Belagavi News:
ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿಯ ಉಚಿತ ವಿದ್ಯುತ್ ಯೋಜನೆಯಾದ "ಗೃಹಜ್ಯೋತಿ" ಫಲಾನುಭವಿಗಳ ಮನೆಗಳಿಗೆ ಎಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುವ ಪ್ರಕ್ರಿಯೆ ಆರಂಭವಾಗಿದೆ. ಈ ಬೆಳವಣಿಗೆಯ ನಡುವೆ ಹೊಸ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ವೇದಿಕೆ ಸಿದ್ಧವಾಗಿದೆ.
ಗೃಹ ಜ್ಯೋತಿ ಯೋಜನೆಯ ಪರಿಶೀಲನೆ ವೇಳೆ ಫಲಾನುಭವಿಗಳಿಂದ ಎಪಿಕ್ (EPIC) ಸಂಖ್ಯೆ ಅಥವಾ ಮತದಾರರ ಗುರುತಿನ ಚೀಟಿ (Voter ID) ವಿವರಗಳನ್ನು ಪಡೆಯಲಾಗುತ್ತಿರುವುದು ಗಮನ ಸೆಳೆದಿದೆ. ಸಾಮಾನ್ಯವಾಗಿ ಈ ಯೋಜನೆಗೆ ಮತದಾರರ ಗುರುತಿನ ಚೀಟಿ ಕಡ್ಡಾಯ ದಾಖಲೆ ಅಲ್ಲ ಎಂಬ ಕಾರಣದಿಂದ, ಇದೆ ಸಮಯದಲ್ಲಿ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಇದರ ಜೊತೆಗೆ ಫಲಾನುಭವಿಗಳ ಜಾತಿ ಮತ್ತು ಪ್ರವರ್ಗಗಳಾದ ಎಸ್ ಸಿ, ಎಸ್ ಟಿ, ಒಬಿಸಿ ಹಾಗು ಅಲ್ಪಸಂಖ್ಯಾತರ ವಿವರಗಳನ್ನು ನವೀಕರಿಸಲಾಗುತ್ತಿದೆ. ಈ ಬೆಳವಣಿಗೆಯಿಂದ ಸರ್ಕಾರದ ಉದ್ದೇಶದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿದ್ದು, ಇದು ಕೇವಲ ಯೋಜನೆಯ ಫಲಾನುಭವಿಗಳ ಮಾಹಿತಿಯ ಪರಿಶೀಲನೆಯೇ ಅಥವಾ ಮತದಾರ ಮಾಹಿತಿಯ ಸಂಗ್ರಹಕ್ಕೂ ಸಂಬಂಧಿಸಿದ್ದೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಆದರೆ ಈ ಕುರಿತು ಸರ್ಕಾರ ಅಥವಾ ಸಂಬಂಧಿತ ಇಲಾಖೆಯಿಂದ ಅಧಿಕೃತ ಸ್ಪಷ್ಟನೆಗಾಗಿ ನಿರೀಕ್ಷೆ ಮುಂದುವರಿದಿದೆ. ಅಧಿಕೃತ ಮಾಹಿತಿ ಹೊರಬರುವವರಿಗೆ ಈ ಕುರಿತು ಹರಿದಾಡುತ್ತಿರುವ ಹೇಳಿಕೆಗಳು ಮತ್ತು ಊಹಾಪೋಹಗಳನ್ನು ಎಚ್ಚರಿಕೆಯಿಂದ ಪರಿಗಣಿಸುವುದು ಸೂಕ್ತ.
