belagavi news :
ಬೆಂಗಳೂರು, ಜುಲೈ 04 : ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಹೊಸ ಮತದಾರರ ನೋಂದಣಿ ಹಾಗೂ ಈಗಾಗಲೇ ಇರುವ ವಿವರಗಳ ನವೀಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ಮೊದಲ ಬಾರಿಗೆ ಮತದಾನ ಮಾಡಲು ಹೆಸರು ಸೇರಿಸಬೇಕಾದವರು ಫಾರ್ಮ್ - 6 ಅನ್ನು ಭರ್ತಿ ಮಾಡಿ ಸಲ್ಲಿಸುವುದು ಅಗತ್ಯವಾಗಿದೆ. ಅದೇ ರೀತಿ, ವಿಳಾಸ ಬದಲಾವಣೆ ಅಥವಾ ಒಂದು ಮತ ಕ್ಷೇತ್ರದಿಂದ ಮತ್ತೊಂದು ಮತ ಕ್ಷೇತ್ರಕ್ಕೆ ಸ್ಥಳಾಂತರಗೊಳ್ಳುವವರು ಫಾರ್ಮ್ - 8 ಅನ್ನು ಭರ್ತಿ ಮಾಡಿ ಸಲ್ಲಿಸುವುದು ಅಗತ್ಯವಾಗಿದೆ. ಈ ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯನ್ನು ನಿಖರವಾಗಿ ಹಾಗೂ ನವೀಕರಿತವಾಗಿ ಉಳಿಸುವುದು ಚುನಾವಣಾ ಆಯೋಗದ ಉದ್ದೇಶವಾಗಿದೆ.
ಮತದಾರರ ನೋಂದಣಿ ಅಥವಾ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಗುರುತಿನ ಬದಲಾವಣೆಗಳು ಹಾಗೂ ವಿಳಾಸ ದೃಢೀಕರಣಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಇದರಿಂದ ಅರ್ಜಿಯ ಪರಿಶೀಲನೆ ಸುಗಮವಾಗಿ ನಡೆಯುತ್ತದೆ ಮತ್ತು ಮತದಾರರ ವಿವರಗಳನ್ನು ಸರಿಯಾಗಿ ದಾಖಲಿಸಲು ಸಹಾಯವಾಗುತ್ತದೆ.
ಚುನಾವಣಾ ಆಯೋಗದ ಈ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಮೂಲಕ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದರ ಜೊತೆಗೆ ಎಲ್ಲಾ ಅರ್ಹ ನಾಗರಿಕರು ಮತದಾನ ಹಕ್ಕನ್ನು ಬಳಸುವಂತೆ ಅವಕಾಶ ಕಲ್ಪಿಸಲಾಗುತ್ತಿದೆ. ಆದ್ದರಿಂದ ಮತದಾರರು ಸಮಯಕ್ಕೆ ಸರಿಯಾಗಿ ತಮ್ಮ ಹೆಸರು ಸೇರಿಸಿ ಹಾಗೂ ತಿದ್ದುಪಡಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು (Form 6):
ನಿಮಗೆ 18 ವರ್ಷ ತುಂಬಿದ್ದರೆ ಅಥವಾ ಇದುವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದಿದ್ದರೆ, ನೀವು ನಮೂನೆ -6 (Form - 6) ಅನ್ನು ಭರ್ತಿ ಮಾಡಿ ಸಲ್ಲಿಸಬೇಕು. ಇದು ಮೊದಲ ಬಾರಿಗೆ ಮತದಾರರಾಗಿ ನೋಂದಾಯಿಸಿಕೊಳ್ಳುವವರಿಗೆ ಅನ್ವಯಿಸುತ್ತದೆ.
