BELAGAVI NEWS :
ಮೋಹನ್ ಭಾಗವತ್ ಅವರು, ಸಹೋದರರನ್ನು ಶತಮಾನಗಳ ಕಾಲ ಅಸ್ಪೃಶ್ಯರಾಗಿ ದೂರ ಬಿಡಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಮೇಲು ಕೀಳು ಎಂಬ ಭಾವನೆ ನಿವಾರಣೆಯಾಗಬೇಕು ಮತ್ತು ಎಲ್ಲರೂ ಒಂದೇ ಎಂಬ ಏಕಭಾವ ಭಾರತೀಯರಲ್ಲಿ ಬೆಳೆಬೇಕಿದೆ ಎಂದು ಅವರು ಹೇಳಿದರು. ಚಾಮುಂಡಿ ಬೆಟ್ಟದ ತಪ್ಪಲಿನ ಜೆಎಸ್ಎಸ್ ಮಹಾ ವಿದ್ಯಾಪೀಠ ವತಿಯಿಂದ ಗುರುವಾರ ಆಯೋಜಿಸಲಾದ ಸುವರ್ಣ ಮಹೋತ್ಸವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ'ರಾಷ್ಟ್ರೀಯ ಅಭಿವೃದ್ಧಿಗೆ ಸಾಮಾಜಿಕ ಸೌಹಾರ್ದತೆ ಪ್ರೇರಕ'ವಿಷಯದ ಕುರಿತು ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯ ಮಹತ್ವವನ್ನು ಒತ್ತಿ ಹೇಳಿದರು.
ಅದೇ ವೇಳೆ ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಭಾಷಣಗಳನ್ನು ಮರು ಓದಬೇಕಿದೆ ಎಂದ ಅವರು, ಸಾಮಾಜಿಕ ಸ್ವಾತಂತ್ರ್ಯ ಸ್ಥಾಪನೆ ಯಾಗದೆ ರಾಜಕೀಯ ಹಾಗೂ ಆರ್ಥಿಕ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದರು ಎಂದು ನೆನಪಿಸಿದ್ದರು. ಸಂವಿಧಾನದಲ್ಲಿ ಉಲ್ಲೇಖಿಸಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಪರಿಕಲ್ಪನೆಗಳು French revolution ಯಿಂದ ಪಡೆದದ್ದಲ್ಲ; ಅವು ಭಾರತದ ಮೌಲ್ಯಗಳೇ ಆಗಿದ್ದು, ಗೌತಮ ಬುದ್ಧ ನೀಡಿದ ಸಂದೇಶಗಳೇ ಎಂದು ಅವರು ಹೇಳಿದರು.
ಮೋಹನ್ ಭಾಗವತ್ ಅವರು, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಮಾಜ ಒಂದು ಸಾಮಾಜಿಕ ಒಪ್ಪಂದದಂತಿದ್ದು, ಪರಸ್ಪರ ಲಾಭವಿದ್ದರೆ ಮಾತ್ರ ಸಂಬಂಧಗಳು ಉಳಿಯುತ್ತವೆ ಎಂದು ಹೇಳಿದರು. ಆದರೆ ಭಾರತೀಯ ದೃಷ್ಟಿಕೋನದಲ್ಲಿ ಸಮಾಜ ಎಂದರೆ ಐಕ್ಯತೆ ಮತ್ತು ಎಲ್ಲರೂ ಒಂದೇ ಎಂಬ ಭಾವನೆ. ಸಾವಿರಾರು ವರ್ಷಗಳಿಂದ ಒಟ್ಟಾಗಿ ಬದುಕಿದ ಜನರ ನಡುವೆ ಬೆಳೆದಿರುವ ಸ್ವಾಭಾವಿಕ ಆತ್ಮೀಯತೆ ಭಾರತೀಯ ಸಾಮಾಜಿಕ ವೈಶಿಷ್ಟ್ಯ ಎಂದು ಅವರು ವಿವರಿಸಿದರು.
