BELAGAVI NEWS :
ಆನ್ಲೈನ್ನಲ್ಲಿ ಆಹಾರ, ದಿನಸಿ ಸಾಮಗ್ರಿಗಳು ಮನೆಬಾಗಿಲಿಗೆ ಬರುವುದು ಸಾಮಾನ್ಯ. ಆದರೆ ಈಗ ರಕ್ತವೂ ರೋಗಿಗಳಿದ್ದಲ್ಲಿಗೇ ತಲುಪುತ್ತಿದೆ! ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ 'ರಕ್ತದೂತ' ಸೇವೆ ಆರಂಭವಾಗಿದ್ದು, ಕೇವಲ ಒಂದು ಕರೆ ಮಾಡಿದರೆ ಸಾಕು ರಕ್ತದ ಪ್ಯಾಕೆಟ್ ನೇರವಾಗಿ ಆಸ್ಪತ್ರೆಗೆ ತಲುಪಿಸಲಾಗುತ್ತಿದೆ.
ಹುಬ್ಬಳ್ಳಿಯ ಶಾ ದಾಮಜಿ ಜಾದವಜಿ ಛೇಡಾ ಮೆಮೊರಿಯಲ್ ರಾಷ್ಟ್ರೋತ್ಥಾನ ರಕ್ತಕೇಂದ್ರ ಕಳೆದ ಆರು ತಿಂಗಳಿನಿಂದ ಈ ವಿನೂತನ ಸೇವೆಯನ್ನು ಯಶಸ್ವಿಯಾಗಿ ನಡೆಸುತ್ತಿದೆ. ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ, ಕ್ಯಾನ್ಸರ್ ಹಾಗೂ ರಕ್ತ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗೆ ತುರ್ತು ರಕ್ತದ ಅವಶ್ಯಕತೆ ಎದುರಾದಾಗ ಸಹಾಯವಾಣಿಗೆ ಕರೆ ಮಾಡಿದರೆ ರೋಗಿ ದಾಖಲಾಗಿರುವ ಆಸ್ಪತ್ರೆಗೆ ಸುರಕ್ಷಿತವಾಗಿ ರಕ್ತ ಪೂರೈಕೆ ಮಾಡಲಾಗುತ್ತಿದೆ.
ರೋಗಿಯ ಆರೈಕೆಗೆ ಒಬ್ಬರೇ ಇದ್ದು, ಅವರನ್ನು ಬಿಟ್ಟು ರಕ್ತ ತರಲು ಸಾಧ್ಯವಾಗದ ಕುಟುಂಬಗಳಿಗೆ ಈ ಸೇವೆ ದೊಡ್ಡ ನೆರವಾಗುತ್ತಿದೆ. ಜೀವ ಉಳಿಸುವ ಉದ್ದೇಶದಿಂದ ಆರಂಭವಾದ 'ರಕ್ತದೂತ' ಸೇವೆ ಇದೀಗ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮಾದರಿಯಾಗಿ ಗುರುತಿಸಿಕೊಂಡಿದ್ದು, ದೇಶದ ಗಮನ ಸೆಳೆಯುತ್ತಿದೆ.
ರಕ್ತದೂತ ಸೇವೆ ಹೇಗೆ? 2025ರ ನ.15ರಂದು 'ರಕ್ತದೂತ' ಹೆಸರಿನಲ್ಲಿ ವಿನೂತನ ಸೇವೆ ಪ್ರಾರಂಭಿಸಿದ್ದು, ರಕ್ತದ ಅವಶ್ಯಕತೆ ಇರುವವರು 9353623822 ಸಂಖ್ಯೆಗೆ ಕರೆ ಮಾಡಿದರೆ ರೋಗಿಗಳು ದಾಖಲಾಗಿರುವ ಆಸ್ಪತ್ರೆಗೆ ಬೈಕ್ನಲ್ಲಿ ಆಗಮಿಸುವ ಸಿಬ್ಬಂದಿ, ರೋಗಿಯ ರಕ್ತದ ಮಾದರಿ ಸಂಗ್ರಹಿಸಿಕೊಂಡು ರಕ್ತ ಕೇಂದ್ರಕ್ಕೆ ತೆರಳಿ, ಅಲ್ಲಿ ರಕ್ತದ ಪರೀಕ್ಷೆ ಮಾಡಿ ಬಳಿಕ ಆಸ್ಪತ್ರೆಗೆ ರಕ್ತದ ಪ್ಯಾಕೆಟ್ ಪೂರೈಸುತ್ತಾರೆ. ಈ ವಾಹನದ ಹಿಂದೆ ಐಸ್ಕ್ಯೂಬ್ಗಳಿರುವ ವಿಶೇಷ ಬಾಕ್ಸ್ ಇರಲಿದೆ. ಇದರಲ್ಲಿಯೇ ರಕ್ತದ ಮಾದರಿ ಹಾಗೂ ರಕ್ತದ ಪ್ಯಾಕೆಟ್ ಸಾಗಿಸಲಾಗುತ್ತದೆ. 6 ತಿಂಗಳಲ್ಲಿ 200ಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಒದಗಿಸಿರುವುದು ವಿಶೇಷ.