ಅಗತ್ಯ ದಾಖಲೆಗಳು:
ಮತದಾರರ ನೋಂದಣಿಗೆ ಅರ್ಜಿ ಸಲ್ಲಿಸುವಾಗ ಕೆಳಗಿನ ಪ್ರಮುಖ ದಾಖಲೆಗಳನ್ನು ಸಲ್ಲಿಸುವುದು ಅಗತ್ಯ :
ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ವಯಸ್ಸಿನ ಪುರಾವೆ : ಆಧಾರ್ ಕಾರ್ಡ್/ಎಸ್.ಎಸ್.ಎಲ್.ಸಿ ಅಂಕಪಟ್ಟಿ/ಜನನ ಪ್ರಮಾಣ ಪತ್ರ / ಪ್ಯಾನ್ ಕಾರ್ಡ್ / ಡ್ರೈವಿಂಗ್ ಲೈಸನ್ಸ್ / ಭಾರತೀಯ ಪಾಸ್ ಪೋರ್ಟ್
ವಾಸ ಸ್ಥಳದ ಪುರಾವೆ : ಪ್ರಸ್ತುತ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಬುಕ್ (ರಾಷ್ಟ್ರೀಕೃತ ಬ್ಯಾಂಕ್) /ಗ್ಯಾಸ್ ಕನೆಕ್ಷನ್ ಬಿಲ್ / ವಿದ್ಯುತ್ ಬಿಲ್ /ನೀರಿನ ಬಿಲ್ / ನೊಂದಾಯಿತ ಬಾಡಿಗೆ ಕರಾರು ಪತ್ರ/ವಾಸ ಸ್ಥಳ ದೃಢೀಕರಣ ಪತ್ರ
ಈ ದಾಖಲೆಗಳನ್ನು ಸರಿಯಾಗಿ ಸಲ್ಲಿಸಿದ ನಂತರ, ಚುನಾವಣಾ ಆಯೋಗವು ಪರಿಶೀಲನೆ ನಡೆಸಿ ಅರ್ಹ ಅಭ್ಯರ್ಥಿಯನ್ನು ಮತದಾರರ ಪಟ್ಟಿಯಲ್ಲಿ ಸೇರಿಸುತ್ತದೆ. ಅರ್ಜಿದಾರರು ತಮ್ಮ ಎಲ್ಲಾ ಮಾಹಿತಿಯನ್ನು ಸರಿಯಾಗಿ ನೀಡುವುದು ಅತ್ಯಂತ ಮುಖ್ಯವಾಗಿದೆ, ಏಕೆಂದರೆ ತಪ್ಪು ಮಾಹಿತಿ ನೀಡಿದರೆ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವಾಗಬಹುದು.
ಮತಕ್ಷೇತ್ರ ಅಥವಾ ವಿಳಾಸ ಬದಲಾವಣೆ:
ನೀವು ಈಗಾಗಲೇ ಮತದಾರರಾಗಿದ್ದು, ಮದುವೆ, ಉದ್ಯೋಗ ಅಥವಾ ಇತರ ಕಾರಣಗಳಿಂದ ಹೊಸ ಮನೆಗೆ ಅಥವಾ ಬೇರೆ ಮತಕ್ಷೇತ್ರಕ್ಕೆ ಸ್ಥಳಾಂತರಗೊಂಡಿದ್ದರೆ, ನಮೂನೆ - 8 ಅನ್ನು ಸಲ್ಲಿಸಬೇಕು. ಒಂದೇ ಮತ ಕ್ಷೇತ್ರದೊಳಗೆ ಮನೆ ಬದಲಿಸಿದರೂ ಅಥವಾ ಬೇರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳಾಂತರವಾದರೂ ಅದೇ ಫಾರ್ಮ್ ಬಳಸಬೇಕು.
ಅಗತ್ಯ ದಾಖಲೆಗಳು:
ಹಳೆಯ ಮತದಾರರ ಗುರುತಿನ ಚೀಟಿ (EPIC Number)!