ಮುಖ್ಯಾಂಶಗಳು:
• ಗೃಹ ಜ್ಯೋತಿಗೆ ವೋಟರ್ ಐಡಿ ಕಡ್ಡಾಯ
• ಫಲಾನುಭವಿಗಳ ಜಾತಿ ವಿವರ ಸಂಗ್ರಹ
• ಐಟಿ ಪಾವತಿದಾರರಿಗೆ ಯೋಜನೆ ಕಟ್
ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಂದ ಎಪಿಕ್ ( ಮತದಾರರ ಗುರುತಿನ ಚೀಟಿ) ಸಂಖ್ಯೆ ಮತ್ತು ಜಾತಿ ವಿವರಗಳನ್ನು ಸಂಗ್ರಹಿಸಲು ಸರ್ಕಾರ ಮುಂದಾಗಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಚುನಾವಣಾ ಆಯೋಗದ 'ಎಸ್ಐಆರ್' ಪ್ರಕ್ರಿಯೆ ನಡುವೆ ಈ ಕ್ರಮ ಕೈಗೊಳ್ಳಲಾಗಿರುವುದರಿಂದ, ಇದು ಅದಕ್ಕೆ ಪ್ರತಿತಂತ್ರವೇ ಎಂಬ ಪ್ರಶ್ನೆಯು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಆದರೆ, ಈ ಮಾಹಿತಿ ಸಂಗ್ರಹಣೆಯಿಂದ ಸರ್ಕಾರಕ್ಕೆ ಏನು ಲಾಭವಾಗಬಹುದು ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಎಪಿಕ್ ಕಾರ್ಡ್ ಮಾಹಿತಿಯಿಂದ ಯೋಜನೆಗಳ ಫಲಾನುಭವಿಗಳ ವಿವರಗಳನ್ನು ಮತದಾರ ಪಟ್ಟಿಯೊಂದಿಗೆ ಹೋಲಿಕೆ ಮಾಡುವ ಸಾಧ್ಯತೆ ಉಂಟಾಗಬಹುದು. ಅದೇ ವೇಳೆ, ಜಾತಿ ಮಾಹಿತಿಯ ಸಂಗ್ರಹಣೆಯಿಂದ ವಿವಿಧ ಸಮುದಾಯಗಳಿಗೆ ಸರ್ಕಾರದ ಕಲ್ಯಾಣ ಯೋಜನೆಗಳು ಎಷ್ಟು ತಲುಪಿವೆ ಎಂಬುದನ್ನು ವಿಶ್ಲೇಷಿಸಲು ಸಹ ನೆರವಾಗಬಹುದು.
ಮತದಾರರ ಅಧಿಕೃತ ದತ್ತಾಂಶ ಕ್ರೋಢೀಕರಣ ತಂತ್ರವೇ?
ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಂದ ಎಪಿಕ್ ( ಮತದಾರರ ಗುರುತಿನ ಚೀಟಿ) ಸಂಖ್ಯೆ ಸಂಗ್ರಹಿಸುವ ಸರ್ಕಾರದ ಕ್ರಮದ ಹಿಂದೆ ಮತ್ತೊಂದು ತಂತ್ರ ಅಡಗಿದೇಯೇ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಮೂಲಗಳ ಪ್ರಕಾರ, ಚುನಾವಣಾ ಆಯೋಗದ ಬಳಿ ಇರುವ ಮತದಾರರ ಅಧಿಕೃತ ದತ್ತಾಂಶವನ್ನು ಸರ್ಕಾರವು ಕ್ರೋಢೀಕರಿಸಿಕೊಳ್ಳುವ ಉದ್ದೇಶ ಇದಾಗಿರಬಹುದು ಎನ್ನಲಾಗುತ್ತಿದೆ ಇದರ ಮೂಲಕ ರಾಜ್ಯದಲ್ಲಿರುವ ನೈಜ ಮತದಾರರು ಕುರಿತು ಸರ್ಕಾರಕ್ಕೆ ಸಮಗ್ರ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.
ಇದೇ ವೇಳೆ, ರಾಜ್ಯದಲ್ಲಿ ಚುನಾವಣಾ ಆಯೋಗದ 'ಎಸ್ಐಆರ್' ( ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆ, ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡದಂತೆ ಯೋಜನೆಗಳ ಫಲಾನುಭವಿಗಳು ಎಚ್ಚೆತ್ತುಕೊಳ್ಳಬೇಕು ಹಾಗೂ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂಬ ಉದ್ದೇಶವೂ ಇದರ ಹಿಂದಿರಬಹುದು ಎಂಬ ಚರ್ಚೆ ಕೇಳಿಬರುತ್ತಿದೆ.
