Belagavi News :
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವ ಉದ್ದೇಶದಿಂದ ರಾಜ್ಯಪಾಲ 'ಥಾವರ್ ಚಂದ್ರ ಗೆಹ್ಲೋಟ್' ಅವರು ಕೆಪಿಎಸ್ ಪಿ ಅಧ್ಯಕ್ಷ 'ಶಿವಶಂಕರಪ್ಪ ಎಸ್. ಸಾಹುಕಾರ್' ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಲೋಕಭವನದಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದ್ದು, ರಾಷ್ಟ್ರಪತಿಗಳ ಕಚೇರಿಯಿಂದ ಮುಂದಿನ ಆದೇಶ ಬರುವವರೆಗೆ ಅಮಾನತು ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಹಾಗೂ ಯಾವುದೇ ಪ್ರಭಾವ ಬೀರುವ ಸಾಧ್ಯತೆಯನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯನ್ನು ಹೇಳಲಾಗಿದೆ.
ಅಲ್ಲದೆ, ಮುಂದಿನ ಆದೇಶದವರೆಗೆ ಕೆಪಿಎಸ್ ಸಿಯ ಅತ್ಯಂತ ಹಿರಿಯ ಸದಸ್ಯರು ಆಯೋಗದ ತಾತ್ಕಾಲಿಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯಪಾಲರು ಸೂಚಿಸಿದ್ದಾರೆ.
ಕೆಪಿಎಸ್ ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ತಮ್ಮ ಇಬ್ಬರೂ ಪುತ್ರಿಯರ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಲೋಕಭವನಕ್ಕೆ ದೂರುಗಳು ಸಲ್ಲಿಕೆಯಾಗಿದ್ದವು.
ಕೆಪಿಎಸ್ಸಿ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ನೇರ ಅವಲಂಬಿತರು ಭಾಗವಹಿಸಿದ್ದ ಸಂದರ್ಭದಲ್ಲಿ ಅಧ್ಯಕ್ಷರು ಪ್ರಕ್ರಿಯೆಯಿಂದ ದೂರು ಉಳಿಯಬೇಕಾಗಿತ್ತು ಹಾಗೂ ಹಿತಾಸಕ್ತಿ ಸಂಘರ್ಷದ ಬಗ್ಗೆ ಘೋಷಣೆ ಮಾಡಬೇಕಾಗಿತ್ತು. ಆದರೆ, ಈ ನಿಯಮಗಳನ್ನು ಪಾಲಿಸಲಾಗಿಲ್ಲ ಎಂಬ ಅಂಶಗಳು ಪತ್ತೆಯಾಗಿವೆ ಎಂದು ಲೋಕಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆಪಿಎಸ್ ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ಪುತ್ರಿಯೊಬ್ಬರು ವಾರ್ಷಿಕ ₹40 ಸಾವಿರ ಕೌಟುಂಬಿಕ ಆದಾಯವನ್ನು ಘೋಷಿಸಿ ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಧ್ಯಕ್ಷರು ಕೆಪಿಎಸ್ ಸಿ ಮುಖ್ಯಸ್ಥರಾಗಿದ್ದು, ನಿಗದಿತ ಆದಾಯ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿದ್ದಾರೆ ಎಂಬ ಮಾಹಿತಿ ಇದ್ದರೂ, ಕಡಿಮೆ ಆದಾಯದ ಘೋಷಣೆಯ ಮೂಲಕ ಒಬಿಸಿ ಮೀಸಲಾತಿ ಹಾಗೂ ಕೆನೆಪದರ ವಿನಾಯಿತಿ ಪಡೆದಿದ್ದಾರೆ ಎಂದು ಲೋಕಭವನದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ನಿಯಮಗಳ ಪ್ರಕಾರ, ಕೆಪಿಎಸ್ ಸಿ ಅಧ್ಯಕ್ಷರ ಮಕ್ಕಳು ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲಾತಿ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ನಿಯಮಗಳ ಹೊರತಾಗಿಯೂ ಅನಗತ್ಯ ಲಾಭ ಪಡೆಯಲು ಪ್ರಮುಖ ಮಾಹಿತಿಗಳನ್ನು ಮರೆಮಾಚಲಾಗಿದೆ ಎಂಬ ಆರೋಪಗಳಿದ್ದು, ಈ ಬೆಳವಣಿಗೆಗೆ ಅಧ್ಯಕ್ಷರ ಆಡಳಿತಾತ್ಮಕ ಹೊಣೆಗಾರಿಕೆಯ ಕೊರತೆ ಅಥವಾ ಉದ್ದೇಶಪೂರ್ವಕ ನಿರ್ಲಕ್ಷ್ಯ ಕಾರಣವಾಗಿರಬಹುದು ಎಂದು ಹೇಳಲಾಗಿದೆ.
ಅಧ್ಯಕ್ಷರು ಸಲ್ಲಿಸಿರುವ ಆದಾಯ ಮತ್ತು ಆಸ್ತಿ ವಿವರಗಳು ಹಾಗೂ ಸಂಬಂಧಿತ ದಾಖಲೆಗಳಲ್ಲಿ ಕಂಡುಬಂದಿರುವ ಅಂಶಗಳು ಆರೋಪಗಳ ಪರಿಶೀಲನೆ ಅಗತ್ಯವಿದೆ ಎಂಬುದನ್ನು ಸೂಚಿಸುತ್ತವೆ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ವಿರುದ್ಧದ ಆರೋಪಗಳ ಕುರಿತು ಅಗತ್ಯ ತನಿಖೆ ನಡೆಸಲು ಭಾರತದ ಸಂವಿಧಾನದ 317(1)ನೇ ವಿಧಿಯಡಿ ರಾಷ್ಟ್ರಪತಿಗಳಿಗೆ ಉಲ್ಲೇಖ ಮಾಡುವಂತೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ.