Belagavi News:
ಸರಳ ವಿಧಾನದ ಮೂಲಕ ಸಖತ್ ಟೇಸ್ಟಿಯಾದ ಬೆಂಡೆಕಾಯಿ ಫ್ರೈ ರೆಸಿಪಿಯನ್ನು ಮನೆಯಲ್ಲಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಬಾಯಲ್ಲಿ ನೀರೂರಿಸುವ ಬೆಂಡೆಕಾಯಿ ಫ್ರೈ: ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ಸವಿಯಬೇಕೆನಿಸುತ್ತದೆ.
ಬೆಂಡೆಕಾಯಿ ಅನೇಕರಿಗೆ ಬಹಳ ಇಷ್ಟವಾಗುವ ತರಕಾರಿ. ಇದರಿಂದ ಲೆಕ್ಕವಿಲ್ಲದಷ್ಟು ವಿಭಿನ್ನ ರೆಸಿಪಿಗಳು ತಯಾರಿಸಬಹುದು. ವಿಶೇಷವಾಗಿ ಮದುವೆ ಸಮಾರಂಭಗಳಲ್ಲಿ ಸಿಗುವ ಶೈಲಿಯ ಬೆಂಡೆಕಾಯಿ ಫ್ರೈ ಎಲ್ಲರಿಗೂ ಮೆಚ್ಚುಗೆ ಪಡೆಯುತ್ತದೆ. ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕು ಎನ್ನುವಷ್ಟು ರುಚಿಕರವಾಗಿರುವ ಈ ಫ್ರೈ ಅದರ ಗರಿಗರಿಯಾದ ತಿರುಳು ಮತ್ತು ಅದ್ಭುತ ಸುವಾಸನೆಯಿಂದ ಎಲ್ಲರ ಗಮನ ಸೆಳೆಯುತ್ತದೆ.
ಈ ಶೈಲಿಯ ಬೆಂಡೆಕಾಯಿ ಫ್ರೈ ಅನ್ನು ಊಟದ ಜೊತೆ ಸೈಡ್ ಡಿಶ್ ಆಗಿ ಸವಿಯಬಹುದು. ಬಿಸಿ ಬಿಸಿ ಅನ್ನ ಸಾಂಬಾರ್ ಅಥವಾ ಮೊಸರನ್ನದ ಜೊತೆಗೆ ಇದು ಅದ್ಭುತ ಕಾಂಬಿನೇಷನ್ ಆಗುತ್ತದೆ. ಇದೇ ಕಾರಣಕ್ಕೆ ಅನೇಕರು ಈ ರುಚಿಯನ್ನು ಮನೆಯಲ್ಲಿ ಮರು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಆದರೆ ಸರಿಯಾದ ಗರಿಗರಿತನ ಮತ್ತು ರುಚಿಯ ಸಮತೋಲನ ಸಾಧಿಸುವುದು ಕೆಲವೊಮ್ಮೆ ಕಷ್ಟವಾಗಬಹುದು.
ಇದೀಗ ಮನೆಯಲ್ಲಿ ಸುಲಭವಾಗಿ ಸಖತ್ ಟೇಸ್ಟಿ ಮತ್ತು ಕ್ರಿಸ್ಪಿ ಬೆಂಡೆಕಾಯಿ ಫ್ರೈ ತಯಾರಿಸುವುದು ವಿಧಾನವನ್ನು ನೋಡೋಣ..
ಬೆಂಡೆಕಾಯಿ ಫ್ರೈ ಗಾಗಿ ಬೇಕಾಗುವ ಸಾಮಗ್ರಿಗಳು:
• ಬೆಂಡೆಕಾಯಿ- 1 ಕೆಜಿ
• ಅಕ್ಕಿ ಹಿಟ್ಟು - ಅರ್ಧ ಕಪ್
• ಕಡಲೆಬೇಳೆ ಹಿಟ್ಟು - ಅರ್ಧ ಕಪ್
• ಖಾರದಪುಡಿ - 4 ಟೀಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ಕಾರ್ನ್ ಫ್ಲೋರ್ - 4 ಟೀ ಸ್ಪೂನ್
• ಗರಂ ಮಸಾಲ - 1 ಟೀಸ್ಪೂನ್
• ಆಮ್ಚೂರ್ ಪುಡಿ (ಒಣ ಮಾವಿನ ಪುಡಿ) -1 ಟೀಸ್ಪೂನ್
• ಜೀರಿಗೆ ಪುಡಿ - 1 ಟೀಸ್ಪೂನ್
• ಅರಿಶಿನ ಪುಡಿ ಅರ್ಧ ಟೀಸ್ಪೂನ್
• ಧನಿಯಾ ಪುಡಿ - 2 ಟೀಸ್ಪೂನ್
• ಶೇಂಗಾ ಅರ್ಧ ಕಪ್
• ಗೋಡಂಬಿ -ಸ್ವಲ್ಪ
• ಬೆಳ್ಳುಳ್ಳಿ ಎಸಳು - 25
• ಹಸಿ ಮೆಣಸಿನಕಾಯಿ - 8
• ಕರಿಬೇವು - ಸ್ವಲ್ಪ
• ಎಣ್ಣೆ ಅಗತ್ಯಕ್ಕೆ ತಕ್ಕಷ್ಟು
ಗರಿಗರಿಯಾದ ಮದುವೆ ಶೈಲಿಯ ಬೆಂಡೆಕಾಯಿ ಫ್ರೈ ತಯಾರಿಸುವ ವಿಧಾನ:
1. ರುಚಿಕರವಾದ ಗರಿಗರಿಯಾದ ಬೆಂಡೆಕಾಯಿ ಫ್ರೈ ತಯಾರಿಸಲು ಮೊದಲು ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಬಟ್ಟೆಯಿಂದ ಒಣಗಿಸಿ. ನಂತರ ಅವುಗಳ ತುದಿಗಳನ್ನು ಕತ್ತರಿಸಿ ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಬೇಕು. ತುಂಡುಗಳು ತುಂಬಾ ತೆಳ್ಳಗೆ ಅಥವಾ ತುಂಬಾ ದಪ್ಪವಾಗಿರಬಾರದು.
2. ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಅರ್ಧ ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ಕಡಲೆ ಹಿಟ್ಟು ಹಾಗೂ 4 ಚಮಚ ಕಾರ್ನ್ ಫ್ಲೋರ್ ಹಾಕಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, 4 ಚಮಚ ಖಾರದ ಪುಡಿ, 1 ಚಮಚ ಜೀರಿಗೆ ಪುಡಿ, 1 ಚಮಚ ಗರಂ ಮಸಾಲ, 2 ಚಮಚ ಧನಿಯಾ ಪುಡಿ, 1 ಚಮಚ ಆಮ್ಚೂರ್ ಪುಡಿ ಹಾಗೂ ಅರ್ಧ ಚಮಚ ಅರಿಶಿಣ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
3. ಈ ಮಿಶ್ರಣಕ್ಕೆ ಕತ್ತರಿಸಿದ ಬೆಂಡೆಕಾಯಿ ತುಂಡುಗಳನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅಗತ್ಯವಿದ್ದರೆ ಸ್ವಲ್ಪ ನೀರನ್ನು ಸಿಂಪಡಿಸಿ, ಹಿಟ್ಟು ತುಂಡುಗಳಿಗೆ ಸಮವಾಗಿ ಅಂಟಿಕೊಳ್ಳುವಂತೆ ಮಾಡಬೇಕು. ಮಿಶ್ರಣ ತುಂಬಾ ದ್ರವವಾಗದಂತೆ ಮಾಧ್ಯಮ ದಪ್ಪವಾಗಿರಬೇಕು.
4. ನಂತರ ಬಾಣಲೆಯಲ್ಲಿ ಆಳವಾಗಿ ಹುರಿಯಲು ಸಾಕಷ್ಟು ಎಣ್ಣೆ ಹಾಕಿ ಬಿಸಿಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ನಂತರ ಅರ್ಧ ಕಪ್ ಕಡಲೆಕಾಯಿ ಹಾಕಿ ಕಡಿಮೆ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. ನಂತರ ಅದನ್ನು ತೆಗೆದು ಪಕ್ಕಕ್ಕೆ ಇಡಿ.
5. ಅದೇ ಎಣ್ಣೆಯಲ್ಲಿ ಗೋಡಂಬಿ ಒರಟಾಗಿ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಹಾಗೂ ಕರಿಬೇವು ಸೇರಿಸಿ ಹುರಿಯಿರಿ. ಇದಕ್ಕೆ ಹುರಿದ ಕಡಲೆಕಾಯಿಯನ್ನು ಸೇರಿಸಿ, ನಂತರ ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಗರಂ ಮಸಾಲ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
6. ಈಗ ಲೇಪಿಸಿದ ಬೆಂಡೆಕಾಯಿ ತುಂಡುಗಳನ್ನು ಬಿಸಿ ಎಣ್ಣೆಗೆ ಹಾಕಿ ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. ಒಂದು ಬಾರಿ ಹೆಚ್ಚು ಹಾಕದೆ, ಸಣ್ಣ ಪ್ರಮಾಣದಲ್ಲಿ ಹುರಿಯುವುದು ಉತ್ತಮ, ಹುರಿದ ನಂತರ ಎಣ್ಣೆಯಿಂದ ತೆಗೆದು ತಯಾರಿಸಿದ ಕಡಲೆಕಾಯಿ ಮಸಾಲ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
7. ಇದೀಗ ಬಾಯಲ್ಲಿ ನೀರೂರಿಸುವ, ಗರಿಗರಿಯದ ಬೆಂಡೆಕಾಯಿ ಫ್ರೈ ಸಿದ್ದವಾಗಿದೆ. ಬಿಸಿ ಬಿಸಿಯಾಗಿ ಅನ್ನ- ಸಾಂಬಾರ್ ಅಥವಾ ಮೊಸರನ್ನದ ಜೊತೆ ಸವಿದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ.😋
Also Read:
ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ : 'ಕೃಷ್ಣಾ' ಗೃಹ ಕಚೇರಿ ಕಾರ್ಯಾರಂಭ