರತೀಕ!
ಒಟ್ಟು ₹275 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ಭರದಿಂದ ಸಾಗುತ್ತಿದೆ. ವಿಶೇಷ ಏನೆಂದರೆ, ಟರ್ಮಿನಲ್ ಮುಂಭಾಗದಲ್ಲಿ ಕಮಲ ಬಸದಿ ಮಾದರಿಯ ಕೆತ್ತನೆ ಶೈಲಿಯ ಆಳೆತ್ತರದ ಕಂಬಗಳು ಅಳವಡಿಸಲಾಗಿದ್ದು, ಎರಡನೆಯ ಹಂತದಲ್ಲಿ ಇದೆ ವಿನ್ಯಾಸ ಮುಂದುವರೆಯಲಿದೆ.
ಬಸದಿ ಮೊದಲ ಅಂಕಣದ ಶೈಲಿಯನ್ನು ಪ್ರತಿಬಿಂಬಿಸುವ ಒಳಭಾಗದ ಮೇಲ್ವಾವಣಿ ವಿನ್ಯಾಸವು ನಿರ್ಮಾಣವಾಗುತ್ತಿದೆ. ಈಗಾಗಲೇ 87% ಕಾಮಗಾರಿ ಪೂರ್ಣಗೊಂಡಿದ್ದು, ಯೋಜನೆ ಮುಗಿದ ಬಳಿಕ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಬಂದ ಅನುಭವಕ್ಕಿಂತ ಹೆಚ್ಚಾಗಿ ಕಮಲ ಬಸದಿಗೆ ಭೇಟಿ ನೀಡಿ ಬಂದ ಅನುಭವ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ Sambra ವಿಮಾನ ನಿಲ್ದಾಣದ ಟರ್ಮಿನಲ್- 2 ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಐತಿಹಾಸಿಕ Kamal Basadi ಮಾದರಿಯಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ Tyagarajan ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದವರು, ಹೊಸ ಟರ್ಮಿನಲ್ ಈಗಿರುವ ಕಟ್ಟಡಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗಿರಲಿದೆ ಎಂದು ಹೇಳಿದರು. "ಹಿಂದಿನ ಟರ್ಮಿನಲ್ ಸುಮಾರು 3,600 ಚದರ ಅಡಿ ವಿಸ್ತೀರ್ಣ ಹೊಂದಿತ್ತು. ಹೊಸ ಟರ್ಮಿನಲ್ 16,000 ಚದರ ಅಡಿಯಲ್ಲಿ ನಿರ್ಮಾಣವಾಗುತ್ತಿದೆ," ಎಂದು ವಿವರಿಸಿದರು.
ಪ್ರಯಾಣಿಕ ಸಾಮರ್ಥ್ಯದಲ್ಲಿಯೂ ದೊಡ್ಡ ಮಟ್ಟದ ಹೆಚ್ಚಳವಾಗಿದ್ದು, ಹಿಂದಿನ 540 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯದಿಂದ ಈಗ 2400 ಪ್ರಯಾಣಿಕರನ್ನು ನಿಭಾಯಿಸುವಂತೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ವಿಮಾನಗಳ ಪಾರ್ಕಿಂಗ್ ಸಾಮರ್ಥ್ಯವನ್ನು ವಿಸ್ತರಿಸಲಾಗಿದ್ದು, ಈಗ 3 ವಿಮಾನಗಳ ಬದಲಿಗೆ 12 ವಿಮಾನಗಳನ್ನು ಪಾರ್ಕ್ ಮಾಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಪಾರ್ಕಿಂಗ್ ಸೌಲಭ್ಯವನ್ನು ಹೆಚ್ಚಿಸಲಾಗಿದ್ದು, ಸುಮಾರು 600 ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಹೊಸ ಟರ್ಮಿನಲ್ ನಲ್ಲಿ 4 ಬೋರ್ಡಿಂಗ್ ಸೇತುವೆಗಳು, 14 ಚೆಕ್- ಇನ್ ಕೌಂಟರ್ ಗಳು ಹಾಗೂ 2 ಅರೈವಲ್ ಕನ್ವೇಯರ್ ಗಳನ್ನು ಅಳವಡಿಸಲಾಗುತ್ತಿದೆ.
ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ಈ ಯೋಜನೆ ಇನ್ನೂ ಕೆಲವು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ರಾಣಿ ಚೆನ್ನಮ್ಮ ಆರ್ಟ್ ಗ್ಯಾಲರಿ ವಿಶೇಷ ಆಕರ್ಷಣೆ:
ರಾಣಿ ಚೆನ್ನಮ್ಮ ಅವರ ಸಾಹಸಗಾಥೆಯನ್ನು ಬಿಂಬಿಸುವ ವಿಶೇಷ ಆರ್ಟ್ ಗ್ಯಾಲರಿಯನ್ನು Sambra ವಿಮಾನ ನಿಲ್ದಾಣದ ಟರ್ಮಿನಲ್ ಒಳಾಂಗಣದಲ್ಲಿ ನಿರ್ಮಿಸಲಾಗುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿಯಾದ ಚೆನ್ನಮ್ಮಾಜಿಯ ಬಾಲ್ಯ, ಯುದ್ಧಕಲೆ, ರಾಜ್ಯಭಾರ, ಬ್ರಿಟಿಷರ ವಿರುದ್ಧದ ಹೋರಾಟ, ಸೆರೆಮನೆ ಜೀವನ ಸೇರಿದಂತೆ ಅವರ ಸಂಪೂರ್ಣ ಜೀವನ ಚರಿತೆಯನ್ನು ಉಬ್ಬು ಶಿಲ್ಪಗಳು ಹಾಗೂ ವರ್ಣ ಚಿತ್ರಗಳ ಮೂಲಕ ಇಲ್ಲಿ ಪ್ರಾದೇಶಿಸಲಾಗುತ್ತಿದೆ.
ಇದಲ್ಲದೆ, ಟರ್ಮಿನಲ್ ಹೊರಭಾಗದಲ್ಲಿ ಬೃಹತ ಪ್ರದರ್ಶನ ಗೋಡೆಯನ್ನು ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಬೆಳಗಾವಿ ಜಿಲ್ಲೆಯ ಪ್ರಮುಖ ಇತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನು ಗೋಡೆ ಚಿತ್ರಗಳ ಮೂಲಕ ಪರಿಚಯಿಸಲಾಗುತ್ತದೆ. ಈ ಕಲಾತ್ಮಕ ವಿನ್ಯಾಸ ಕಾರ್ಯದಲ್ಲಿ ರಾಜ್ಯಮಟ್ಟದ ಕಲಾವಿದರು ತೊಡಗಿಸಿಕೊಂಡಿದ್ದು ಪ್ರಯಾಣಿಕರಿಗೆ ಸ್ಥಳೀಯ ಇತಿಹಾಸ ಮತ್ತು ಸಂಸ್ಕೃತಿಯ ಪರಿಚಯ ನೀಡುವ ಉದ್ದೇಶ ಹೊಂದಲಾಗಿದೆ.
Also Read:
ಮನವೊಲಿಕೆ ಸಫಲ: ರಾಜಿನಾಮೆ ವಾಪಸ್ ಪಡೆದ ರಾಮಲಿಂಗಾ ರೆಡ್ಡಿ, ಸುರ್ಜೇವಾಲಾ ಸ್ಪಷ್ಟನೆ