Belagavi News:
ಹುಬ್ಬಳ್ಳಿ: ದೂದ್ ಸಾಗರ್ ಜಲಪಾತ ವೀಕ್ಷಿಸಲು ರೈಲು ಹಳಿಗಳ ಮೂಲಕ ಅಕ್ರಮವಾಗಿ ಚಾರಣ ನಡೆಸುತ್ತಿದ್ದ 32 ಪ್ರವಾಸಿಗರ ವಿರುದ್ಧ ರೈಲ್ವೆ ರಕ್ಷಣಾ ಪಡೆ ( RPF) ಕಠಿಣ ಕ್ರಮ ಕೈಗೊಂಡಿದ್ದು, ಒಟ್ಟು 16 ಸಾವಿರ ರೂ. ದಂಡ ವಸೂಲಿ ಮಾಡಿದೆ.
ಜುಲೈ 5 ರಂದು ಕ್ಯಾಸಲ್ ರಾಕ್ ರೈಲ್ವೆ ರಕ್ಷಣಾ ಪಡೆಯ ಉಪನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ದೂದ್ ಸಾಗರ್ (DDS) ಹಾಗೂ ಸೋನಾಲಿಯಂ (LIM) ರೈಲು ನಿಲ್ದಾಣಗಳ ವ್ಯಾಪ್ತಿಯಲ್ಲಿ ದಿಢೀರ್ ತಪಾಸಣೆ ನಡೆಸಿದ ಅಧಿಕಾರಿಗಳು, ಅರಣ್ಯ ಮಾರ್ಗದಿಂದ ಅಕ್ರಮವಾಗಿ ರೈಲು ಹಳಿಗೆ ಪ್ರವೇಶಿಸಿ ಜಲಪಾತದತ್ತ ತೆರಳುತ್ತಿದ್ದ 32 ಪ್ರವಾಸಿಗರನ್ನು ಪತ್ತೆಹಚ್ಚಿದರು.
ಪ್ರವಾಸಿಗರ ವಿರುದ್ಧ " ರೈಲ್ವೆ ಕಾಯ್ದೆಯ ಸೆಕ್ಷನ್ 147" ರಡಿ ಪ್ರಕರಣ ದಾಖಲಿಸಿ, ಪ್ರತಿಯೊಬ್ಬರಿಂದ ತಲಾ "500 ರೂ." ಗಳಂತೆ ಒಟ್ಟು " 16,000 ರೂ." ದಂಡ ವಸೂಲಿ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಈಗಾಗಲೇ ಸುರಕ್ಷತಾ ಕಾರಣಗಳಿಂದ ದೂದ್ ಸಾಗರ್ ಜಲಪಾತಕ್ಕೆ ರೈಲು ಹಳಿಯ ಮೂಲಕ ಪ್ರವೇಶಿಸುವುದನ್ನು ಸಂಪೂರ್ಣ ನಿಷೇಧಿಸಿದೆ. ಆದರೂ ಮಳೆಗಾಲದಲ್ಲಿ ಕೆಲ ಪ್ರವಾಸಿಗರು ಅರಣ್ಯ ಮಾರ್ಗದಿಂದ ಗುಪ್ತವಾಗಿ ರೈಲು ಹಳಿಗೆ ಪ್ರವೇಶಿಸಿ ಜಲಪಾತದತ್ತ ಚಾರಣ ನಡೆಸುತ್ತಿರುವುದು ಕಂಡುಬರುತ್ತಿದೆ. ಇಂತಹ ಅಕ್ರಮ ಸಂಚಾರದಿಂದ ರೈಲು ಸಂಚಾರಕ್ಕೂ ಅಡ್ಡಿಯಾಗುವ ಜೊತೆಗೆ ಸಾರ್ವಜನಿಕರ ಜೀವನಕ್ಕೂ ಗಂಭೀರ ಅಪಾರ ಎದುರಾಗುವ ಸಾಧ್ಯತೆ ಇರುವುದರಿಂದ, ನಿಯಮ ಉಲ್ಲಂಘಿಸುವವರ ವಿರುದ್ಧ ಮುಂದೆಯೂ ಕಠಿಣ ಕ್ರಮ ಮುಂದುವರಿಯಲಿದೆ ಎಂದು ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.