belagavi news :
ತಮಿಳುನಾಡಿನ ತಿಲತರ್ಪಣಪುರಿ : ನರಮುಖ ಗಣಪತಿ ದರ್ಶನದ ಅಪರೂಪದ ಆದಿ ವಿನಾಯಕ ದೇವಸ್ಥಾನ
ತಮಿಳುನಾಡಿನ ತಿಲತರ್ಪಣಪುರಿಯಲ್ಲಿ ಇರುವ ಆದಿ ವಿನಾಯಕ ದೇವಸ್ಥಾನವು ಗಣೇಶನನ್ನು ಅತ್ಯಂತ ಅಪರೂಪದ ರೂಪದಲ್ಲಿ ದರ್ಶನ ಮಾಡಿಸುವ ವಿಶಿಷ್ಟ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ಭಕ್ತರು ಸಾಮಾನ್ಯ ಗಜಮುಖ ಗಣಪತಿಯನ್ನು ಕಾಣುವುದಿಲ್ಲ. ಬದಲಾಗಿ, ಸೊಂಡಿಲಿಲ್ಲದ ಮಾನವ ಮುಖದ ರೂಪದಲ್ಲಿ, ಬಾಲಕ ಸ್ವರೂಪದ ಪ್ರಶಾಂತ ಗಣಪತಿಯನ್ನು ಪೂಜಿಸುತ್ತಾರೆ.
ಈ ಕಾರಣದಿಂದಲೇ ಈ ದೇವಾಲಯವನ್ನು"ಆದಿ ವಿನಾಯಕ" ಅಥವಾ ನರಮುಖ "ಬಾಲ ಗಣಪತಿ ದೇವಸ್ಥಾನ" ಎಂದು ಕರೆಯಲಾಗುತ್ತದೆ. ಭಕ್ತರ ನಂಬಿಕೆಯಂತೆ, ಈ ರೂಪದ ಗಣಪತಿ ವಿಘ್ನಗಳನ್ನು ನಿವಾರಿಸಿ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ನೀಡುತ್ತಾನೆ.
ಪೌರಾಣಿಕ ಹಿನ್ನೆಲೆಯ ಪ್ರಕಾರ, ಈ ಕ್ಷೇತ್ರವು ರಾಮಾಯಣ ಕಾಲದಿಂದಲೂ ಪಿತೃ ತರ್ಪಣಕ್ಕೆ ಪ್ರಸಿದ್ಧವಾಗಿದೆ. ಗಯಾ ಮತ್ತು ಕಾಶಿಗೆ ಸಮಾನವಾದ ಮಹತ್ವವನ್ನು ಹೊಂದಿರುವ ಈ ಸ್ಥಳದಲ್ಲಿ ಪಿತೃದೋಷ ನಿವಾರಣೆಗೆ ವಿಶೇಷ ಮಹತ್ವವಿದೆಯೆಂದು ಭಕ್ತರು ನಂಬುತ್ತಾರೆ.
ಗಣೇಶನನ್ನು ಸಾಮಾನ್ಯವಾಗಿ ದೊಡ್ಡ ಕಿವಿ ಮತ್ತು ಆನೆಯ ಸೊಂಡಿಲಿನೊಂದಿಗೆ ಕಾಣುವುದು ಸಾಮಾನ್ಯವಾಗಿದ್ದರು, ಈ ದೇವಾಲಯದಲ್ಲಿ ಅವನು ಮಾನವ ಮುಖದ ಬಾಲಕ ರೂಪದಲ್ಲಿ ದರ್ಶನ ನೀಡುವುದು ಈ ಕ್ಷೇತ್ರದ ಅತ್ಯಂತ ವಿಶಿಷ್ಟ ಲಕ್ಷಣವಾಗಿದೆ.
ಎಲ್ಲಿದೆ ಈ ನರ ಮುಖ ಆದಿ ವಿನಾಯಕ ದೇವಸ್ಥಾನ?