ಲಾಭಕ್ಕಿಂತಲೂ" ನಾವು ಎಲ್ಲರೂ ಒಂದೇ"ಎಂಬ ಭಾವನೆಗೆ ಭಾರತದಲ್ಲಿ ಹೆಚ್ಚಿನ ಮಹತ್ವವಿದೆ ಎಂದು ತಿಳಿಸಿದವರು, ದಯೆ ಇರುವಲ್ಲಿ ಧರ್ಮ ವಿರುತ್ತದೆ ಎಂದು ಹೇಳಿದರು. ಆಶ್ರಯಕ್ಕಾಗಿ ಬಂದ ಹಕ್ಕಿಯನ್ನು ರಕ್ಷಿಸಲು ತನ್ನದೇ ದೇಹವನ್ನು ಅರ್ಪಿಸಿದ ಶಿಬಿ ಚಕ್ರವರ್ತಿ ಅವರ ತ್ಯಾಗ ಮತ್ತು ಕರುಣೆಯ ಉದಾಹರಣೆಯನ್ನು ಉಲ್ಲೇಖಿಸಿ, ತ್ಯಾಗ, ದಯೆ ಮತ್ತು ಕರುಣೆಯಲ್ಲಿಯೇ ನಿಜವಾದ ಸೌಹಾರ್ದತೆ ಅಡಕವಾಗಿದೆ ಎಂದು ಹೇಳಿದರು.
ಸಮಾಜವು ದೇಶದತ್ತ ನಿಷ್ಠೆಯಿಂದ ಇದ್ದರೆ ಅಭಿವೃದ್ಧಿ ಸಹಜವಾಗಿ ಸಾಧ್ಯವಾಗುತ್ತದೆ. ಧರ್ಮವಿರುವಲ್ಲಿ ಸಂತೋಷ್ ಮತ್ತು ಸಮೃದ್ಧಿ ನಿಲ್ಲಿಸುತ್ತದೆ; ಅದು ದುಃಖವನ್ನು ನೀಡುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ವೈವಿದ್ಯತೆ ಪ್ರತಿಯೊಬ್ಬರಲ್ಲಿಯೂ ಸಹಜವಾಗಿಯೇ ಇದೆ. ಆದರೆ ಅದು ಪರಸ್ಪರ ದೂರವಾಗಲು ಕಾರಣವಾಗಬಹುದು ಸಮಾನತೆ ನೆಲೆಸಬೇಕಾದರೆ ತಮ್ಮ ಮನಸ್ಸಿನೊಳಗಿನ ಬೇದಬಾವದ ಕಲ್ಮಶವನ್ನು ದೂರ ಮಾಡಬೇಕು ಎಂದು ಅವರು ಕರೆ ನೀಡಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು, ಸತ್ಯಸಾಯಿ ಆಶ್ರಯದ ಮಧುಸೂದನ್ ಸಾಯಿ ಕಳೆದ ವರ್ಷ ನೀಡಿದ 14ನೇ ‘ಉಪನ್ಯಾಸದ ಆತ್ಮನೋ ಮೋಕ್ಷಂ ಜಗತ್ ಹಿತಾಚಯ' ಕೃತಿಯನ್ನು ಬಿಡುಗಡೆ ಮಾಡಿದರು. ಗಾಯಕಿಯರಾದ ಕೆ ಜಿ ವಿನುತ ಮತ್ತು ಅಮೂಲ್ಯ ಅವರು, ಪುರುಷೋತ್ತಮ್ ಹಾಗೂ ಎಸ್ ನಾಗರಾಜ್ ಅವರ ಪಕ್ಕ ವಾದ್ಯದ ಸಾಂಗತ್ಯದಲ್ಲಿ ವಚನಗಾನ ಕಾರ್ಯಕ್ರಮ ನಡೆಸಿಕೊಟ್ಟರು. ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಸುಮಾ ಕುಲಪತಿ ಬಿ ಸುರೇಶ್ ಸ್ವಾಗತಿಸಿದರು. ಬಳಿಕ ಜೆಎಸ್ಎಸ್ ಕಾನೂನು ಕಾಲೇಜ್ ಕಾರ್ಯಕಾರಿ ಮುಖ್ಯಸ್ಥ ಕೆ. ಎಸ್. ಸುರೇಶ್ ಉಪನ್ಯಾಸದ ಕಾರ್ಯಕ್ರಮ ನಡೆಸಿಕೊಟ್ಟರು.
ಮೋಹನ್ ಭಾಗವತ್ ಅವರು, ಕೆಲವೇ ಕೆಲವು ಶ್ರೀಮಂತ ವ್ಯಕ್ತಿಗಳ ಏಳಿಗೆಯಿಂದ ದೇಶ ಅಭಿವೃದ್ಧಿಯಾಗಿದೆ ಎಂದು ಹೇಳಲಾಗುವುದಿಲ್ಲ ಎಂಬ ಅಭಿಪ್ರಾಯ ಪಟ್ಟರು. ದೇಹದ ಒಂದು ಭಾಗ ಪಾರ್ಶ್ವವಾಯುವಿಗೆ ಒಳಗಾದರೆ ಇಡೀ ದೇಹ ಅನಾರೋಗ್ಯವಾಗಿದೆ ಎಂದು ಹೇಳಲು ಸಾಧ್ಯವಿಲ್ಲದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಅಭಿವೃದ್ಧಿಯ ತಲುಪದಿದ್ದರೆ ಅದು ನಿಜವಾದ ಅಭಿವೃದ್ಧಿಯಲ್ಲ ಎಂದು ಅವರು ಹೇಳಿದರು.
ಸಮಾಜದ ಪ್ರತಿಯೊಬ್ಬರು ಸಾಮರಸ್ಯ ಮತ್ತು ಸೌಹಾರ್ದ ದಿಂದ "ನಾವೆಲ್ಲರೂ ಒಂದೇ"ಎಂಬ ಭಾವನೆಯೊಂದಿಗೆ ಬದುಕಿದಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ. ಎಂದು ಅವರು ತಿಳಿಸಿದರು.
ಸಮಾಜದಲ್ಲಿ ಸಮಾಜದಲ್ಲಿ ಸಾಮರಸ್ಯ ಬೆಳೆಯಲು ವಿವಿಧ ಜಾತಿ, ಹಾಗೂ ಭಾಷೆಯ ಜನರ ಮನೆಗಳಿಗೆ ಭೇಟಿ ನೀಡಿದ ಪರಸ್ಪರ ಸ್ನೇಹ ಬೆಳೆಸಬೇಕು. ದುರ್ಬಲ ವರ್ಗಗಳ ಉದ್ಧಾರಕ್ಕಾಗಿ ಎಲ್ಲರೂ ಒಂದುಗೂಡಿ ಶ್ರಮಿಸಬೇಕಾಗಿದೆ ಎಂದು ಅವರು ಕರೆ ನೀಡಿದರು. ಕಟು ನುಡಿಗಳನ್ನು ತೊರೆದು, ಸತ್ಯ ಮತ್ತು ಪ್ರೀತಿಯಿಂದ ಸಂವಹನ ನಡೆಸುವ ಮೂಲಕ ಸಮಾಜದಲ್ಲಿನ ವಿಕಾರಗಳು ಮತ್ತು ಭೇದ ಭಾವಗಳನ್ನು ದೂರ ಮಾಡಬಹುದು ಎಂದು ಅವರು ಹೇಳಿದರು.
Also Read:
MGNREGA Issue: ಕೇಂದ್ರ ಸರ್ಕಾರ ವಿರುದ್ಧ ಸುಪ್ರೀಂ ಕೋರ್ಟ್ ಗೆ ರಾಜ್ಯದ ದೂರು