Belagavi News:
INS Malvan ಭಾರತೀಯ ನೌಕಾಪಡೆಗೆ ಸೇರ್ಪಡೆ; ಸ್ವದೇಶಿ ಯುದ್ಧನೌಕೆಯ ವಿಶೇಷತೆಗಳು, ಸಾಮರ್ಥ್ಯ ಇಲ್ಲಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಏಷ್ಯಾದ ಅತಿದೊಡ್ಡ ನೌಕಾನೆಲೆ " ಐಎನ್ ಎಸ್ ಕದಂಬ (INS Kadamba) ದಲ್ಲಿ ಭಾರತೀಯ ನೌಕಾಪಡೆಗೆ ಮತ್ತೊಂದು ಸ್ವದೇಶಿ ನಿರ್ಮಿತ ಯುದ್ಧನೌಕೆ ಐಎನ್ ಎಸ್ ಮಾಲ್ವಾಣ್ (INS Malvan) ಸೇರ್ಪಡೆಯಾಗುತ್ತಿದೆ. ಕೇರಳದ ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಸುಮಾರು 80% ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಈ ಯುದ್ಧನೌಕೆ, ಭಾರತದ ಸಮುದ್ರ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.
78 ಮೀಟರ್ ಉದ್ದ 11.26 ಮೀಟರ್ ಅಗಲ ಹಾಗೂ 2.7 ಮೀಟರ್ ಆಳ ಹೊಂದಿರುವ ಈ ನೌಕೆ ಗಂಟೆಗೆ 25 ನಾಟಿಕಲ್ ಮೈಲುಗಳ ವೇಗದಲ್ಲಿ ಸಂಚರಿಸಬಲ್ಲದು, ಇದರಲ್ಲಿ 7 ಅಧಿಕಾರಿಗಳು ಸೇರಿದಂತೆ 57 ಮಂದಿ ನಾವಿಕರು ಕಾರ್ಯನಿರ್ವಹಿಸಲು ಅವಕಾಶವಿದ್ದು, ವಿವಿಧ ಸಮುದ್ರ ಕಾರ್ಯಾಚರಣೆಗಳಿಗೆ ವಿನ್ಯಾಸಗೊಳಿಸಲಾಗಿದೆ.
ಜಲಾಂತರ್ಗಾಮಿ ಪತ್ತೆಹಚ್ಚಲು ಅತ್ಯಾಧುನಿಕ ಸಾಮರ್ಥ್ಯ
ಐಎನ್ ಎಸ್ ಮಾಲ್ವಾಣ್ ನ ಪ್ರಮುಖ ವೈಶಿಷ್ಟ್ಯವೆಂದರೆ ಸಮುದ್ರದ ಆಳದಲ್ಲಿರುವ ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚಿ ದಾಳಿ ನಡೆಸುವ ಸಾಮರ್ಥ್ಯ. ನೌಕೆಯಾ ತಳಭಾಗದಲ್ಲಿ ಅಳವಡಿಸಿರುವ ' ಅಭಯ್ ಸೋನಾರ್ ' ವ್ಯವಸ್ಥೆಯು ಧ್ವನಿ ತರಂಗಗಳ ಮೂಲಕ ಶತ್ರು ಜಲಾಂತರ್ಗಾಮಿಗಳ ಇರುವಿಕೆಯನ್ನು ನಿಖರವಾಗಿ ಗುರುತಿಸುತ್ತದೆ.
ಇದರ ಜೊತೆಗೆ, ನೌಕೆಯಲ್ಲಿ ಜಲಾಂತರ್ಗಾಮಿ ನಿರೋಧಕ ಶಸ್ತ್ರಾಸ್ತ್ರಗಳು ಮತ್ತು ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸಮುದ್ರ ಮೇಲ್ಮೈಯಲ್ಲಿ ಶತ್ರುಗಳ ವಿರೋಧ ಕಾರ್ಯಾಚರಣೆ ನಡೆಸಲು ಹಾಗೂ ಆತ್ಮ ರಕ್ಷಣೆಗಾಗಿ 30 ಮೀ. ಮೀ. ನೇವೆಲ್ ಸರ್ಫೇಸ್ ಗನ್ ಅಳವಡಿಸಿರುವುದು ಇದರ ಮತ್ತೊಂದು ಪ್ರಮುಖ ವಿಶೇಷತೆಯಾಗಿದೆ.
ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ
ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡಿರುವ INS Malvan ಭಾರತದ ' ಆತ್ಮನಿರ್ಭರ ಭಾರತ' ಮತ್ತು ' ಮೇಕ್ ಇನ್ ಇಂಡಿಯಾ ' ರಕ್ಷಣಾ ಉತ್ಪಾದನಾ ಯೋಜನೆಗಳಿಗೆ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಜಲಾಂತರ್ಗಾಮಿ ವಿರೋಧಿ ಸಾಮರ್ಥ್ಯ ಮತ್ತು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ಈ ಯುದ್ಧನೌಕೆ ಭಾರತೀಯ ನೌಕಾಪಡೆಯ ಕಾರ್ಯಕ್ಷಮತೆ ಹಾಗೂ ಸಮುದ್ರ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ.