Belagavi News:
ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಇನ್ನಷ್ಟು ಕಠಿಣ ಕ್ರಮ: ಫಾಸ್ಟ್ - ಟ್ರ್ಯಾಕ್ ನ್ಯಾಯಾಲಯಗಳ ಘೋಷಣೆ ಮಾಡಿದ ಪ್ರಧಾನಿ ಮೋದಿ
ನೀಟ್ - ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕೇಂದ್ರ ಸರ್ಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಘೋಷಿಸಿದ್ದಾರೆ.
ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಪ್ರಧಾನಿ, ಪ್ರಶ್ನೆ ಪತ್ರಿಕೆ ಸೋರಿಕೆ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಭವಿಷ್ಯದೊಂದಿಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ ಎಂದು ಹೇಳಿದ್ದಾರೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ಖಚಿತಪಡಿಸಲು ಫಾಸ್ಟ್ - ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಪ್ರಕಾರ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಸರ್ಕಾರ ತಕ್ಷಣವೇ ಕ್ರಮ ಕೈಗೊಂಡಿದ್ದು, ಕಳೆದ ಎರಡುವರೆ ತಿಂಗಳಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಜಾರಿಗೊಳಿಸಲಾಗಿದೆ. ಹಲವು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, ಇನ್ನು ಮುಂದೆ ಇಂತಹ ಅಪರಾಧಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಫಾಸ್ಟ್- ಟ್ರ್ಯಾಕ್ ನ್ಯಾಯಾಲಯಗಳು ಹಾಗೂ ಅಪರಾಧಿಗಳಿಗೆ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕರಡು ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಪರಿಗಣಿಸಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಇದೇ ವೇಳೆ, ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ವಿವರವಾದ ಚರ್ಚೆ ನಡೆಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿದ್ದು, ಈ ವಿಚಾರ ಸಂಸತ್ ಒಳಗೂ ಹೊರಗೂ ರಾಜಕೀಯ ಚರ್ಚೆಗೆ ಕಾರಣವಾಗಿದೆ.
"ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಅವರ ಭವಿಷ್ಯಕ್ಕಿಂತ ದೊಡ್ಡದು ಯಾವುದು ಇಲ್ಲ. ನಮ್ಮ ಯುವಜನರ ಕನಸುಗಳಿಗೆ ಧಕ್ಕೆ ತರುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ" ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.