Belagavi News:
ನವದೆಹಲಿ: ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆಯುವ ದಾಳಿಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಹೇಳಿದ್ದಾರೆ. ಜಾಗತಿಕ ವ್ಯಾಪಾರ ಮತ್ತು ಸಮುದ್ರ ಭದ್ರತೆಯ ದೃಷ್ಟಿಯಿಂದ ಅಂತಾರಾಷ್ಟ್ರೀಯ ಜಲ ಮಾರ್ಗಗಳು ಸುರಕ್ಷಿತ ಹಾಗೂ ಮುಕ್ತವಾಗಿರಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಫಿಲಿಪೈನ್ಸ್ ನ ಮನಿಲಾದಲ್ಲಿ ನಡೆದ 33ನೇ ಆಸಿಯಾನ್ ಪ್ರಾದೇಶಿಕ ವೇದಿಕೆ (ARF) ಸಚಿವರ ಸಭೆಯಲ್ಲಿ ಮಾತನಾಡಿದ ಜೈ ಶಂಕರ್, ಜಾಗತಿಕ ಅನಿಶ್ಚಿತತೆಗಳ ನಡುವೆ ಇಂಡೋ-ಪೆಸಿಫಿಕ್ ಪ್ರದೇಶದ ರಾಜಕೀಯ ಮತ್ತು ಭದ್ರತಾ ಸವಾಲುಗಳ ಕುರಿತು ಭಾರತದ ನಿಲುವನ್ನು ವಿವರಿಸಿದರು.
ಮನಿಲಾ ಕ್ರಿಯಾ ಯೋಜನೆಯನ್ನು ಭಾರತ ಸ್ವಾಗತಿಸಿದ್ದು, ಅದರ 5 ಪ್ರಮುಖ ಸ್ತಂಭಗಳು ಇಂಡೋ -ಪೆಸಿಫಿಕ್ ಕುರಿತು ಭಾರತದ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ ಎಂದು ಅವರು ಹೇಳಿದರು. ವಿಪತ್ತು ನಿರ್ವಹಣೆಯಲ್ಲಿ ದೇಶಗಳ ನಡುವೆ ಸಹಕಾರ ಹೆಚ್ಚಿಸುವುದು, ಉತ್ತಮ ಕಾರ್ಯಪದ್ಧತಿಗಳನ್ನು ಹಂಚಿಕೊಳ್ಳುವುದು, ಸಾಮಾನ್ಯ ಕಾರ್ಯಾಚರಣಾ ವಿಧಾನಗಳನ್ನು (SOPs) ರೂಪಿಸುವುದು ಹಾಗೂ ನೈಜ ಸಮಯದ ಮತ್ತು ಟೇಬಲ್ ಟಾಪ್ ಅಭ್ಯಾಸಗಳನ್ನು ನಡೆಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಭಾರತವು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ (CDRI) ಅನ್ನು ಬೆಂಬಸುತಿದ್ದು, ಅಗತ್ಯವಿರುವ ದೇಶಗಳಿಗೆ ಶೋಧ ಮತ್ತು ರಕ್ಷಣಾ ತಂಡಗಳು, ಪರಿಹಾರ ಸಾಮಗ್ರಿಗಳು ಹಾಗೂ ವೈದ್ಯಕೀಯ ನೆರವನ್ನು ನಿರಂತರವಾಗಿ ಒದಗಿಸುತ್ತಿದೆ ಎಂದು ಜೈಶಂಕರ್ ತಿಳಿಸಿದರು.
ಶ್ರೀಲಂಕಾ, ಫಿಲಿಪೈನ್ಸ್ ಮತ್ತು ಜಮೈಕಾದ ಚಂಡಮಾರುತಗಳು, ಮ್ಯಾನ್ಮಾರ್, ವೆನೆಜುವೆಲಾ ಹಾಗೂ ಅಫ್ಘಾನಿಸ್ತಾನದ ಭೂಕಂಪಗಳಂತಹ ವಿಪತ್ತು ಸಂದರ್ಭಗಳಲ್ಲಿ ಭಾರತ ಮಾನವೀಯ ನೆರವು ನೀಡಿರುವುದನ್ನು ಅವರು ಉಲ್ಲೇಖಿಸಿದರು.
ಭಯೋತ್ಪಾದನೆ ವಿರುದ್ಧ ಜಾಗತಿಕ ಮಟ್ಟದಲ್ಲಿ ಶೂನ್ಯ ಸಹಿಷ್ಣುತೆ (Zero Tolerance) ನೀತಿ ಅನುಸರಿಸಬೇಕು ಎಂದು ಕರೆ ನೀಡಿದ ಜೈಶಂಕರ್, ಉಗ್ರ ಸಂಘಟನೆಗಳಿಗೆ ಬೆಂಬಲ ಮತ್ತು ಹಣಕಾಸು ನೆರವು ನೀಡುವ ಜಾಲಗಳನ್ನು ಕಠಿಣವಾಗಿ ಹತ್ತಿಕ್ಕಬೇಕೆಂದು ಒತ್ತಾಯಿಸಿದರು. ಭಯೋತ್ಪಾದನೆ ನಿಗ್ರಹದಲ್ಲಿ ಭಾರತವು ಮಲೇಷ್ಯಾದೊಂದಿಗೆ ASEAN ರಕ್ಷಣಾ ಸಚಿವರ ತಜ್ಞರ ಕಾರ್ಯನಿರತ ಗುಂಪಿನ ಸಹಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಉತ್ತಮ ಕಾರ್ಯಪದ್ದತಿಗಳ ಸಂಕಲನ ರೂಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು.
