belagavi news :
ಬೆಂಗಳೂರು: ರಾಜ್ಯಾದ್ಯಂತ ಮಂಗಳವಾರದಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು ಮೊದಲ ದಿನವೇ 12,48, 314 ಗಣತಿ ನಮೂನೆಗಳನ್ನು ಬೂತ್ ಮಟ್ಟದ ಅಧಿಕಾರಿಗಳು (BLO) ಮತದಾರರಿಗೆ ವಿವರಿಸಿದ್ದಾರೆ.
ಎಸ್ ಐಆರ್ ಅಭಿಯಾನ ಅಂಗವಾಗಿ ಬಿಎಲ್ ಒಗಳು ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯ ಕೈಗೊಂಡಿದ್ದಾರೆ. ಒಟ್ಟು 5, 54, 32, 314 ಮತದಾರರಿದ್ದು, ಮೊದಲ ದಿನವೇ 2.25 % ಮತದಾರರಿಗೆ ಗಣತಿ ನಮೂನೆಗಳು ತಲುಪಿವೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಮೊದಲ ದಿನವೇ 6,840 ಮತದಾರರು ಆನ್ಲೈನ್ ಮೂಲಕ ಗಣತಿ ನಮೂನೆಗಳನ್ನು ಸಲ್ಲಿಸಿದ್ದಾರೆ. ಇದೆ ವೇಳೆ ಪರಿಶೀಲನೆ ವೇಳೆ 488 ಮತದಾರರನ್ನು ಮೃತ, ಸ್ಥಳಾಂತರ, ಡುಪ್ಲಿಕೇಟ್ ಅಥವಾ ಗೈರು ಎಂದು ಗುರುತಿಸಲಾಗಿದೆ. ಇವರಲ್ಲಿ 291 ಮಂದಿ ಮೃತಪಟ್ಟಿರುವುದು, 116 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಹಾಗೂ 77 ಮಂದಿ ಡುಪ್ಲಿಕೇಟ್ ದಾಖಲೆ ಹೊಂದಿರುವುದು ಪತ್ತೆಯಾಗಿದೆ.
ಮತದಾರ ಪಟ್ಟಿಯನ್ನು ನಿಖರ ಹಾಗೂ ನವೀಕೃತವಾಗಿಡುವ ಉದ್ದೇಶದಿಂದ ನಡೆಯುತ್ತಿರುವ ಈ ವಿಶೇಷ ಸಮಗ್ರ ಪರಿಷ್ಕರಣೆ ಪ್ರತಿಕ್ರಿಯೆಯಲ್ಲಿ ಅರ್ಹ ಮತದಾರರು ನಿಗದಿತ ಅವಧಿಯೊಳಗೆ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.
ಜಿಲ್ಲಾವಾರ ಎನುಮರೇಷನ್ ಹಂಚಿಕೆ ಮಾಹಿತಿ; ಹಾಸನದಲ್ಲಿ ಅತಿ ಹೆಚ್ಚು ವಿತರಣೆ
ರಾಜ್ಯದಲ್ಲಿ ನಡೆಯುತ್ತಿರುವ ಎನುಮರೇಷನ್ ಪ್ರಕ್ರಿಯೆಯ ಮೊದಲ ದಿನದ ಜಿಲ್ಲಾವಾರು ಗಣತಿ ನಮೂನೆಗಳ ವಿತರಣೆಯ ವಿವರಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಈ ಮಾಹಿತಿಯ ಪ್ರಕಾರ, ಹಾಸನ್ ಜಿಲ್ಲೆಯಲ್ಲಿ ಅತಿ ಹೆಚ್ಚು ಗಣತಿ ನಮೂನೆಗಳನ್ನು ವಿತರಿಸಲಾಗಿದೆ.
ಜಿಲ್ಲಾವಾರು ವಿವರಗಳು:
• ಹಾಸನ- 1,46,025 ಗಣತಿ ನಮೂನೆ ವಿತರಣೆ
• ದಾವಣಗೆರೆ - 1,07,802 ಎನುಮರೇಷನ್ ಫಾರ್ಮ್ ವಿತರಣೆ
• ಕಲಬುರಗಿ - 79,375 ಗಣತಿ ನಮೂನೆ ವಿತರಣೆ
• ಯಾದಗಿರಿ - 78,280 ಎನುಮರೇಷನ್ ಫಾರ್ಮ್ ವಿತರಣೆ
• ಬೆಳಗಾವಿ- 75,052 ಎನುಮರೇಷನ್ ಫಾರ್ಮ್ ವಿತರಣೆ
• ತುಮಕೂರು - 66,304 ಗಣತಿ ನಮೂನೆ ವಿತರಣೆ
• ಉತ್ತರ ಕನ್ನಡ - 61,476 ಗಣತಿ ನಮೂನೆ ವಿತರಣೆ
• ರಾಯಚೂರು - 52,510 ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಚುನಾವಣಾ ಆಯೋಗದ ಪ್ರಕಾರ ಈ ಅಂಕಿ ಅಂಶಗಳು ಮೊದಲ ದಿನದ ಹಂಚಿಕೆಯ ಪ್ರಗತಿಯನ್ನು ಪ್ರತಿಬಿಂಬಿಸುತ್ತಿವೆ. ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಲ್ಲಿಯೂ ಗಣತಿ ಕಾರ್ಯವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ.