Balagavi News:
ಬೆಳಗಾವಿ: "ರಾಜ್ಯಸಭಾ ಸದಸ್ಯನಾಗಿ ನನ್ನನ್ನು ಮುಂದುವರಿಸಿ ಎಂದು ನಾನು ಯಾರನ್ನು ಭೇಟಿ ಮಾಡಿಲ್ಲ, ಯಾವುದೇ ಪತ್ರವನ್ನು ನೀಡಿಲ್ಲ. ಪಕ್ಷವೇ ನನ್ನನ್ನು ಕೇಳದೆ ರಾಜ್ಯಸಭೆಗೆ ಕಳುಹಿಸಿತ್ತು. ಅಂತಹ ಸಂದರ್ಭದಲ್ಲಿ ಮತ್ತೊಮ್ಮೆ ಅವಕಾಶ ಕೇಳುವುದು ಸ್ವಾರ್ಥವಾಗುತ್ತದೆ" ಎಂದು ನಿರ್ಗಮಿತ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು, ರಾಜ್ಯಸಭೆಗೆ ಧಾರವಾಡದ ಸಾಮಾನ್ಯ ಕಾರ್ಯಕರ್ತ ಎಂ. ನಾಗರಾಜ ಅವರನ್ನು ಆಯ್ಕೆ ಮಾಡಿರುವ ಪಕ್ಷದ ನಿರ್ಧಾರವನ್ನು ಸ್ವಾಗತಿಸಿದರು. "ನನ್ನ ಅವಧಿ ಜೂನ್ 25ಕ್ಕೆ ಮುಕ್ತಾಯಗೊಳ್ಳಲಿದೆ. ನನ್ನ ಸ್ಥಾನಕ್ಕೆ ಹೊಸ ಮುಖಕ್ಕೆ ಅವಕಾಶ ನೀಡಿರುವುದು ಸಂತೋಷದ ಸಂಗತಿ. ಉತ್ತರ ಕರ್ನಾಟಕ ಭಾಗ ಹಾಗೂ ಹಾಲುಮತ ಸಮಾಜಕ್ಕೆ ಪ್ರಾತಿನಿಧ್ಯ ನೀಡಲಾಗಿದೆ" ಎಂದು ಹೇಳಿದರು.
ವಿಧಾನ ಪರಿಷತ್ ಗೆ ಹಿರಿಯ ಕಾರ್ಯಕರ್ತ ಲಿಂಗರಾಜ್ ಪಾಟೀಲ್ ಹಾಗೂ ಮೈಸೂರು ಭಾಗದ ಸಣ್ಣ ಮಡಿವಾಳ ಸಮುದಾಯದ ರಘು ಕೌಟಿಲ್ಯ ಅವರಿಗೆ ಅವಕಾಶ ನೀಡಿರುವುದನ್ನು ಅವರು ಶ್ಲಾಘಿಸಿದರು. ಪಕ್ಷದ ವರಿಷ್ಠರು ತೆಗೆದುಕೊಂಡಿರುವ ತೀರ್ಮಾನ ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದಾಗಿದೆ ಎಂದು ಅಭಿಪ್ರಾಯಪಟ್ಟರು.
"ನನ್ನಂತಹ ಸಾವಿರಾರು ಕಾರ್ಯಕರ್ತರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ನಾನು ಉತ್ತಮ ಕೆಲಸ ಮಾಡಿದ್ದರೆ. ಭವಿಷ್ಯದಲ್ಲಿ ಪಕ್ಷ ಮತ್ತೆ ಜವಾಬ್ದಾರಿ ನೀಡುತ್ತದೆ. ಆದರೆ ಮತ್ತೊಬ್ಬರಿಗೆ ಅವಕಾಶ ಸಿಕ್ಕಾಗ ಅವರಿಗೆ ಬೆಂಬಲ ನೀಡಿ ಕೆಲಸ ಮಾಡಬೇಕು ಎಂಬುದು ನನ್ನ ನಿಲುವು. ಅದಕ್ಕಾಗಿ ನಾನು ಮತ್ತೊಮ್ಮೆ ರಾಜ್ಯಸಭಾ ಸ್ಥಾನಕ್ಕಾಗಿ ಮನವಿ ಮಾಡಲಿಲ್ಲ" ಎಂದು ಕಡಾಡಿ ಸ್ಪಷ್ಟಪಡಿಸಿದ್ದರು.
