belagvi news :
ಬೆಂಗಳೂರು: ಫಿಫಾ ವಿಶ್ವಕಪ್ ಫೈನಲ್ ಗೆ ಹೋಟೆಲ್ ಗಳಿಗೆ ರಾತ್ರಿ 3:30ರವರೆಗೆ ವಿಶೇಷ ಅನುಮತಿ; ಅಭಿಮಾನಿಗಳಿಗೆ ಸಿಎಂ ಡಿಕೆಶಿ ಮನವಿ
ಬೆಂಗಳೂರು ಫುಟ್ಬಾಲ್ ಅಭಿಮಾನಿಗಳ ಬಹುನಿರೀಕ್ಷಿತ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್ಲಾ ಯುವಕರ ಮನವಿ ಹಾಗೂ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಇಂದು ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ಬೆಂಗಳೂರಿನ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳಿಗೆ ಬೆಳಗಿನಜಾವ 3:30 ರವರೆಗೆ ಕಾರ್ಯನಿರ್ವಹಿಸಲು ವಿಶೇಷ ಅನುಮತಿ ನೀಡಲಾಗಿದೆ.
ವಿಧಾನಸೌಧದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ), ಫುಟ್ಬಾಲ್ ಅಭಿಮಾನಿಗಳು ಶಾಂತಿ, ಸಂಯಮ ಮತ್ತು ಕ್ರೀಡಾಸ್ಪೂರ್ತಿಯಿಂದ ಪಂದ್ಯ ವೀಕ್ಷಿಸಬೇಕು ಎಂದು ಮನವಿ ಮಾಡಿದರು.
" ನಗರದಾದ್ಯಂತ ಪೊಲೀಸರು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಪ್ರಮುಖ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಯಾವುದೇ ತಂಡ ಗೆದ್ದರೂ ಅಥವಾ ಸೋತರೂ ಯುವಕರು ತಾಳ್ಮೆ ಕಳೆದುಕೊಳ್ಳದೆ ಸಂಭ್ರಮ ಆಚರಿಸಬೇಕು. ಸಾರ್ವಜನಿಕ ಶಾಂತಿ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ," ಎಂದು ಸಿಎಂ ಹೇಳಿದರು.
ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆ ಇರುವುದರಿಂದ, ಸಾರ್ವಜನಿಕರು ಪೋಲಿಸ್ ಇಲಾಖೆಯ ಸೂಚನೆಗಳನ್ನು ಪಾಲಿಸಿ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಜವಾಬ್ದಾರಿಯುತವಾಗಿ ವರ್ತಿಸುವಂತೆ ಸರ್ಕಾರ ಮನವಿ ಮಾಡಿದೆ.
ಸಚಿವರು, ಜಿಲ್ಲಾಧಿಕಾರಿಗಳಿಗೆ ಭಾನುವಾರ ರಜೆ ಇಲ್ಲ; ಬರಗಾಲಕ್ಕೆ 24×7 ಸಿದ್ಧತೆ -ಸಿಎಂ ಡಿಕೆಶಿ
ರಾಜ್ಯದಲ್ಲಿ ಸಂಭವನೀಯ ಬರಗಾಲ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಭಾನುವಾರ ಸೇರಿದಂತೆ ಯಾವುದೇ ದಿನ ರಜೆ ಎನ್ನುವುದಿಲ್ಲ. ಜನರ ಹಿತ ದೃಷ್ಟಿಯಿಂದ 24 ಗಂಟೆಯೂ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, " ನಮಗೆ, ನಿಮಗೆ ಭಾನುವಾರ ರಜೆ ಇರಬಹುದು. ಆದರೆ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಭಾನುವಾರ ಎಂಬುದಿಲ್ಲ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು 24 ಗಂಟೆಯೂ ಕೆಲಸ ಮಾಡಬೇಕಾಗಿದೆ" ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರಗಾಲಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿಗಳು (DC) ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEO) ಅವರೊಂದಿಗೆ ವಿಡಿಯೋ ಸಂವಾದ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರತಿ ತಾಲ್ಲೂಕಿಗೆ ಕುಡಿಯುವ ನೀರಿಗಾಗಿ ₹1 ಕೋಟಿ
ಬೇಸಿಗೆ ಹಾಗೂ ನೀರಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ₹1 ಕೋಟಿ ಅನುದಾನ ಬಿಡುಗಡೆ ಮಾಡುವ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು. ಅಗತ್ಯವಿರುವ ಎಲ್ಲೆಡೆ ತುರ್ತು ಕ್ರಮಗಳನ್ನು ಕೈಗೊಂಡು ಜನರಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.