ತಮಿಳುನಾಡು ರಾಜ್ಯದ ನಾಗಪಟ್ಟಣಂ ಜಿಲ್ಲೆಯ ಕೂತನೂರು ಗ್ರಾಮದ ಸಮೀಪವಿರುವ ತಿಲತರ್ಪಣಪುರಿ ಎಂಬ ಪವಿತ್ರ ಸ್ಥಳದಲ್ಲಿ ಈ ಅಪರೂಪದ ನರಮುಖ ಆದಿ ವಿನಾಯಕ ದೇವಸ್ಥಾನವಿದೆ. ಈ ದೇವಾಲಯವು ಪ್ರಸಿದ್ಧ ಮುಕ್ತೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಸ್ಥಿತವಾಗಿದ್ದು, ಇಲ್ಲಿನ ವಿಶೇಷತೆಯಿಂದಾಗಿ ದೇಶಾದ್ಯಂತ ಭಕ್ತರನ್ನು ಆಕರ್ಷಿಸುತ್ತದೆ.
ಈ ಕ್ಷೇತ್ರದ ಅತ್ಯಂತ ವಿಶೇಷತೆ ಎಂದರೆ ಇಲ್ಲಿ ಪೂಜಿಸಲ್ಪಡುವ ಗಣಪತಿ ವಿಗ್ರಹ. ಜಗತ್ತಿನಲ್ಲಿಯೇ ಸೊಂಡಿಲಿಲ್ಲದ ಏಕೈಕ ಗಣಪತಿ ವಿಗ್ರಹ ಎಂದು ಹೆಗ್ಗಳಿಕೆಯನ್ನು ಈ ದೇವಾಲಯ ಹೊಂದಿದೆ. ಇಲ್ಲಿ ಗಣಪತಿ ಮಾನವ ಮುಖದ ಬಾಲಕ ರೂಪದಲ್ಲಿ ದರ್ಶನ ನೀಡುತ್ತಾನೆ.
ಈ ಆಲಯದಲ್ಲಿ ಪರಮಶಿವನು ಮುಕ್ತೇಶ್ವರ ರೂಪದಲ್ಲಿ ಹಾಗೂ ಅಮ್ಮನವರು ಸ್ವರ್ಣವಲ್ಲಿ ದೇವಿ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾರೆ. ಇದರಿಂದ ಈ ದೇವಾಲಯವು ಶಿವ-ಶಕ್ತಿ-ಗಣಪತಿ ಸಮ್ಮಿಲನ ಕ್ಷೇತ್ರವಾಗಿ ವಿಶೇಷ ಧಾರ್ಮಿಕ ಮಹತ್ವವನ್ನು ಪಡೆದಿದೆ.
ಗಣೇಶನ ಆದಿ ಸ್ವರೂಪದ ನಂಬಿಕೆ:
ಪುರಾಣಗಳ ಪ್ರಕಾರ, ಶಿವ-ಪಾರ್ವತಿಯ ಪುತ್ರನಾದ ಗಣೇಶನಿಗೆ ಆನೆಯ ತಲೆ ಜೋಡಿಸುವ ಮೊದಲು ಆತ ಮಾನವ ರೂಪದಲ್ಲಿ ಇದ್ದನು. ಆ ಮೂಲ ಆದಿ ಸ್ವರೂಪವನ್ನೇ ಇಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಸ್ಥಳ ಪುರಾಣ ಹೇಳುತ್ತದೆ.
ಬಲಗೈಯನ್ನು ತೊಡೆಯ ಮೇಲೆ ಇಟ್ಟುಕೊಂಡು, ಎಡಗೈಯಲ್ಲಿ ಮೋದಕವನ್ನು ಹಿಡಿದು, ಮುಗುಳ್ನಗೆಯ ಮಾನವ ಮುಖದ ರೂಪದಲ್ಲಿ ದರ್ಶನ ನೀಡುತ್ತಾನೆ. ಈ ಅಪರೂಪದ ರೂಪ ಭಕ್ತರಲ್ಲಿ ಆಶ್ಚರ್ಯ ಹಾಗೂ ಆಳವಾದ ಭಕ್ತಿ ಭಾವವನ್ನು ಉಂಟುಮಾಡುತ್ತದೆ.
'ತಿಲತರ್ಪಣಪುರಿ' ಎಂಬ ಹೆಸರು ಬರಲು ರಾಮಾಯಣದ ಹಿನ್ನೆಲೆ ಏನು?
