BELAGAVI NEWS :
ಧಾರವಾಡ: ಸ್ವಂತ ದುಡಿಮೆಯಿಂದ ಬಂದ ಆದಾಯದಲ್ಲಿ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಹೊಂದಿರುವ ಧಾರವಾಡದ ದಂಪತಿ ಇದೀಗ ಮಾದರಿ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ. ಕೇಟರಿಂಗ್ ಸೇವೆಯಿಂದ ಬಂದ ಲಾಭದ ಒಂದು ಭಾಗವನ್ನು ಬಳಸಿಕೊಂಡು ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಸಮಾಜಕ್ಕೆ ಮರಳಿ ನೀಡಬೇಕು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಸಮಾಜ ಸೇವಕಿ, ರಾಜೇಶ್ವರಿ ಮಂಜುನಾಥ್ ಪವಾಡಿ ಅವರು ನಗರದ ಮಾಳಮಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 11ರ ಎಲ್ ಕೆಜಿ ಹಾಗೂ ಯುಕೆಜಿ ವಿಭಾಗದ 60 ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಿದ್ದಾರೆ.
ಧಾರವಾಡದಲ್ಲಿ "ಅಕ್ಕ ಕೆಫೆ " ನಡೆಸುತ್ತಿರುವ ರಾಜೇಶ್ವರಿ ಪವಾಡಿ, ರಜಾ ದಿನಗಳಲ್ಲಿ ಮದುವೆ ಸೀಮಂತ ಹಾಗು ವಿವಿಧ ಶುಭ ಸಮಾರಂಭಗಳಿಗೆ ಕೇಟರಿಂಗ್ ಸೇವೆಯನ್ನು ನೀಡುತ್ತಿದ್ದಾರೆ. ತಮ್ಮ ದುಡಿಮೆಯಿಂದ ಬಂದ ಆದಾಯದ ಒಂದು ಭಾಗವನ್ನು ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಿಗೆ ಮೀಸಲಿಟ್ಟು ಬಡವರು ಮತ್ತು ಅಗತ್ಯವಿರುವವರಿಗೆ ನೆರವಾಗುತ್ತಿದ್ದಾರೆ.
ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಮೂಲಕ ಶಿಕ್ಷಣಕ್ಕೆ ಉತ್ತೇಜನ ನೀಡಿರುವ ಅವರು, ಈ ಹಿಂದೆ ಅನ್ನದಾಸೋಹ, ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ, ಬಡ ಹೆಣ್ಣು ಮಕ್ಕಳ ವಿವರಕ್ಕೆ ನೆರವು, ಅಂಧ ಹಾಗೂ ಅನಾಥ ಮಕ್ಕಳಿಗೆ ಸಹಾಯ ಸೇರಿದಂತೆ ಹಲವು ಸಮಾಜ ಸೇವಾ ಕಾರ್ಯಗಳನ್ನು ಮಾಡಿದ್ದಾರೆ.
ಅವರ ನಿರಂತರ ಸಮಾಜಮುಖಿ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರವು ಪ್ರತಿಷ್ಠಿತ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದೆ.
ಸ್ವಂತ ಆದಾಯದಲ್ಲೇ ಸಮಾಜ ಸೇವೆ ಮಾಡುತ್ತಾ ಬಡ ಮಕ್ಕಳ ಶಿಕ್ಷಣಕ್ಕೆ ಬೆಂಬಲವಾಗಿ ನಿಂತಿರುವ ರಾಜೇಶ್ವರಿ ಮಂಜುನಾಥ್ ಪವಾಡಿ ಅವರ ಕಾರ್ಯ ಇತರರಿಗೂ ಪ್ರೇರಣೆಯಾಗಿದೆ. ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಇಂತಹ ಸೇವಾ ಮನೋಭಾವಗಳು ಹೆಚ್ಚಾದರೆ ಹಲವು ಮಕ್ಕಳ ಭವಿಷ್ಯಕ್ಕೆ ಹೊಸ ಬೆಳಕು ಸಿಗಲಿದೆ.