belagavi news :
ಅಫ್ಘನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿ ಬೀಕರ ದುರಂತಕ್ಕೆ ಕಾರಣವಾಗಿದ್ದು, ಘಟನೆಯಲ್ಲಿ 11 ಮಕ್ಕಳು ಸೇರಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಿಂದ ಅಫ್ಘಾನ್ - ಪಾಕ್ ಗಡಿ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದೆ.
ಮಧ್ಯ ಏಷ್ಯಾದ ಗಡಿ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆಯ ದೃಷ್ಟಿಯಿಂದ ಈ ಘಟನೆ ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ.ಇತ್ತೀಚಿನ ದಿನಗಳಲ್ಲಿ ಎರಡು ದೇಶಗಳ ನಡುವಿನ ಗಡಿ ಭಾಗದಲ್ಲಿ ಹೆಚ್ಚುತ್ತಿರುವ ಮಿಲಿಟರಿ ಚಟುವಟಿಕೆಗಳು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿವೆ.
ಈ ಬಿಕ್ಕಟ್ಟನ್ನು ಶಾಂತಿಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಸೇರಿದಂತೆ ಅಂತರಾಷ್ಟ್ರೀಯ ಸಮುದಾಯವು ಮಾತುಕತೆಗೆ ಕರೆ ನೀಡಿದೆ. ಜೊತೆಗೆ ಭಾರತ ಸೇರಿದಂತೆ ಹಲವು ದೇಶಗಳು ರಾಜತಾಂತ್ರಿಕ ಮಾರ್ಗದ ಮೂಲಕ ಉದ್ವಿಗ್ನತೆಯನ್ನು ಶಮನಗೊಳಿಸಲು ಹಾಗೂ ನಾಗರಿಕ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿವೆ.
ಅಪ್ಘಾನಿಸ್ತಾನದ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರ ಅಧಿಕೃತ ಪ್ರಕಟಣೆಯ ಪ್ರಕಾರ, ಕುನಾರ್, ಖೋಸ್ಟ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ಇತ್ತೀಚಿಗೆ ವೈಮಾನಿಕ ನಿಗಾ ಹಾಗೂ ಬಾಂಬ್ ದಾಳಿಗಳು ನಡೆದಿವೆ.ಈ ದಾಳಿಗಳಲ್ಲಿ ಕೆಲವು ನಾಗರಿಕರು,ಮಹಿಳೆಯರು ಮತ್ತು ಮಕ್ಕಳ ತೊಂದರೆಗೆ ಒಳಗಾಗಿರುವ ಬಗ್ಗೆ ಅಫ್ಘಾನ್ ಆಡಳಿತ ಮಾಹಿತಿ ನೀಡಿದೆ.
ಈ ಘಟನೆಗಳಿಂದ ಅಫ್ಘಾನ್ - ಪಾಕ್ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಗಡಿ ಭದ್ರತೆ ಮತ್ತು ನಾಗರಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉಭಯ ದೇಶಗಳ ರಕ್ಷಣಾ ವಿಭಾಗಗಳು ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.
ಇದೇ ವೇಳೆ ಪಾಕಿಸ್ತಾನ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು,ದೇಶದೊಳಗೆ ಅಶಾಂತಿ ಸೃಷ್ಟಿಸುತ್ತಿರುವ ನಿಷೇಧಿತ ಸಂಘಟನೆಗಳಿಗೆ ಗಡಿ ಭಾಗದಲ್ಲಿ ಆಶ್ರಯ ಸಿಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.ಯಾವುದೇ ವಿದೇಶಿ ಸಂಘಟನೆಗಳು ತನ್ನ ಭೂಮಿಯನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಹಾಗೂ ಗಡಿಯಲ್ಲಿನ ನುಸುಳುವಿಕೆಯನ್ನು ತಡೆಯಲು ಬದ್ಧವಾಗಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.
