belagavi news :
ಕಾವೇರಿ ನೀರು ಹಂಚಿಕೆ ವಿವಾದ ಮತ್ತೆ ತೀವ್ರಗೊಂಡಿದೆ. ತಮಿಳುನಾಡಿಗೆ ಹದಿನೈದು ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಸೂಚನೆ ನೀಡಿದೆ. ಈ ನಿರ್ಧಾರದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ವಾಗ್ವಾದ ಶುರುವಾಗಿದೆ.
ತಮಿಳುನಾಡಿನ ನೀರು ಬಿಡುಗಡೆ ಬೇಡಿಕೆಯನ್ನು ಪರಿಶೀಲಿಸಲು ಇಂದು CWRC ಕರ್ನಾಟಕ ಮತ್ತು ತಮಿಳುನಾಡಿನ ಅಧಿಕಾರಿಗಳೊಂದಿಗೆ ಆನ್ಲೈನ್ ಸಭೆ ನಡೆಸಿತು. ಉಭಯ ರಾಜ್ಯಗಳ ಜಲಾಶಯಗಳ ಸ್ಥಿತಿ ಹಾಗೂ ನೀರಿನ ಹಂಚಿಕೆ ಕುರಿತು ಚರ್ಚಿಸಿದ ಬಳಿಕ, ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸಮಿತಿ ಆದೇಶಿಸಿದೆ.
ಈ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಆರ್ ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ಸರ್ಕಾರ ಮತ್ತೊಮ್ಮೆ ವಿಫಲವಾಗಿದೆ ಎಂದು ಆರೋಪಿಸಿದವರು, ರಾಜ್ಯದಲ್ಲಿ ಹಲವೆಡೆ ಬರದ ಪರಿಸ್ಥಿತಿ ಹಾಗೂ ರೈತರ ಸಂಕಷ್ಟ ವಿದ್ದರೂ ತಮಿಳುನಾಡಿಗೆ ನೀರು ಬಿಡಲು ಸರ್ಕಾರ ಶರಣಾಗಿದೆ ಎಂದು ಟೀಕಿಸಿದ್ದಾರೆ.
ಕಾವೇರಿ ನೀರು ಬಿಡುಗಡೆ ಕುರಿತು CWRE ಆದೇಶ, ಕರ್ನಾಟಕ-ತಮಿಳುನಾಡು ನಡುವಿನ ಜಲ ವಿವಾದ ಹಾಗೂ ರಾಜ್ಯ ಸರ್ಕಾರದ ನಿಲುವು ಇದೀಗ ಮತ್ತೆ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಯ ಕೇಂದ್ರ ಬಿಂದುವಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ CWRE ನೀಡಿರುವ ಸೂಚನೆಗೆ ಸಂಬಂಧಿಸಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕದ ಪರ ಸಮರ್ಥವಾಗಿ ವಾದ ಮಂಡಿಸಲು ಹಲವು ಬಾರಿ ಎಚ್ಚರಿಸಿದರೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ನೀರಾವರಿ ಸಚಿವ ರಾಮಲಿಂಗ ರೆಡ್ಡಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದ್ದು, ಕಾವೇರಿ ನೀರನ್ನು ಮತ್ತೆ ಬಿಡುಗಡೆ ಮಾಡುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಹಿಂದಿನ ನಿರ್ಧಾರಗಳಿಂದಲೇ ರಾಜ್ಯದ ಜಲಾಶಯಗಳ ಮೇಲೆ ಒತ್ತಡ ಹೆಚ್ಚಿದ್ದು, ಕುಡಿಯುವ ನೀರು ಮತ್ತು ರೈತರ ಅಗತ್ಯಗಳ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿಲ್ಲ ಎಂದು ಅವರು ಹೇಳಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಅವರು ರಾಜಕೀಯ ಒತ್ತಡಗಳಿಗೆ ಮನೆದು ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುಗಡೆ ಮಾಡಿದರೆ ರಾಜ್ಯಾದ್ಯಂತ ಜನರು ಉಗ್ರ ಹೋರಾಟ ನಡೆಸುವ ಸಾಧ್ಯತೆ ಇದೆ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ರಾಜ್ಯದ ಜಲಾಶಯಗಳ ನೈಜ ಪರಿಸ್ಥಿತಿ ಮತ್ತು ಅಂಕಿ ಅಂಶಗಳನ್ನು ಸಮರ್ಪಕವಾಗಿ ಮಂಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ. ತಕ್ಷಣವೇ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಸಭೆ ಕರೆದು CWRE ಶಿಫಾರಸಿನ ವಿರುದ್ಧ ಮೇಲ್ ಮನವಿ ಸಲ್ಲಿಸಿ, ಕರ್ನಾಟಕದ ಪರ ಬಲವಾದ ವಾದ ಮಂಡಿಸಬೇಕು. ಯಾವುದೇ ಕಾರಣಕ್ಕೂ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಯಾಗದಂತೆ ಕಾವೇರಿ ನೀರು ಹೊರ ಹೋಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Also Read:
RSS ನೋಂದಣಿ ವಿಚಾರದಲ್ಲಿ ಹೊಸ ಚರ್ಚೆ: ರಾಷ್ಟ್ರಮಟ್ಟದ ಅಭಿಯಾನಕ್ಕೆ ಪ್ರಿಯಾಂಕ್ ಖರ್ಗೆ ಬೆಂಬಲ?