ಜೋಮ್ಯಾಟೋ, ಸ್ವಿಗ್ಗಿಯಲ್ಲಿ ಆಹಾರ ಆರ್ಡರ್ ಮಾಡಿದಂತೆ ಈಗ ಒಂದು ಕರೆ ಮಾಡಿದರೆ ರಕ್ತವೂ ಆಸ್ಪತ್ರೆಗೆ ತಲುಪುತ್ತಿದೆ! ದೇಶದಲ್ಲೇ ಮೊದಲ ಬಾರಿಗೆ ಹುಬ್ಬಳ್ಳಿಯ ಶಾ ದಾಮಜಿ ಜಾದವಜಿ ಛೇಡಾ ಮೆಮೊರಿಯಲ್ ರಾಷ್ಟ್ರೋತ್ಥಾನ ರಕ್ತಕೇಂದ್ರ 'ರಕ್ತದೂತ' ಸೇವೆ ಆರಂಭಿಸಿದ್ದು, ಜೀವ ಉಳಿಸುವ ಈ ವಿನೂತನ ಪ್ರಯೋಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ರಕ್ತದ ಪ್ಯಾಕೆಟ್ ಪೂರೈಕೆಗೆ ನಿಗದಿತ ಶುಲ್ಕದ ಜೊತೆಗೆ ಕೇವಲ ₹100 ಹೆಚ್ಚುವರಿ ಸೇವಾ ಶುಲ್ಕ ಮಾತ್ರ ಪಡೆಯಲಾಗುತ್ತಿದೆ. ಈ ಸೇವೆಗೆ ಸ್ವರ್ಣಾ ಗ್ರೂಪ್ನ ಮಾಲೀಕ ವಿಎಸ್ಪಿ ಪ್ರಸಾದ್ ಅವರು ರಕ್ತದೂತ ವಾಹನವನ್ನು ದೇಣಿಗೆಯಾಗಿ ನೀಡುವ ಮೂಲಕ ಬೆಂಬಲ ನೀಡಿದ್ದಾರೆ.
ರಾಷ್ಟ್ರೋತ್ಥಾನ ರಕ್ತಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, "10 ನಿಮಿಷಗಳಲ್ಲಿ ಆಹಾರ ತಲುಪುವ ವ್ಯವಸ್ಥೆ ಇರುವಾಗ, ಜೀವ ಉಳಿಸುವ ರಕ್ತವನ್ನು ಯಾಕೆ ಅದೇ ರೀತಿಯಲ್ಲಿ ತಲುಪಿಸಬಾರದು ಎಂಬ ಆಲೋಚನೆಯಿಂದ ಈ ಸೇವೆ ಆರಂಭಿಸಲಾಯಿತು" ಎಂದು ತಿಳಿಸಿದ್ದಾರೆ.
ತುರ್ತು ಸಂದರ್ಭಗಳಲ್ಲಿ ರೋಗಿಯ ಜೊತೆ ಒಬ್ಬರೇ ಇದ್ದರೆ ರಕ್ತಕ್ಕಾಗಿ ಆಸ್ಪತ್ರೆಯಿಂದ ಹೊರಹೋಗುವುದು ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ನಮ್ಮ ಸಿಬ್ಬಂದಿ ನೇರವಾಗಿ ಆಸ್ಪತ್ರೆಗೆ ತೆರಳಿ ವೈದ್ಯರ ವರದಿ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸುತ್ತಾರೆ. ಬಳಿಕ ರಕ್ತವನ್ನು ಕ್ರಾಸ್ ಮ್ಯಾಚಿಂಗ್ ಮಾಡಿ, ಐಸ್ ಕ್ಯೂಬ್ ಹೊಂದಿರುವ ವಿಶೇಷ ಬಾಕ್ಸ್ನಲ್ಲಿ ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸುತ್ತಾರೆ ಎಂದು ಅವರು ವಿವರಿಸಿದ್ದಾರೆ.
ಜೀವ ಉಳಿಸುವ ಉದ್ದೇಶದಿಂದ ಆರಂಭವಾದ 'ರಕ್ತದೂತ' ಸೇವೆ ಇದೀಗ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮಾದರಿಯಾಗಿ ಹೊರಹೊಮ್ಮಿದ್ದು, ದೇಶದಾದ್ಯಂತ ಗಮನ ಸೆಳೆಯುತ್ತಿದೆ.
