Belagavi News:
ನವದೆಹಲಿ: ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವ ಸುಧಾರಣೆಗೆ ಚಾಲನೆ ನೀಡಿದ್ದಾರೆ. ತಂತ್ರಜ್ಞಾನ ತಜ್ಞ ಹಾಗೂ ಆಧಾರ್ ಯೋಜನೆಯ ಪ್ರಮುಖ ರೂಪಶಿಲ್ಪಿ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಪ್ರಧಾನಿ ಭಾನುವಾರ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಸೆಲ್ಫಿ ವೀಡಿಯೋದಲ್ಲಿ ಮಾತನಾಡಿದ ಪ್ರಧಾನಿ ಮೋದಿ, " ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಸಮಿತಿಯು ಪರೀಕ್ಷಾ ವ್ಯವಸ್ಥೆಯ ಸಮಗ್ರ ಅಧ್ಯಯನ ನಡೆಸಿ ಅಗತ್ಯ ಶಿಫಾರಸುಗಳನ್ನು ಸಲ್ಲಿಸಲಿದೆ. ಈ ಕಾರ್ಯಪಡೆಯ ವರದಿಯ ಆಧಾರದ ಮೇಲೆ ಭವಿಷ್ಯದ ಪರೀಕ್ಷೆಗಳ ವಿಶ್ವಾಸಾರ್ಹತೆ, ಪಾರದರ್ಶಕತೆ ಹಾಗೂ ಗುಣಮಟ್ಟವನ್ನು ಇತ್ತಷ್ಟು ಬಲಪಡಿಸಲಾಗುವುದು" ಎಂದು ತಿಳಿಸಿದ್ದಾರೆ.
ಪರೀಕ್ಷಾ ಅಕ್ರಮಗಳ ವಿರುದ್ಧ ಕೇಂದ್ರ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ. "ವಿದ್ಯಾರ್ಥಿಗಳ ಭವಿಷ್ಯ ಮತ್ತು ಪರೀಕ್ಷಾ ಕ್ರಮಗಳ ಸುಧಾರಣೆಗಾಗಿ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಿದವರು ಈಗ ಜೈಲಿನಲ್ಲಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಯಾವುದೇ ರೀತಿಯ ಸಡಿಲಿಕೆ ಇರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪರೀಕ್ಷಾ ವ್ಯವಸ್ಥೆಯನ್ನು ತಂತ್ರಜ್ಞಾನ ಆಧಾರಿತ, ಪರಿಣಾಮಕಾರಿ ಮತ್ತು ಸಂಪೂರ್ಣ ಪಾರದರ್ಶಕವಾಗಿಸುವ ಗುರಿಯೊಂದಿಗೆ ಈ ಕಾರ್ಯಪಡೆ ಕೆಲಸ ಮಾಡಲಿದ್ದು, ಅದರ ಶಿಫಾರಸುಗಳ ಆಧಾರದ ಮೇಲೆ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಕೇಂದ್ರದ ಹೊಸ ಯೋಜನೆ:
ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. "ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿದ್ದೇವೆ. ಸೋಮವಾರ ಸಂಸತ್ತಿನಲ್ಲಿ ಕಠಿಣ ನಿಬಂಧನೆಗಳನ್ನು ಒಳಗೊಂಡ ಹೊಸ ಕಾಯ್ದೆಯನ್ನು ಮಂಡಿಸಲು ನಾವು ಸಿದ್ದರಾಗಿದ್ದೇವೆ. ಆದರೆ ಕೇವಲ ಶಿಕ್ಷೆ ಸಾಕಾಗುವುದಿಲ್ಲ. ಭವಿಷ್ಯದ ಪರೀಕ್ಷಾ ವ್ಯವಸ್ಥೆ ಪರಿಣಾಮಕಾರಿ, ಪಾರದರ್ಶಕ ಹಾಗೂ ತಂತ್ರಜ್ಞಾನ ಆಧಾರಿತವಾಗಿರಬೇಕು. ಇದೇ ಉದ್ದೇಶದಿಂದ ಉನ್ನತ ಮಟ್ಟದ ಕಾರ್ಯಪಡೆಗಳನ್ನು ರಚಿಸಲು ನಿರ್ಧರಿಸಿದ್ದೇವೆ" ಎಂದು ಪ್ರಧಾನಿ ಮೋದಿ ತಮ್ಮ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ನೀಟ್ ವಿವಾದದ ಬಳಿಕ ಮೂರನೇ ಮಹತ್ವದ ಘೋಷಣೆ:
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ರಾಷ್ಟ್ರ, ರಾಜಧಾನಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳು ರಾಷ್ಟ್ರದ ಗಮನ ಸೆಳೆದಿದ್ದವು. ಪ್ರತಿಭಟನೆಗಳ ವೇಳೆ ಪೊಲೀಸ್ ಬಲಪ್ರಯೋಗದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬೆಳವಣಿಗೆಗಳ ನಡುವೆಯೇ ಪ್ರಧಾನಿ ಮೋದಿ ಕಳೆದ ಮೂರು ದಿನಗಳಲ್ಲಿ ಪರೀಕ್ಷಾ ಸುಧಾರಣೆಗೆ ಸಂಬಂಧಿಸಿದ ಮೂರನೇ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.
ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾದವರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ವಿಧಿಸಲು ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿತ್ತು. ಬಳಿಕ ಸಾರ್ವಜನಿಕ ಒತ್ತಡದ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಿದ್ದು, ಇದೀಗ ನಂದನ್ ನಿಲೇಕಣಿ ನೇತೃತ್ವದಲ್ಲಿ ಪರೀಕ್ಷಾ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಕಾರ್ಯಪಡೆ ರಚಿಸುವ ನಿರ್ಧಾರ ಪ್ರಕಟಿಸಲಾಗಿದೆ.
ಇನ್ನೊಂದೆಡೆ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಹಾಗೂ ಟಿಯರ್ ಗ್ಯಾಸ್ ಪ್ರಯೋಗ ನಡೆಸಿದ್ದರು. ಈ ಘಟನೆಯಲ್ಲಿ ಹಲವಾರು ಯುವ ಪ್ರತಿಭಟನಾಕಾರರು ಗಾಯಗೊಂಡಿದ್ದು, ಕೆಲವು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.