ಆರು ವರ್ಷಗಳ ರಾಜ್ಯಸಭಾ ಸದಸ್ಯತ್ವ ಸಣ್ಣ ಅವಧಿಯಲ್ಲ. ಇನ್ನೊಂದು ಅವಧಿ ನನಗೆ ನೀಡಿದ್ದರೆ. ಮತ್ತೊಬ್ಬ ಕಾರ್ಯಕರ್ತನಿಗೆ ಅವಕಾಶ ಸಿಗುತ್ತಿರಲಿಲ್ಲ. ಹೀಗಾಗಿ ಪಕ್ಷದ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರವನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ ಎಂದು ಈರಣ್ಣ ಕಡಾಡಿ ಪುನರುಚ್ಚರಿಸಿದರು.
ಬೆಳಗಾವಿ ಜಿಲ್ಲೆಯ ಸ್ಥಾನ ಹುಬ್ಬಳ್ಳಿಗೆ ಹೋಯಿತು ಎಂಬ ವಿಚಾರಕ್ಕೆ, ರಾಜ್ಯದ ನಾಯಕತ್ವ ಇಡೀ ರಾಜ್ಯ ನೋಡುವಂತೆ, ರಾಷ್ಟ್ರದ ನಾಯಕತ್ವ ಇಡೀ ರಾಷ್ಟ್ರ ನೋಡುತ್ತದೆ. ಆಯಾ ಸಮಾಜ ಅವರ ಸಮಾಜ ನೋಡುತ್ತದೆ. ಎಲ್ಲಾ ಸಮಾಜಕ್ಕೂ ಪ್ರಾತಿನಿಧ್ಯತೆ ನೀಡುವುದು ಪಕ್ಷದ ಮುಖಂಡರಿಗೆ ಅವಕಾಶ ಇರುತ್ತದೆ. ಈ ಹಿನ್ನಲೆಯಲ್ಲಿ ಹಾಲುಮತ ಸಮಾಜ ಮತ್ತು ಆ ಭಾಗಕ್ಕೆ ಪ್ರಾತಿನಿಧ್ಯತೆ ಸಿಗಲಿ ಅಂತಾ ಕೊಟ್ಟಿರಬಹುದು. ಇದನ್ನು ನಾವು ಯಾಕೆ ತಪ್ಪು ತಿಳಿದುಕೊಳ್ಳಬೇಕು ಎಂದು ಕಡಾಡಿ ಸಮರ್ಥಿಸಿಕೊಂಡರು.
ಬೆಳಗಾವಿ ಜಿಲ್ಲೆಯ ಒಬ್ಬರಿಗೆ ರಾಜ್ಯಸಭಾ ಸ್ಥಾನ ನೀಡುಬಹುದಿತ್ತಲ್ಲವೇ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರ್ಗಮಿತ ರಾಜ್ಯಸಭಾ ಸದಸ್ಯ ಈರಣ್ಣ ಕಾಡಾಡಿ, ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕೆಂಬ ಬೇಡಿಕೆಯನ್ನು ಪಕ್ಷದ
ಹೈಕಮಾಂಡ್ ಮುಂದೆ ಹಲವು ಬಾರಿ ಪ್ರಸ್ತಾಪಿಸಿದ್ದಾಗಿ ಹೇಳಿದರು.
