<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿಕರ ಮೇಲೆ ED ದಾಳಿ: ಬಲವಂತದ ಕ್ರಮಕ್ಕೆ ಹೈಕೋರ್ಟ್ ತಡೆ ಆದೇಶ

ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿಕರ ಮೇಲೆ ED ದಾಳಿ: ಬಲವಂತದ ಕ್ರಮಕ್ಕೆ ಹೈಕೋರ್ಟ್ ತಡೆ ಆದೇಶ
Summary: The Enforcement Directorate (ED) has issued an interim order not to take any coercive action after raids on the residences and offices of relatives of Minister Satish Jarkiholi. Here is the complete information on the background of the case, the court order and the major developments in the ED investigation.

Belagavi News:

ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿಕರ ಮೇಲೆ ED ದಾಳಿ: ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ವೈ. ಮಂಜುನಾಥ್ ಸೇರಿದಂತೆ ಇತರರ ವಿರುದ್ಧ ಕ್ರಮ ಹಣ ವರ್ಗಾವಣೆ ತಡೆ ಕಾಯಿದೆ. (PMLA) ಅಡಿ ಜಾರಿ ನಿರ್ದೇಶನಾಲಯ (ED) ಕೈಗೊಂಡಿರುವ ಶೋಧ ಮತ್ತು ಜಪ್ತಿ ಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಜೂನ್ 23 ರಂದು ಬೆಂಗಳೂರು, ಗೋವಾ ಹಾಗೂ ಬೆಳಗಾವಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ED ಅಧಿಕಾರಿಗಳು ನಡೆಸಿದ ಶೋಧ ಮತ್ತು ಜಪ್ತಿ ಕ್ರಮವನ್ನು ಪ್ರಶ್ನಿಸಿ ಡಾ. ಮಂಜುನಾಥ್ ಹಾಗೂ ಅವರ ಸಂಬಂಧಿಕರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ನಡೆಸಿತು.

ವಿಚಾರಣೆ ವೇಳೆ, "ED ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಂಸ್ಥೆಯಾಗಿರಬಹುದು. ಆದರೆ ಅದರ ಎಲ್ಲಾ ಕ್ರಮಗಳು ಕಾನೂನಿನ ಚೌಕಟ್ಟಿನಲ್ಲೇ ಇರಬೇಕು. ಕಾನೂನು ಬದ್ಧವಾಗಿ ಕ್ರಮ ಕೈಗೊಂಡರೆ ಯಾವುದೇ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗೆ ED ಯಾವುದೇ ಮುಂದಿನ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದ್ದು, ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ನಡೆದ ವಿಚಾರಣೆಯಲ್ಲಿ, "ಹಣ ವರ್ಗಾವಣೆಯ ಸ್ಪಷ್ಟ ಸಂಪರ್ಕ ಇರಬೇಕು. ಸಂಬಂಧವೇ ಇಲ್ಲದ ವ್ಯಕ್ತಿಗಳನ್ನು ಸುಲಭವಾಗಿ ಪ್ರಕರಣಕ್ಕೆ ಎಳೆಯಲು ಸಾಧ್ಯವಿಲ್ಲ. ಯಾರ ಮನೆಯನ್ನಾದರೂ ಶೋಧಿಸಬಹುದು, ಆದರೆ ಅದಕ್ಕೆ ಅಪರಾಧದೊಂದಿಗೆ ನೇರ ಸಂಬಂಧ ಇರಬೇಕು. ಆರೋಪಿಯಾಗಿರಬೇಕು ಅಥವಾ ಹಣದ ವ್ಯವಹಾರದ ಸಂಪರ್ಕ ಇರಬೇಕು" ಎಂದು ನ್ಯಾಯಪೀಠ EDಗೆ ಪ್ರಶ್ನೆಗಳನ್ನು ಎತ್ತಿತ್ತು.

ಇದೇ ವೇಳೆ, ₹25 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವ ವ್ಯಕ್ತಿಯ ವಿರುದ್ಧ ED ಕ್ರಮ ಕೈಗೊಳ್ಳಬಹುದು. ಆದರೆ ಆ ಪ್ರಕರಣಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಲು ಯಾವ ಆಧಾರ? ಎಂದು ಹೈಕೋರ್ಟ್ ಪ್ರಶ್ನಿಸಿ, ತನಿಖೆಯ ಕಾನೂನುಬದ್ಧತೆ ಕುರಿತು ಸ್ಪಷ್ಟನೆ ಕೋರಿತು.

ED ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಅರ್ಜಿದಾರರು: ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದ ವಾದ

ಹೈಕೋರ್ಟ್ ನಲ್ಲಿ ಅರ್ಜಿದಾರರ ಪರ ವಕೀಲರು, ಈ ಪ್ರಕರಣದಲ್ಲಿ ತಮ್ಮ ಕಕ್ಷಿದಾರರ ವಿರುದ್ಧ ಯಾವುದೇ ಅಪರಾಧದ ಪೂರ್ವಾಪರ ಇಲ್ಲ ಎಂದು ವಾದಿಸಿದರು. ಜಾರಿ ನಿರ್ದೇಶನಾಲಯ ಹೊರಡಿಸಿರುವ ಪತ್ರಿಕಾ ಪ್ರಕಟಣೆಯು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (PMLA) ವ್ಯಾಪ್ತಿಗೆ ಬರುವುದಿಲ್ಲ. ಆದರೂ ಅರ್ಜಿದಾರರ ಮನೆ ಮತ್ತು ಕಚೇರಿಗಳಲ್ಲಿ ಶೋಧ ಹಾಗೂ ಜಪ್ತಿ ನಡೆಸಲಾಗಿದೆ ಹೀಗಾಗಿ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಮಧ್ಯಂತರ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ ED ಪರ ವಕೀಲರು, ತನಿಖೆ ವೇಳೆ ದೊರೆತ ಮಾಹಿತಿಯ ಆಧಾರದ ಮೇಲೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ವಾದಿಸಿದರು. ಪ್ರಕರಣದ ಸಂಪೂರ್ಣ ವಿವರಗಳನ್ನು ಸಲ್ಲಿಸಲು ಕಾಲಾವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದರು.

ಅರ್ಜಿಯಲ್ಲಿ ಏನಿದೆ?

ಅರ್ಜಿದಾರರು, ತಮ್ಮ ವಿರುದ್ಧ ಯಾವುದೇ ನಿಗದಿತ (Scheduled) ಅಪರಾಧ ದಾಖಲಾಗಿಲ್ಲ, ಆದರೂ PMLA ಸೆಕ್ಷನ್ 17 ಅಡಿ ಶೋಧ ಮತ್ತು ಜಪ್ತಿ ಪ್ರಕ್ರಿಯೆ ಆರಂಭಿಸುವುದು, ಕಾನೂನುಬಾಹಿರವಾಗಿದೆ. ಹೀಗಾಗಿ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.

ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, ಜಗದೀಶ್ ನಾಯಕ್ ಎಂಬ ವ್ಯಕ್ತಿ ₹ 25 ಲಕ್ಷ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್ 7A ಅಡಿ ಪ್ರಕರಣ ದಾಖಲಾಗಿದೆ. ಆದರೆ ಆ ಪ್ರಕರಣದಲ್ಲಿ ತಾವು ಆರೋಪಿಗಳು ಅಲ್ಲ, ಯಾವುದೇ ರೀತಿಯ ಸಂಬಂಧವು ಇಲ್ಲ, ಇಂತಹ ಪರಿಸ್ಥಿತಿಯಲ್ಲಿಯೂ ತಮ್ಮ ವಿರುದ್ಧ ED ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವುದು ಕಾನೂನುಸಮ್ಮತವಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online