ಆದರೆ, ಈ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಸ್ಪಷ್ಟೀಕರಣ ಹೊರಬಂದಿಲ್ಲ. ಹೀಗಾಗಿ ಈ ಎಲ್ಲಾ ಅಂಶಗಳು ಸದ್ಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ವಿಶ್ಲೇಷಣೆ ಮತ್ತು ಚರ್ಚೆಗಳಾಗಿದ್ದು, ಅಧಿಕೃತ ಮಾಹಿತಿ ಹೊರಬಂದ ಬಳಿಕವೇ ನಿಖರ ಚಿತ್ರಣ ಸ್ಪಷ್ಟವಾಗಲಿದೆ.
ಹೊರ ರಾಜ್ಯದವರೆಗೆ ಸಿಗಲ್ಲ ಗ್ಯಾರಂಟಿ?
ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಸಮೀಕ್ಷೆ ಮತ್ತು ಎಪಿಕ್ (ಮತದಾರರ ಗುರುತಿನ ಚೀಟಿ) ಸೇರಿದಂತೆ ವಿವಿಧ ವಿವರಗಳ ಸಂಗ್ರಹದ ಹಿಂದೆ ಮತ್ತೊಂದು ಗಂಭೀರ ಉದ್ದೇಶವಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರ ಗೊಂಡಿದೆ.
ಈ ಪರಿಶೀಲನೆಯ ಮೂಲಕ ಕರ್ನಾಟಕದ ಮೂಲ ಮತದಾರರಲ್ಲದವರು ಹಾಗೂ ಹೊರರಾಜ್ಯದವರು ಯೋಜನೆಯ ಲಾಭದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೊತೆಗೆ, ಆದಾಯ ತೆರಿಗೆ ಪಾವತಿಸುತ್ತಿರುವ ಉನ್ನತ ಆದಾಯ ವರ್ಗದವರನ್ನು ಗುರುತಿಸಿ, ಅಂತಹವರಿಗೆ ಗೃಹ ಜ್ಯೋತಿ ಯೋಜನೆಯ ಸೌಲಭ್ಯವನ್ನು ಕಡಿತಗೊಳಿಸುವ ಕ್ರಮಕ್ಕೂ ಈ ದತ್ತಾಂಶ ಉಪಯೋಗವಾಗಬಹುದು ಎನ್ನುವ ಅಭಿಪ್ರಾಯವು ವ್ಯಕ್ತವಾಗಿದೆ.
ಉಚಿತ ವಿದ್ಯುತ್ ಯೋಜನೆ ಹೆಸರಿನಲ್ಲಿ ನಡೆಯುತ್ತಿರುವ ಈ ಹಠಾತ್ ಮಾಹಿತಿ ಸಂಗ್ರಹವು, ಜಾತಿ ಮತ್ತು ಮತದಾರರ ವಿವರಗಳ ಆಧಾರದ ಮೇಲೆ ಹೊಸ ನಿಯಂತ್ರಣ ವ್ಯವಸ್ಥೆಯತ್ತ ಸರ್ಕಾರ ಸಾಗುತಿದೆ ಎಂಬ ಊಹಾಪೋಹಕ್ಕೂ ಕಾರಣವಾಗಿದೆ.
ಒಟ್ಟಿನಲ್ಲಿ, ಈ ಕ್ರಮ ಮುಂದಿನ ದಿನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ದೊಡ್ಡ ರಾಜಕೀಯ ಚರ್ಚೆ ಹಾಗೂ ಬಿರುಗಾಳಿಗೆ ಕಾರಣವಾಗುವ ಸಾಧ್ಯತೆ ಕಾಣಿಸುತ್ತಿದೆ.