ಕಳೆದ 6 ತಿಂಗಳ ಹಿಂದೆ ಈ ಸೇವೆ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೈಕ್ನಲ್ಲಿ ತೆರಳುವ ಸಿಬ್ಬಂದಿ, 1 ಗಂಟೆ 10 ನಿಮಿಷದಲ್ಲಿ ರಕ್ತ ತಲುಪಿಸುತ್ತಾರೆ. ಇನ್ನುಳಿದ ಆಸ್ಪತ್ರೆಗಳಿಗೆ ಈ ಸೇವೆ ಆರಂಭಿಸುವ ಯೋಚನೆ ಇದೆ. ಲೈಯನ್ಸ್ ಕ್ಲಬ್ ನರಗುಂದದವರು ಮತ್ತೊಂದು ದ್ವಿಚಕ್ರವಾಹನ ದೇಣಿಗೆ ಕೊಡಲು ಮುಂದೆ ಬಂದಿದ್ದಾರೆ. ಸದ್ಯ ಐದಾರು ಆಸ್ಪತ್ರೆಗಳು ಸೇವೆಗೆ ಒಳಪಟ್ಟಿದ್ದು, ಇನ್ನೊಂದು ವಾಹನ ಸಿಕ್ಕರೆ ಹೆಚ್ಚುವರಿಯಾಗಿ ಏಳೆಂಟು ಆಸ್ಪತ್ರೆಗಳಿಗೆ ಸೇವೆ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
"ಒಂದು ಕರೆ... ಕೆಲವೇ ಕ್ಷಣಗಳಲ್ಲಿ ರಕ್ತ ಆಸ್ಪತ್ರೆಗೆ!" ಹುಬ್ಬಳ್ಳಿಯ 'ರಕ್ತದೂತ' ಸೇವೆ ಈಗ ನೂರಾರು ಕುಟುಂಬಗಳ ಆಶಾಕಿರಣವಾಗಿದೆ.
ರಾಷ್ಟ್ರೋತ್ಥಾನ ರಕ್ತಕೇಂದ್ರದ ನರ್ಸಿಂಗ್ ಆಫೀಸರ್ ಚೇತನ ಕುಮಾರ್ ಮಾಹಿತಿ ನೀಡುವಂತೆ, ಆಸ್ಪತ್ರೆಯಿಂದ ರಕ್ತದ ಅವಶ್ಯಕತೆ ಬಗ್ಗೆ ಸಹಾಯವಾಣಿಗೆ ಕರೆ ಬಂದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತೆರಳಿ ವೈದ್ಯರ ವರದಿ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸುತ್ತಾರೆ. ಬಳಿಕ ರಕ್ತ ಭಂಡಾರದಲ್ಲಿ ಅಗತ್ಯ ಹೊಂದಾಣಿಕೆ (ಕ್ರಾಸ್ ಮ್ಯಾಚಿಂಗ್) ನಡೆಸಿ ಸಂಬಂಧಿತ ರಕ್ತವನ್ನು ನೇರವಾಗಿ ರೋಗಿಗೆ ತಲುಪಿಸಲಾಗುತ್ತದೆ.
ಪ್ರತಿದಿನ 6 ರಿಂದ 7 ರಕ್ತದ ಪ್ಯಾಕೆಟ್ಗಳನ್ನು ಪೂರೈಕೆ ಮಾಡಲಾಗುತ್ತಿದ್ದು, ಈಗಾಗಲೇ 150ಕ್ಕೂ ಹೆಚ್ಚು ರೋಗಿಗಳು ಈ ಸೇವೆಯ ಪ್ರಯೋಜನ ಪಡೆದಿದ್ದಾರೆ. ವಿಶೇಷವಾಗಿ ಮನೆಯಲ್ಲಿ ವಯೋವೃದ್ಧ ತಂದೆ-ತಾಯಿ ಮಾತ್ರ ಇದ್ದಾಗ ಅಥವಾ ಬೇರೆ ಊರುಗಳಿಂದ ಚಿಕಿತ್ಸೆಗಾಗಿ ಬಂದವರಿಗೆ ಬ್ಲಡ್ ಬ್ಯಾಂಕ್ಗಳ ಮಾಹಿತಿ ಇಲ್ಲದ ಸಂದರ್ಭಗಳಲ್ಲಿ 'ರಕ್ತದೂತ' ಸೇವೆ ದೊಡ್ಡ ನೆರವಾಗುತ್ತಿದೆ.
ತುರ್ತು ಸಂದರ್ಭಗಳಲ್ಲಿ ರಕ್ತಕ್ಕಾಗಿ ಓಡಾಟ ಮಾಡುವ ಕಷ್ಟವನ್ನು ಕಡಿಮೆ ಮಾಡಿರುವ ಈ ಸೇವೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಆರೋಗ್ಯ ಕ್ಷೇತ್ರದಲ್ಲಿ ಮಾನವೀಯತೆಯ ಹೊಸ ಮಾದರಿಯಾಗಿ ಗುರುತಿಸಿಕೊಂಡಿದೆ.
Also read :
AI ಗೆ ಅಡುಗೆ ಪಾಠ: ರೋಬೋಟ್ ಗಳಿಗೆ ಅಡುಗೆ ಕಲಿಸುತ್ತಿರುವ ಭಾರತೀಯ ಮಹಿಳೆಯರು ! ಗಂಟೆಗೆ ₹250 ವೇತನ