ಕಥೆಯ ಪ್ರಕಾರ, ಶ್ರೀರಾಮಚಂದ್ರನು ತನ್ನ ತಂದೆ ದಶರಥ ಮಹಾರಾಜನ ಆತ್ಮಕ್ಕೆ ಮೋಕ್ಷ ದೊರಕಲೆಂದು ಭಾರತದ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ಪಿತೃ ಕಾರ್ಯಗಳನ್ನು ನಡೆಸಿದರು ಸಂಪೂರ್ಣ ತೃಪ್ತಿ ಸಿಗಲಿಲ್ಲ. ಆಗ ಅವರು ಪರಮಶಿವನನ್ನು ಪ್ರಾರ್ಥಿಸಿದಾಗ, ಶಿವನು ಈ ಪವಿತ್ರ ಸ್ಥಳದಲ್ಲಿ ಎಳ್ಳು ಬಳಸಿ ತರ್ಪಣ ನೀಡುವಂತೆ ಸೂಚಿಸಿದರು ಎಂದು ನಂಬಿಕೆ ಇದೆ
ಅದಿನಂತರ ಶ್ರೀರಾಮನು ಇಲ್ಲಿ ಇರುವ ಪವಿತ್ರ ಕೊಳದಲ್ಲಿ ಸ್ನಾನ ಮಾಡಿ,ಪಿತ್ರದೇವತೆ ಗಳಿಗೆ ತಿಲತರ್ಪಣಪುರಿ ಅರ್ಪಿಸಿದ ತಕ್ಷಣ ದಶರಥ ಮಹಾರಾಜನಿಗೆ ಮುಕ್ತಿ ದೊರೆಯಿತು ಎಂದು ಸ್ಥಳ ಪುರಾಣ ಹೇಳುತ್ತದೆ.
ಈ ಕಾರಣದಿಂದಲೇ ತಿಲ (ಎಳ್ಳು) + ತರ್ಪಣ +ಪುರಿ ಎಂಬ ಪದಗಳು ಸೇರಿ ಈ ಸ್ಥಳಕ್ಕೆ "ತಿಲತರ್ಪಣ ಪುರಿ" ಎಂಬ ಹೆಸರು ಬಂದಿತು ಎಂದು ಭಕ್ತರು ನಂಬುತ್ತಾರೆ.
ಪಿತೃದೋಷ ನಿವಾರಣೆಯ ದಕ್ಷಿಣ ಕಾಶಿ:
ತಿಲತರ್ಪಣಪುರಿಯನ್ನು ದಕ್ಷಿಣ ಭಾರತದ ಪ್ರಮುಖ ಪವಿತ್ರ ಕ್ಷೇತ್ರಗಳಾದ ಕಾಶಿ, ಗಯಾ ಮತ್ತು ರಾಮೇಶ್ವರಂ ಗೆ ಸಮಾನವಾಗಿ ಪರಿಗಣಿಸಲಾಗುತ್ತದೆ. ಇಲ್ಲಿ ಪಿತೃದೇವತೆಗಳಿಗೆ ತರ್ಪಣ ನೀಡಿದಂತೆ ಪಿತೃ ದೋಷಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತರ ದೃಢ ನಂಬಿಕೆ.
ಪೂರ್ವಜರಿಗೆ ಶ್ರದ್ಧಾ ಕರ್ಮಗಳನ್ನು ಸರಿಯಾದ ಸಮಯದಲ್ಲಿ ಮಾಡಲು ಸಾಧ್ಯವಾಗದವರು ಈ ಕ್ಷೇತ್ರಕ್ಕೆ ಆಗಮಿಸಿ, ತರ್ಪಣ ನೀಡುವುದರಿಂದ ಶುಭ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಮಹಾಲಯ ಅಮಾವಾಸ್ಯೆ ಹಾಗೂ ಪಿತೃ ಪಕ್ಷದ ದಿನಗಳಲ್ಲಿ ಸಾವಿರಾರು ಭಕ್ತರು ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.
ನರಮುಖ ಬಾಲ ಗಣಪತಿಯ ದರ್ಶನದಿಂದ ಸಿಗುವ ಲಾಭಗಳೇನು?
ಭಕ್ತರ ನಂಬಿಕೆಯ ಪ್ರಕಾರ, ತಿಲತರ್ಪಣಪುರಿಯ ನರಮುಖ ಆದಿ ವಿನಾಯಕನನ್ನು ದರ್ಶನ ಮಾಡಿ ಪೂಜಿಸುವುದರಿಂದ ಅಪಾರ ಆಧ್ಯಾತ್ಮಿಕ ಹಾಗೂ ಜೀವನದ ಶುಭಫಲಗಳು ದೊರೆಯುತ್ತವೆ. ಈ ಅಪರೂಪದ ಗಣಪತಿ ವಿಘ್ನಗಳನ್ನು ನಿವಾರಿಸಿ ಭಕ್ತರ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನುತರುತ್ತಾನೆ ಎಂದು ನಂಬಿಕೆ ಇದೆ.
ವಿದ್ಯಾರ್ಥಿಗಳಲ್ಲಿ ಈ ದೇವರ ಕೃಪೆಯಿಂದ ಏಕಾಗ್ರತೆ, ಬುದ್ಧಿ ಶಕ್ತಿ ಹಾಗೂ ನೆನಪಿನ ಶಕ್ತಿ ಹೆಚ್ಚುತ್ತದೆ ಎಂದು ಭಕ್ತರು ಹೇಳುತ್ತಾರೆ. ಜೀವನದಲ್ಲಿ ಎದುರಾಗುವ ಅಡೆ-ತಡೆಗಳು ಹಾಗೂ ವಿಘ್ನಗಳು ದೂರವಾಗಿ, ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬುದು ನಂಬಿಕೆ.
ಕುಟುಂಬ ಜೀವನದಲ್ಲಿನ ಕಲಹಗಳು, ಮನಸ್ತಾಪಗಳು ನಿವಾರಣೆಯಾಗುತ್ತವೆ ಎಂದು ಮನೆಯಲ್ಲಿ ಸುಖ-ಶಾಂತಿ ಹಾಗೂ ಆರ್ಥಿಕ ಸಮೃದ್ಧಿ ನೆಲೆಸುತ್ತದೆ ಎಂದು ಭಕ್ತರ ದೃಢ ನಂಬಿಕೆ ಇದೆ. ಪಿತೃ ದೋಷಗಳಿಂದ ಬಳಲುವವರಿಗೆ ಈ ಕ್ಷೇತ್ರವು ವಿಶೇಷ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ.
ದೇವಸ್ಥಾನಕ್ಕೆ ತಲುಪುವುದು ಹೇಗೆ?
ತಿಲತರ್ಪಣಪುರಿ ಗ್ರಾಮವು ತಮಿಳುನಾಡಿನ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಹತ್ತಿರದಲ್ಲಿದೆ. ಇದು ಪ್ರಸಿದ್ಧ ಕೂತನೂರು ಸರಸ್ವತಿ ದೇವಸ್ಥಾನದಿಂದ ಕಳೆದ ಮೂರು ಕಿಲೋಮೀಟರ್ ದೂರದಲ್ಲಿದ್ದು, ತಿರುನಲ್ಲಾರ್ ಶನಿ ಭಗವಾನ್ ದೇವಸ್ಥಾನದಿಂದ ಸುಮಾರು 25 km ಅಂತರದಲ್ಲಿದೆ.
ಕುಂಭಕೋಣಂ,ಮಯಿಲಾಡು ತುರೈ ಅಥವಾ ಕಾರೈಕ್ಕಾಲ್ ಪಟ್ಟಣಗಳಿಂದ ಬಸ್ ಹಾಗೂ ಟ್ಯಾಕ್ಸಿ ಸೇವೆಗಳ ಮೂಲಕ ಈ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದು.
ಜಗತ್ತಿನಾದ್ಯಂತ ಅನೇಕ ಗಣಪತಿ ದೇವಾಲಯಗಳಿದ್ದರೂ, ಮಾನವ ಮುಖದೊಂದಿಗೆ ಸೊಂಡಿಲಿಲ್ಲದೆ ದರ್ಶನ ನೀಡುವ ಆದಿವಿನಾಯಕನ ಕ್ಷೇತ್ರವು ಅತ್ಯಂತ ಅಪರೂಪವಾದದ್ದು ಎಂದು ಭಕ್ತರು ನಂಬುತ್ತಾರೆ. ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿರುವುದರಿಂದ ಪಿತೃದೋಷ ನಿವಾರಣೆ ಹಾಗೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಫಲ ದೊರೆಯುತ್ತದೆ ಎಂದು ವಿಶ್ವಾಸ ಭಕ್ತರಲ್ಲಿ ಇದೆ.