ಹೊಸ ವಾಸಸ್ಥಳದ ಪುರಾವೆ (ಹೊಸ ವಿಳಾಸ ಹೊಂದಿರುವ ಆಧಾರ್ ಕಾರ್ಡ್/ ಇತ್ತೀಚಿನ ಲೈಟ್ ಬಿಲ್ / ವಾಟರ್ ಬಿಲ್ / ಗ್ಯಾಸ್ ಬಿಲ್/ ಬ್ಯಾಂಕ್ ಖಾತೆ ಪುಸ್ತಕ (ಹೊಸ ವಿಳಾಸದೊಂದಿಗೆ)/ ಮದುವೆಯ ನಂತರ ವಿಳಾಸ ಬದಲಾಗಿದ್ದರೆ ‘ಮದುವೆ ನೋಂದಣಿ ಪ್ರಮಾಣಪತ್ರ’)
ಈ ದಾಖಲೆಗಳನ್ನು ಸರಿಯಾಗಿ ಸಲ್ಲಿಸಿದ ನಂತರ ಚುನಾವಣಾ ಆಯೋಗವು ಪರಿಶೀಲನೆ ನಡೆಸಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೊಸ ವಿಳಾಸ ಅಥವಾ ಕ್ಷೇತ್ರದ ವಿವರಗಳನ್ನು ನವೀಕರಿಸುತ್ತದೆ. ತಪ್ಪು ಅಥವಾ ಅಪೂರ್ಣ ದಾಖಲೆಗಳನ್ನು ನೀಡಿದರೆ ಪ್ರಕ್ರಿಯೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ.
ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ತಿದ್ದುಪಡಿ ಪ್ರಕ್ರಿಯೆಯಲ್ಲಿ ನಿಮ್ಮ ಕುಟುಂಬದ ಸದಸ್ಯರೊಬ್ಬರು ವೋಟರ್ ಐಡಿ ಕಾರ್ಡ್ ನ ಪ್ರತಿಯನ್ನು ಜೋಡಿಸಿದರೆ, ವಿಳಾಸ ಪರಿಶೀಲನೆ ಇನ್ನಷ್ಟು ಸುಲಭ ಹಾಗೂ ವೇಗವಾಗಿ ಪೂರ್ಣಗೊಳ್ಳಬಹುದು. ಇದರಿಂದ ಚುನಾವಣಾ ಅಧಿಕಾರಿಗಳಿಗೆ ಕುಟುಂಬದ ವಾಸ ಸ್ಥಳದ ದೃಡೀಕರಣ ಮಾಡಲು ಸಹಾಯವಾಗುತ್ತದೆ .
ನಿಮ್ಮ ಪ್ರದೇಶದ ಬಿ.ಎಲ್.ಒ ಗಳು ಪರಿಸ್ಕರಣೆ ಕಾರ್ಯಕ್ಕಾಗಿ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ, ಅಗತ್ಯ ದಾಖಲೆಗಳನ್ನು ಸಿದ್ಧವಾಗಿರಿಸುವುದು ಮುಖ್ಯವಾಗಿದೆ. ಈ ಸಂದರ್ಭದಲ್ಲಿ ಸಂಬಂಧಿತ ಫಾರ್ಮುಲಗಳನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.
ಸರಿಯಾದ ದಾಖಲೆಗಳನ್ನು ನೀಡುವುದರಿಂದ ಮತದಾರರ ನೋಂದಣಿ, ವಿಳಾಸ ಬದಲಾವಣೆ ಅಥವಾ ತಿದ್ದುಪಡಿ ಪ್ರಕ್ರಿಯೆ ವೇಗವಾಗಿ ಪೂರ್ಣಗೊಳ್ಳುತ್ತದೆ ಮತ್ತು ಯಾವುದೇ ವಿಳಂಬ ತಪ್ಪಿಸಬಹುದು. ಚುನಾವಣಾ ಆಯೋಗದ ಈ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಹಕರಿಸುವುದು ಅತ್ಯಂತ ಅಗತ್ಯವಾಗಿದೆ