Belagavi News:
ರಾಜ್ಯದಲ್ಲಿ ಈ ವರ್ಷದ ಮುಂಗಾರು ಆರಂಭದಲ್ಲೇ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜೂನ್ 1 ರಿಂದ 15 ರವರೆಗೆ ಕರ್ನಾಟಕದಲ್ಲಿ ಒಟ್ಟಾರೆ ಶೇ. 21 ರಷ್ಟು ಮಳೆ ಕೊರತೆ ದಾಖಲಾಗಿದ್ದು, ಕೃಷಿ ಹಾಗೂ ಜಲ ಸಂಪನ್ಮೂಲಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಸಾಮಾನ್ಯವಾಗಿ ಅಧಿಕ ಮಳೆ ಯಾಗುವ ಕರಾವಳಿ ಭಾಗದಲ್ಲಿ ಶೇ. 41 ಹಾಗೂ ಮಲೆನಾಡು ಪ್ರದೇಶದಲ್ಲಿ ಶೇ. 36ರಷ್ಟು ಮಳೆ ಕೊರತೆ ಕಂಡು ಬಂದಿದೆ. ಈ ಬೆಳವಣಿಗೆ ರೈತರು ಹಾಗೂ ಸಾರ್ವಜನಿಕರಲ್ಲಿ ಚಿಂತೆ ಮೂಡಿಸಿದೆ.
ಮಳೆಯ ಭಾವ ಮತ್ತು ಹೆಚ್ಚುತ್ತಿರುವ ತಾಪಮಾನದ ಪರಿಣಾಮವಾಗಿ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿನ ನೀರಿನ ಸಂಗ್ರಹವು ಕುಸಿದಿದೆ. ಪ್ರಸ್ತುತ ಡ್ಯಾಂಗಳಲ್ಲಿ ನೀರಿನ ಮಟ್ಟ ಶೇ. 23 ರಷ್ಟೇ ಉಳಿದಿದ್ದು, ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗದಿದ್ದರೆ ಕುಡಿಯುವ ನೀರು, ಕೃಷಿ ಹಾಗೂ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಹವಾಮಾನ ತಜ್ಞರ ಪ್ರಕಾರ, ಮುಂಗಾರು ಚುರುಕುಗೊಳ್ಳದಿದ್ದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯಿದ್ದು, ಮುಂದಿನ ಕೆಲವು ವಾರಗಳ ಮಳೆಯ ಪ್ರಮಾಣ ನಿರ್ಣಾಯಕವಾಗಲಿದೆ.
ಕರ್ನಾಟಕದಲ್ಲಿ ಮುಂಗಾರು ದುರ್ಬಲ - ಎಲ್ ನಿನೋ ಪರಿಣಾಮದಿಂದ ಮಳೆ ಕೊರತೆ, ಹಲವು ಜಿಲ್ಲೆಗಳಲ್ಲಿ 40 ಡಿಗ್ರಿ ತಾಪಮಾನ:
ರಾಜ್ಯಕ್ಕೆ ಜೂನ್ ನಾಲ್ಕರಂದು ಮುಂಗಾರು ಪ್ರವೇಶಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಯಾಗದೆ ಆತಂಕ ಹೆಚ್ಚಿಸಿದೆ. ಜೂನ್ 15ರವರೆಗೆ ರಾಜ್ಯದಲ್ಲಿ 85.5 ಮಿಮೀ ವಾಡಿಕೆ ಮಳೆಯಾಗಬೇಕಿದ್ದರೆ, ಕೇವಲ 67 ಮಿಮೀ ಮಳೆಯಷ್ಟೇ ದಾಖಲಾಗಿದ್ದು, ಶೇ. 21 ರಷ್ಟು ಮಳೆ ಕೊರತೆ ಉಂಟಾಗಿದೆ.
ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥ ಎನ್ ಪುವಿಯರಸನ್ ಅವರ ಪ್ರಕಾರ, ಎಲ್ ನಿನೋ ಪರಿಣಾಮದಿಂದ ಈ ಬಾರಿ ಮುಂಗಾರು ಮಾರುತಗಳು ದುರ್ಬಲಗೊಂಡಿದ್ದು, ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ. ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ಭಾವ ತೀವ್ರವಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಸದ್ಯ ಅರಬ್ಬಿ ಸಮುದ್ರದಲ್ಲಿ ಯಾವುದೇ ವಾಯುಭಾರ ಕುಸಿತದ ಲಕ್ಷಣಗಳು ಕಂಡುಬರದ ಕಾರಣ ಕರಾವಳಿ ಭಾಗಗಳಲ್ಲಿ ಒಣ ಹವಮಾನ ಮುಂದುವರಿದಿದೆ. ಇದೇ ವೇಳೆ ರಾಜ್ಯದ ಶೇ. 82 ರಷ್ಟು ಪ್ರದೇಶದಲ್ಲಿ 30 ರಿಂದ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ.
