Belagavi News:
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ನಗರ ಪಾಲಿಕೆಯ ಸಭಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಫಲಿತಾಂಶ ಪ್ರಕಟವಾಗಿದೆ. ಪರಿಶಿಷ್ಟ ಜಾತಿ ಕೋಟಾದಡಿ ನಿಯರ್ ಸ್ಥಾನಕ್ಕೆ ಈ ಹಿಂದೆ ಉಪಮೇಯರ್ ಹುದ್ದೆ ನಿರ್ವಹಿಸಿದ್ದ ದುರ್ಗಮ್ಮ ಬಿಜವಾಡ ಅವರು ಆಯ್ಕೆಯಾಗಿದ್ದಾರೆ. ಸಾಮಾನ್ಯ ವರ್ಗದ ಉಪಮೇಯರ್ ಸ್ಥಾನಕ್ಕೆ ರತ್ನಾಭಾಯಿ ನಾಝರೆ ಆಯ್ಕೆಯಾಗಿದ್ದಾರೆ. ಈ ಮೂಲಕ ಮಹಾನಗರ ಪಾಲಿಕೆಯ ಆಡಳಿತ ಮತ್ತು ಬಿಜೆಪಿಯ ಪಾಲಾಗಿದೆ.
24ನೇ ಅವಧಿಯಲ್ಲಿ ಧಾರವಾಡಕ್ಕೆ ಮೇಯರ್ ಸ್ಥಾನ ಲಭ್ಯವಾಗಿದ್ದರೆ, ಈ ಬಾರಿ 25ನೇ ಅವಧಿಯಲ್ಲಿ ಹುಬ್ಬಳ್ಳಿಗೆ ಮೇಯರ್ ಸ್ಥಾನ ದೊರೆತಿದೆ. ವಾರ್ಡ್ ನಂ. 69ರ ದುರ್ಗಮ್ಮ ಬಿಜವಾಡ ಅವರು ಮೇಯರ್ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರೆ, ಧಾರವಾಡದ ವಾರ್ಡ್ ನಂ. 9ರ ರತ್ನಾಭಾಯಿ ನಾಝರೆ ಉಪಮೇಯರ್ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಯಾಗಿದ್ದರು .
ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ವಾರ್ಡ್ ನಂ. 20ರ ಕವಿತಾ ಕಬ್ಬೇರ್ ಅವರನ್ನು ಮೇಯರ್ ಸ್ಥಾನಕ್ಕೆ ಹಾಗೂ ವಾರ್ಡ್ ನಂ. 6ರ ದಿಲ್ಶಾದ್ ಬೇಗಂ ನದಾಫ್ ಅವರನ್ನು ಉಪಮೇಯ ಸ್ಥಾನಕ್ಕೆ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿತ್ತು.
ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಂಸದ ಪ್ರಲ್ಹಾದ್ ಜೋಶಿ, ಎಂ. ನಾಗರಾಜ್, ಶಾಸಕರಾದ ಅರವಿಂದ್ ಬೆಲ್ಲದ, ಮಹೇಶ್ ತೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಸಂದೀಪ್ ಶೆಟ್ಟರ್, ಎಸ್ .ವಿ. ಸಂಕನೂರ, ಲಿಂಗರಾಜ್ ಪಾಟೀಲ್ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದರು. ಇಂಥ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶಾಸಕರಾದ ಪ್ರಸಾದ್ ಅಬ್ಬಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಹೆಚ್.
ಎಫ್ .ಜಕ್ಕಪ್ಪನವರ ಬೆಂಬಲ ನೀಡಿದರು.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 92 ಸದಸ್ಯರ ಪಾಲಿಕೆ ಸಂಖ್ಯಾಬಲದಲ್ಲಿ 88 ಸದಸ್ಯರು ಹಾಜರಾಗಿದ್ದು, ನಾಲ್ವರು ಸದಸ್ಯರು ಗೈರಾಗಿದ್ದರು.
ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ದುರ್ಗಮ್ಮ ಬಿಜವಾಡ ಅವರು 50 ಮತಗಳನ್ನು ಪಡೆದು ಜಯಗಳಿಸಿದರೆ, ಪ್ರತಿಸ್ಪರ್ಧಿ ಕವಿತಾ ಕಬ್ಬೇರ್ ಅವರು 32 ಮತಗಳನ್ನು ಪಡೆದಿದ್ದಾರೆ. ಉಪಮೇಯರ್ ಸ್ಥಾನಕ್ಕೆ ರತ್ನಾಭಾಯಿ ನಾಝರೆ ಅವರು 50 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಜಿ.ಎಸ್. ಜಾನಕಿ ಅಧಿಕೃತವಾಗಿ ಘೋಷಿಸಿದರು.
ಫಲಿತಾಂಶ ಪ್ರಕಟವಾದ ಬಳಿಕ ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸೇರಿಸಿ ಸಂಭ್ರಮಾಚರಣೆ ನಡೆಸಿದರು. ದುರ್ಗಮ್ಮ ಬಿಜವಾಡ ಅವರು ಈ ಹಿಂದೆ ಒಂದೇ ಅವಧಿಯಲ್ಲಿ ಉಪಮೇಯರ್ ಹುದ್ದೆ ನಿರ್ವಹಿಸಿದ್ದವರು ಆಗಿದ್ದು, ಇದೀಗ ನೇರವಾಗಿ ಮೇಯರ್ ಸ್ಥಾನ ಅಲಂಕರಿಸಿರುವುದು ವಿಶೇಷವಾಗಿದೆ.