"ಪ್ರಾರಂಭದಿಂದಲೂ ಬೆಳಗಾವಿ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ನಮ್ಮಲ್ಲಿದೆ. ಈ ವಿಚಾರವನ್ನು ನಾನು ಮುಕ್ತವಾಗಿ ಹೇಳುತ್ತೇನೆ. ಜಿಲ್ಲೆಯ ನಾಯಕತ್ವ ಬೆಳೆಯಬೇಕಾದರೆ ಇಲ್ಲಿನ ನಾಯಕರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದೆ. ಆದರೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕತ್ವವು ಇಡಿ ರಾಜ್ಯ ಹಾಗೂ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತದೆ. ಅವರ ದೃಷ್ಟಿಕೋನ ಬೇರೆ ಇರುತ್ತದೆ ಎಂದು ಅವರು ಹೇಳಿದರು.
ತಮ್ಮ ರಾಜಕೀಯ ಪಯಣವನ್ನು ನೆನಪಿಸಿಕೊಂಡ ಕಡಾಡಿ, "ನಾನು ಜಿಲ್ಲಾಧ್ಯಕ್ಷನಾಗಿದ್ದಾಗ ಎರಡು ಪೂರ್ಣ ಲೋಕಸಭೆ ಚುನಾವಣೆಗಳು ಹಾಗೂ ಒಂದು ಉಪಚುನಾವಣೆಯಲ್ಲಿ ಪಕ್ಷ ಗೆಲವು ಸಾಧಿಸಿತ್ತು. ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಜಯ ಸಾಧಿಸಿದ್ದೆವು. ಆದರೂ ಮೂರು ಬಾರಿ ಬೇರೆ ಜಿಲ್ಲೆಗಳ ನಾಯಕರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಯಿತು. ಕಾಡಾ ಅಧ್ಯಕ್ಷ ಸ್ಥಾನವನ್ನೂ ಹೊರ ಜಿಲ್ಲೆಯವರೆಗೆ ನೀಡಲಾಗಿತ್ತು. ಜಿಲ್ಲೆಯ ನಾಯಕತ್ವ ಬೆಳೆಸಲು ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದೆವು. ಇದೆ ಹಿನ್ನೆಲೆಯಲ್ಲೇ ನನಗೆ ಒಂದು ಅವಧಿಗೆ ರಾಜ್ಯಸಭಾ ಸದಸ್ಯತ್ವ ದೊರಕಿತ್ತು" ಎಂದು ವಿವರಿಸಿದರು.
ರಾಜ್ಯಸಭಾ ಸದಸ್ಯನಾಗಿ ಕಳೆದ ಆರು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ತೃಪ್ತಿ ಇದೆ ಎಂದು ಹೇಳಿದೆ ಈರಣ್ಣ ಕಡಾಡಿ, " ನನ್ನ ಅವಧಿಯ ಮೊದಲು ಎರಡು ವರ್ಷ ಕೋವಿಡ್ ಸಂಕಷ್ಟದಲ್ಲೇ ಕಳೆಯಿತು. ಆದರೂ ಹಿಂದೆ ಬಳಕೆಯಾಗಿದೆ ಉಳಿದಿದ್ದ ಅನುದಾನವನ್ನು ತಂದು ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಿದ್ದೆ. ಒಟ್ಟು 23.53 ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ಸಮುದಾಯ ಭವನಗಳು, ಬಸ್ ಶೆಲ್ಟರ್ ಗಳು, ಸಾಲ ಕಟ್ಟಡಗಳು ಸ್ಮಾರ್ಟ್ ತರಗತಿಗಳು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿರುವ ಸಂತೃಪ್ತಿ ನನಗಿದೆ" ಎಂದು ಹೇಳಿದರು.
Also Read:
H-1B ವೀಸಾ ಶುಲ್ಕ ಕ್ಕೆ ದೊಡ್ಡ ಶಾಕ್: 1 ಲಕ್ಷ ಡಾಲರ್ ಫೀ ರದ್ದು ಮಾಡಿದ ಅಮೆರಿಕದ ನ್ಯಾಯಾಧೀಶರು