BELAGVI NEWS :
ಬೆಳಗಾವಿ: ಕಳೆದೊಂದು ವಾರದಿಂದ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗುತ್ತಿದ್ದು, ಒಣಗುವ ಆತಂಕದಲ್ಲಿದ್ದ ಬೆಳೆಗಳಿಗೆ ಮಳೆ ಜೀವ ತುಂಬಿದೆ. ಇದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಂದೂ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಖಾನಾಪುರ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಬೆಳಗಾವಿ ಜಿಲ್ಲೆಯ ಸಪ್ತನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಗೋಕಾಕ್ ನಗರ ಮತ್ತು ಶಿಂಗಳಾಪುರ ಗ್ರಾಮದ ನಡುವಿನ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಮ್ ಬ್ಯಾರೇಜ್ ಮುಳುಗಡೆಯಾಗಿದ್ದು ಸ್ಥಳೀಯರು ಪರ್ಯಾಯ ಮಾರ್ಗಗಳನ್ನು ಬಳಸುತ್ತಿದ್ದಾರೆ.
ಗೋಕಾಕ್ ಫಾಲ್ಸ್ ಗೆ ಮರುಕಳೆ
ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಘಟಪ್ರಭಾ ನದಿ ಮೈದುಂಬಿ ಹರಿಯುತ್ತಿದೆ, ಪ್ರಸಿದ್ಧ ಗೋಕಾಕ್ ಫಾಲ್ಸ್ ನಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಸುಮಾರು 171 ಅಡಿ ಎತ್ತರದಿಂದ ಹಾಲಿನ ನೊರೆಯಂತೆ ನೀರು ಧುಮ್ಮಿಕ್ಕಿ ಬೀಳುತ್ತಿದೆ. ಜಲಪಾತದ ರುದ್ರರಮಣೀಯ ದೃಶ್ಯ ನಿಸರ್ಗಪ್ರಿಯರನ್ನು ಸೆಳೆಯುತ್ತಿದ್ದು, ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ರಾಕಸಕೊಪ್ಪ ಜಲಾಶಯ ಭರ್ತಿಯತ್ತ
ಬೆಳಗಾವಿಯ ಜೀವನಾಡಿಯಾಗಿರುವ ರಾಕಸಕೊಪ್ಪ ಜಲಾಶಯಕ್ಕೆ ಮಾರ್ಕಂಡೇಯ ನದಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯ ಭರ್ತಿಯ ಹಂತ ತಲುಪಿದೆ. 2,475.50 ಅಡಿ (0.5 ಟಿಎಂಸಿ) ಸಾಮರ್ಥ್ಯದ ಜಲಾಶಯದಲ್ಲಿ ಬುಧವಾರ ಮಧ್ಯಾಹ್ನದ ವೇಳೆಗೆ 2,473.80 ಅಡಿ ನೀರು ಸಂಗ್ರಹವಾಗಿತ್ತು. ಭರ್ತಿಯಾಗಲು ಕೇವಲ 1.70 ಅಡಿ ಬಾಕಿ ಉಳಿದಿದೆ.
ಪಶ್ಚಿಮಘಟ್ಟದಲ್ಲಿ ಮುಂದುವರಿದ ಮಳೆಯಿಂದ ಜಲಾಶಯದ ಆರು ಗೇಟ್ ಗಳ ಪೈಕಿ ಎರಡು ಗೇಟ್ ಗಳನ್ನು ತೆರೆದು ಹೆಚ್ಚುವರಿ ನೀರನ್ನು ಮಾರ್ಕಂಡೇಯ ನದಿಗೆ ಹರಿಸಲಾಗಿದೆ. ಕೆಲವೇ ವಾರಗಳ ಹಿಂದೆ ಡೆಡ್ ಸ್ಟೋರೇಜ್ ಹಂತ ತಲುಪಿದ್ದ ಜಲಾಶಯ ಇದೀಗ ಭರ್ತಿಯಾಗುತ್ತಿರುವುದರಿಂದ ಬೆಳಗಾವಿ ನಗರದ ಕುಡಿಯುವ ನೀರಿನ ಆತಂಕ ದೂರವಾಗಿದೆ.
ಇತರೆ ಜಲಾಶಯಗಳ ನೀರಿನ ಮಟ್ಟ
ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿಯ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರಾಜಾಲಖಮಗೌಡ ಜಲಾಶಯದಲ್ಲಿ 32.87 ಟಿಎಂಸಿ ನೀರು ಸಂಗ್ರಹವಾಗಿದೆ. 16,872 ಕ್ಯೂಸೆಕ್ ಒಳಹರಿವು ಇದ್ದು, 1,555 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.
ಮುನವಳ್ಳಿ ಬಳಿಯ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನವಿಲುತೀರ್ಥ ಜಲಾಶಯದಲ್ಲಿ 15.35 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 2,536 ಕ್ಯೂಸೆಕ್ ಒಳಹರಿವು ಇದ್ದರೆ 1,194 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಸತತ ಮಳೆಯಿಂದ ಬೆಳಗಾವಿ ಜಿಲ್ಲೆಯ ನದಿಗಳು ಜಲಾಶಯಗಳು ಹಾಗೂ ಜಲಪಾತಗಳು ಮತ್ತು ವೈಭವ ಪಡೆದುಕೊಂಡಿದ್ದು ಜನರಲ್ಲಿ ಸಂತಸ ಮೂಡಿಸಿದೆ.