ಅಫ್ಘಾನಿಸ್ತಾನವೂ ತನ್ನ ಭಾಗದಲ್ಲಿ ಗಡಿ ಸುರಕ್ಷತೆ ಮತ್ತು ರಾಷ್ಟ್ರ ಭದ್ರತೆಯನ್ನು ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.ಈ ಬೆಳವಣಿಗೆಗಳ ನಡುವೆ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪನೆಗೆ ರಾಜತಾಂತ್ರಿಕ ಪ್ರಯತ್ನಗಳ ಅಗತ್ಯತೆ ಮತ್ತಷ್ಟು ಹೆಚ್ಚಾಗಿದೆ.
ವಿಶ್ವಸಂಸ್ಥೆ ಮತ್ತು ಭಾರತದ ಶಾಂತಿ ಮಂತ್ರ ಅಫ್ಘಾನಿಸ್ತಾನದಲ್ಲಿ ದೀರ್ಘಕಾಲದಿಂದ ಇರುವ ಮಾನವೀಯ ಬಿಕ್ಕಟ್ಟನ್ನು ನೀಗಿಸಲು ಮತ್ತು ಅಲ್ಲಿನ ನಾಗರಿಕರ, ಅದರಲ್ಲೂ ಮುಖ್ಯವಾಗಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ವಿಶ್ವಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಭಾರತವು ಕೂಡ ವಿಶ್ವ ಸಂಸ್ಥೆಯ ವೇದಿಕೆಯಲ್ಲಿ ಅಫ್ಘಾನ್ ನಾಗರಿಕರ ರಕ್ಷಣೆ ಮತ್ತು ಆ ಭಾಗದಲ್ಲಿ ಶಾಂತಿ ಸ್ಥಾಪನೆಯಾಗಬೇಕಾದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಯಲ್ಲಿ ಉಂಟಾಗಿರುವ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸದೇ, ಉಭಯ ದೇಶಗಳು ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದು ಜಾಗತಿಕ ನಾಯಕರ ಪ್ರಮುಖ ಒತ್ತಾಯವಾಗಿದೆ.ಗಡಿ ನಿಯಮಾವಳಿಗಳನ್ನು ಗೌರವಿಸಿ ಶಾಂತಿಯುತ ಮಾರ್ಗವನ್ನು ಅನುಸರಿಸುವುದು ಪ್ರಾದೇಶಿಕ ಸ್ಥಿರತೆಗೆ ಅವಶ್ಯಕವೆಂದು ಅಂತರ ರಾಷ್ಟ್ರೀಯ ಸಮುದಾಯ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ,ಉಭಯ ರಾಷ್ಟಗಳು ಪರಸ್ಪರ ಸಂವಾದ ಮತ್ತು ಸಹಕಾರದ ಮೂಲಕ ಬಿನ್ನಾಭಿಪ್ರಾಯಗಳನ್ನು ನಿವಾರಿಸಿ ಗಡಿಭಾಗದಲ್ಲಿ ಶಾಂತಿ ಮರುಸ್ಥಾಪನೆಗೆ ಮುಂದಾಗಬೇಕೆಂದು ಸಲಹೆ ನೀಡಲಾಗಿದೆ.ದೀರ್ಘಕಾಲದ ಸಂಘರ್ಷವನ್ನು ತಪ್ಪಿಸಲು ರಾಜತಾಂತ್ರಿಕ ಪ್ರಯತ್ನಗಳು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಈ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ದೊರೆತರೆ, ಮಧ್ಯ ಏಷ್ಯಾದ ಪ್ರಾದೇಶಿಕ ಸ್ಥಿರತೆ ಮಾತ್ರವಲ್ಲದೆ ಆರ್ಥಿಕ ಸಹಕಾರ,ವ್ಯಾಪಕ ವಿಸ್ತರಣೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಹೊಸ ದಾರಿ ತೆರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
Also Read:
ಕರ್ನಾಟಕದಲ್ಲಿ ಮಳೆರಾಯನ ಅಬ್ಬರ! ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ಜನರಿಗೆ ಎಚ್ಚರಿಕೆ