BELAGAVI NEWS :
ಬೆಳಗಾವಿ: ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಅಂತರ್ ಜಿಲ್ಲಾ ಕಳ್ಳರ ಗ್ಯಾಂಗ್ ಅನ್ನು ಬೆಳಗಾವಿ ಜಿಲ್ಲಾ ಪೊಲೀಸರು ಬಂದಿಸಿದ್ದು, ಒಟ್ಟು ₹25.89 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ತೋಟದ ಜಮೀನಿನಲ್ಲಿರುವ ಶ್ರೀ ರಾಣಮ್ಮ ದೇವಿ ದೇವಸ್ಥಾನದಲ್ಲಿ ಇತ್ತೀಚಿಗೆ ನಡೆದಿದ್ದ ಚಿನ್ನದ ಮಂಗಳಸೂತ್ರ ಮತ್ತು ಬೆಳ್ಳಿಯ ಆಭರಣಗಳ ಕಳ್ಳತನ ಪ್ರಕರಣವನ್ನು ಹರೂಗೇರಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಡಳಹಟ್ಟಿ ಗ್ರಾಮದ ನಿವಾಸಿಗಳಾದ ವಿಜಯ್ ಭೀಮಪ್ಪ ಗುಡದಿನ್ನಿ, ಕಲ್ಮೇಶ್ ಅಲ್ಲಪ್ಪ ಮೂರಾಬಟ್ಟಿ,ಶಿವಾನಂದ್ ವಿಠಲ್ ಚಿಕ್ಕಟ್ಟಿ ಹಾಗೂ ಸಂಗಮೇಶ್ ಶಂಕರ್ ಐನಾಪುರರನ್ನು ಬಂಧಿಸಲಾಗಿದೆ.ಇವರೊಂದಿಗೆ ಕಾನೂನು ಸಂಘರ್ಷಕ್ಕೆ ಒಳಪಟ್ಟಿರುವ ಓರ್ವ ಬಾಲಕನನ್ನು ವರ್ಷಕ್ಕೆ ಪಡೆಯಲಾಗಿದೆ.
ಆರೋಪಿಗಳಿಂದ ₹ 1.30 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ₹18.23 ಲಕ್ಷ ಮೌಲ್ಯದ 7 ಕೆ.ಜಿ 760 ಗ್ರಾಂ ಬೆಳ್ಳಿ ಆಭರಣಗಳು, 29 ಕೆ.ಜಿ ಗೂ ಹೆಚ್ಚು ತೂಕದ ಕಂಚಿನ ಸಾಮಗ್ರಿಗಳು ಹಾಗೂ ಕಳ್ಳತನಕ್ಕೆ ಬಳಸಲಾಗಿದ್ದ ಸುಮಾರು ₹6 ಲಕ್ಷ ಮೌಲ್ಯದ ಮಹೀಂದ್ರಾ ಪಿಕ್ ಅಪ್ ವಾಹನ ಸೇರಿದಂತೆ ಒಟ್ಟು ₹25,89,295 ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಇದೇ ಗ್ಯಾಂಗ್ ನಿಂದ ಇನ್ನೂ ಹೆಚ್ಚಿನ ಕಳ್ಳತನ ಪ್ರಕರಣಗಳು ನಡೆದಿವೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್. ಬಿ. ಬಸರಗಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ತಂಡದಲ್ಲಿ ಪಿಎಸ್ಐ ಮಾಳಪ್ಪಾ ಪೂಜಾರಿ. ಪ್ರೊಬೇಷನರಿ ಪಿಎಸ್ಐ ಕಿಟ್ಟಪ್ಪ ಅಳಗುಂಡಿ ಹಾಗೂ ಸಿಬ್ಬಂದಿ ಎಸ್.ಎ. ಪಾಟೀಲ್,ಆರ್. ಎನ್. ಮುಂದಿನಮನಿ, ಎಸ್. ಎಂ. ಹಲಕಿ, ಜಿ.ಎನ್. ಕಾಗವಾಡ, ಎ. ಎ. ಶಾಂಡಗೆ ಮತ್ತು ವಿ.ಎ. ಠಕ್ಕನ್ನವರ ಭಾಗವಹಿಸಿದ್ದರು.ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಕೆ.ರಾಮರಾಜನ್,ಬಂದಿದ್ದ ಆರೋಪಿಗಳು ಹಾರೂಗೇರಿ ಮಾತ್ರವಲ್ಲದೆ ಅಥಣಿ, ಕಾಗವಾಡ ಹಾಗೂ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನಗಳಲ್ಲೂ ಕಳ್ಳತನ ಮಾಡಿರುವುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.ಆ ಪ್ರಕರಣಗಳಿಂದ ಸಂಬಂಧಿಸಿದ ಕೆಳವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರ ಪೈಕಿ ಓರ್ವ ಆರೋಪಿ ಈ ಹಿಂದೆ ಮೊಬೈಲ್ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ, ಮತ್ತೋರ್ವ ಆರೋಪಿ ಗಡಿಪಾರು ಶಿಕ್ಷೆಗೆ ಒಳಗಾಗಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಎನ್ನುವ ಮಾಹಿತಿಯನ್ನು ಎಸ್ಪಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚುವರಿ ಎಸ್ಪಿ ಆರ್.ಬಿ. ಬಸರಗಿ ಹಾಗೂ ಅಥಣಿ ಡಿವೈಎಸ್ ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದಲ್ಲಿ ಹಲವು ಕಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಲಾಗಿದೆ. ಹಾರೂಗೇರಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ತನಿಖಾ ತಂಡದ ಎಲ್ಲಾ ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಎಸ್ಪಿ ಅಭಿನಂದಿಸಿದರು.