ಕಡಲ ಭದ್ರತೆ ಕುರಿತು ಮಾತನಾಡಿದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ಭಾರತದ ಇನ್ಫರ್ಮೇಷನ್ ಫ್ಯೂಷನ್ ಸೆಂಟರ್ - ಇಂಡಿಯನ್ ಓಪನ್ ರೀಜನ್ (IFC- IOR) ಇಂಡೋ - ಪೆಸಿಫಿಕ್ ಸಮುದ್ರ ಜಾಗೃತಿ ಉಪಕ್ರಮ ಹಾಗೂ ಉತ್ತರ ಅರೇಬಿಯನ್ ಸಮುದ್ರದಿಂದ ಪಶ್ಚಿಮ ಪೆಸಿಫಿಕ್ ವರೆಗೆ ಭಾರತೀಯ ನೌಕಾಪಡೆಯ ನಿಯೋಜನೆಗಳು ಸುರಕ್ಷಿತ ಕಡಲ ಸಂಚಾರಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಕಡಲ್ಗಳ್ಳತನ, ಕಳ್ಳಸಾಗಣೆ ಮತ್ತು ಮಾದಕ ವಸ್ತುಗಳ ಅಕ್ರಮ ಸಾಧನೆಯನ್ನು ತಡೆಯುವಲ್ಲಿಯೂ ಭಾರತದ ಪಾತ್ರ ಗಮನಾರ್ಹವಾಗಿದೆ ಎಂದು ಅವರು ತಿಳಿಸಿದರು .
ಅಂತಾರಾಷ್ಟ್ರೀಯ ಸಮುದಾಯವು ಅಣ್ವಸ್ತ್ರ ಪ್ರಸರಣ ತಡೆ ಮತ್ತು ನಿಶ್ಯಸ್ತ್ರೀಕರಣ ವ್ಯವಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ಯಿಂದಿರಬೇಕು ಎಂದು ಜೈಶಂಕರ್ ಕರೆ ನೀಡಿದರು. ಕೃತಕ ಬುದ್ಧಿಮತ್ತೆ (AI) ಬಳಕೆಯಲ್ಲಿ ಜವಾಬ್ದಾರಿಯುತ ಹಾಗೂ ಮಾನವ -ಕೇಂದ್ರಿತ ದೃಷ್ಟಿಕೋನವನ್ನು ಅನುಸರಿಸುವ ಅಗತ್ಯವಿದ್ದು , ಸೈಬರ್ ಅಪರಾಧಗಳನ್ನು ತಡೆಗಟ್ಟಲು ರಾಷ್ಟ್ರಗಳ ನಡುವೆ ಸಹಕಾರ ಹೆಚ್ಚಿಸಬೇಕು ಎಂದರು.
ದಕ್ಷಿಣ ಚೀನಾ ಸಮುದ್ರದ ಕುರಿತು ಭಾರತದ ನಿಲುವನ್ನು ಪುನರುಚ್ಚರಿಸಿದ ಜೈಶಂಕರ್, 1982ರ ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದ (UNCLOS)ಗೆ ಸಂಪೂರ್ಣ ಅನುಗುಣವಾಗಿರುವ, ಪರಿಣಾಮಕಾರಿ ಹಾಗೂ ಕಾನೂನುಬದ್ಧವಾಗಿ ಬದ್ಧಗೊಳಿಸುವ ನೀತಿ ಸಂಹಿತೆ ರೂಪುಗೊಳ್ಳಬೇಕು ಎಂದು ಹೇಳಿದರು. ಈ ಒಪ್ಪಂದವು ಎಲ್ಲಾ ರಾಷ್ಟ್ರಗಳ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸುವಂತಿರಬೇಕು ಎಂಬುದು ಭಾರತದ ಅಭಿಪ್ರಾಯ ಎಂದು ಅವರು ತಿಳಿಸಿದರು.
ದಕ್ಷಿಣ ಚೀನಾ ಸಮುದ್ರವು ವಿಶ್ವದ ಅತ್ಯಂತ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದ್ದು, ಚೀನಾ, ಫಿಲಿಪೈನ್ಸ್ , ವಿಯೆಟ್ನಾಂ, ಮಲೇಷ್ಯಾ , ಬ್ರೂನಿ ಹಾಗೂ ತೈವಾನ್ ಸೇರಿದಂತೆ ಹಲವು ದೇಶಗಳು ಈ ಪ್ರದೇಶದ ಮೇಲೆ ಸಂಪೂರ್ಣ ಅಥವಾ ಭಾಗಶಃ ಹಕ್ಕು ಪ್ರತಿಪಾದಿಸಿವೆ. ಈ ಕಾರಣದಿಂದ ಕರಾವಳಿ ಕಾವಲು ಪಡೆಗಳು ಮತ್ತು ನೌಕಾಪಡೆಗಳ ನಡುವೆ ಹಲವು ಬಾರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ದಕ್ಷಿಣ ಚೀನಾ ಸಮುದ್ರವು ಇಂಡೋ -ಪೆಸಿಫಿಕ್ ಪ್ರದೇಶದ ಪ್ರಮುಖ ಕಾರ್ಯತಂತ್ರದ ಕೇಂದ್ರ ಬಿಂದುವಾಗಿ ಪರಿಣಮಿಸಿದೆ.