ಕಲ್ಬುರ್ಗಿ, ಕೊಪ್ಪಳ, ಬಳ್ಳಾರಿ, ಬೆಳಗಾವಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿಯಿಂದ 40.5 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿದ್ದು, ಮುಂಗಾರು ಕಾಲದಲ್ಲಿಯೂ ಬೇಸಿಗೆಯ ವಾತಾವರಣ ಮುಂದುವರಿದಿದೆ. ಮಳೆ ಚುರುಕುಗೊಳ್ಳದಿದ್ದರೆ ಜಲಾಶಯಗಳ ನೀರಿನ ಮಟ್ಟ ಮತ್ತು ಕೃಷಿ ಚಟುವಟಿಕೆಗಳ ಮೇಲೆ ಮತ್ತಷ್ಟು ಒತ್ತಡ ಉಂಟಾಗುವ ಸಾಧ್ಯತೆ ಇದೆ.
ಮಳೆ ಕೊರತೆಯಿಂದ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ :
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಮತ್ತು ತೀವ್ರ ಬಿಸಿಲಿನ ಪರಿಣಾಮ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕರ್ನಾಟಕದ 14 ಪ್ರಮುಖ ಜಲಾಶಯಗಳ ಒಟ್ಟು 896 TMC ಸಂಗ್ರಹ ಸಾಮರ್ಥ್ಯದಲ್ಲಿ ಪ್ರಸ್ತುತ ಕೇವಲ 206 TMC ನೀರು ಮಾತ್ರ ಉಳಿದಿದ್ದು, ಸಾಮರ್ಥ್ಯದ 23% ಆಗಿದೆ.
ಜಲಾಶಯಗಳಲ್ಲಿನ ನೀರಿನ ಮಟ್ಟ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಗಮನಾರ್ಹವಾಗಿ ಕುಸಿದಿದೆ. ವಿಶೇಷವಾಗಿ ಕಾವೇರಿ ನದಿ ಕೊಳ್ಳದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಕೇವಲ 34 TMC ನೀರು ಮಾತ್ರ ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 77 ಟಿಎಂಸಿ ನೀರಿತ್ತು .
ಇದೇ ವೇಳೆ ಕೃಷ್ಣಾ ನದಿ ಕೊಳ್ಳದ ಆರು ಪ್ರಮುಖ ಜಲಾಶಯಗಳ ಒಟ್ಟು 423 ಟಿಎಂಸಿ ಸಂಗ್ರಹ ಸಾಮರ್ಥ್ಯದಲ್ಲಿ ಕೇವಲ 94 ಟಿಎಂಸಿ ನೀರು ಮಾತ್ರ ಉಳಿದಿದೆ. ಮಳೆ ಕೊರತೆ ಮುಂದುವರೆದರೆ ಕೃಷಿ, ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.
ತಜ್ಞರ ಪ್ರಕಾರ, ಮುಂದಿನ ಕೆಲವಾರಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗದಿದ್ದರೆ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ರೈತರು ಮತ್ತು ಸಾರ್ವಜನಿಕರು ಈಗ ಮುಂಗಾರು ಚುರುಕಾಗುವ ನಿರೀಕ್ಷೆಯಲ್ಲಿದ್ದಾರೆ.
ಕರ್ನಾಟಕದಲ್ಲಿ ಬರದ ಆತಂಕ ಹೆಚ್ಚಳ - ಕುಡಿಯುವ ನೀರಿಗೆ ಮೊದಲ ಆದ್ಯತೆ, ಜುಲೈ ನಲ್ಲಿ ಸರ್ಕಾರದ ಮಹತ್ವದ ನಿರ್ಧಾರ:
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಿನ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಮೀಸಲಿಡಲು ಸರ್ಕಾರ ಆದ್ಯತೆ ನೀಡಲು ಮುಂದಾಗಿದೆ.
ಕಂದಾಯ ಇಲಾಖೆ ಕಮಿಷನರ್ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದು, ಜುಲೈ ಮೊದಲ ವಾರದಲ್ಲಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟವನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು. ಆ ಬಳಿಕ ಬರ ಪರಿಸ್ಥಿತಿ ಘೋಷಿಸುವ ಕುರಿತು ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಮುಂಗಾರು ಮಳೆ ಕೊರತೆ, ಜಲಾಶಯಗಳಲ್ಲಿನ ನೀರಿನ ಸಂಗ್ರಹ ಕುಸಿತ ಹಾಗೂ ಹೆಚ್ಚುತ್ತಿರುವ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ಕೃಷಿ ಸೇರಿದಂತೆ ಎಲ್ಲಾ ಇಲಾಖೆಗಳು ಅಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ತುರ್ತು ಪರಿಸ್ಥಿತಿ ನಿರ್ವಹಣಾ ಯೋಜನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ ಮುಂದುವರೆದರೆ ಕೃಷಿ ಚಟುವಟಿಕೆ, ಕುಡಿಯುವ ನೀರಿನ ಪೂರೈಕೆ ಹಾಗೂ ಗ್ರಾಮೀಣ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕೆಲವು ವಾರಗಳ ಮಳೆಯ ಪ್ರಮಾಣ ರಾಜ್ಯದ ಭವಿಷ್ಯ ನಿರ್ಧರಿಸುವ ಪ್ರಮುಖ ಅಂಶವಾಗಲಿದೆ.
Also Read: