Belagavi News :
ನವದೆಹಲಿ: ಉಕ್ರೇನ್ ನ ಒಡೆಸ್ಸಾ ಬಂದರಿನಲ್ಲಿ ಸರಕು ಸಾಗಣೆ ಹಡಗಿನ ಮೇಲೆ ನಡೆದ ದಾಳಿಯನ್ನು ನಾಲ್ವರು ಭಾರತೀಯರು ಮೃತಪಟ್ಟ ಘಟನೆಗೆ ಕೇಂದ್ರ ಸರ್ಕಾರ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ಸಂಬಂಧ ರಷ್ಯಾದ ಚಾರ್ಜ್ ಡಿ ಅಫೇರ್ಸ್ ಅವರನ್ನು ಕರೆಸಿ ಭಾರತ ತನ್ನ ಆಕ್ಷೇಪವನ್ನು ದಾಖಲಿಸಿದೆ.
ಭಾರತೀಯರ ಸಾವಿಗೆ ಕಾರಣವಾದ ವಾಣಿಜ್ಯ ಹಡಗಿನ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಷ್ಯಾದ ರಾಜತಾಂತ್ರಿಕರಿಗೆ ತಿಳಿಸಿದೆ ಎಂದು ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಉಕ್ರೇನ್ ನ ಕಡಲ ಮಾರ್ಗದಲ್ಲಿ ಸಂಚರಿಸುತ್ತಿದ್ದ ನಾಗರಿಕ ನೌಕೆಯ ಮೇಲೆ ಭಾನುವಾರ ದಾಳಿ ನಡೆದಿದ್ದು, ಹಡಗಿನಲ್ಲಿ ಭಾರತ ಮತ್ತು ಸಿರಿಯಾದ ನಾಗರಿಕರು ಇದ್ದರು ಎಂದು ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ತಿಳಿಸಿದ್ದಾರೆ. ರಷ್ಯಾ- ಉಕ್ರೇನ್ ಸಂಘರ್ಷದ ನಡುವೆ ಭಾರತೀಯರು ನಾವಿಕರು ಮೃತಪಟ್ಟಿರುವುದು ಇದೇ ಮೊದಲ ಘಟನೆ ಎನ್ನಲಾಗಿದೆ.
ರಷ್ಯಾ ನೀಡಿರುವ ಮಾಹಿತಿಯ ಪ್ರಕಾರ, ಗಿನಿಯಾ ಬಿಸ್ಸೌ ಧ್ವಜದಡಿ ಸಂಚರಿಸುತ್ತಿದ್ದ ಹಡಗಿನ ಮೇಲೆ ಕ್ರೂಸ್ ಕ್ಷಿಪಣಿಗಳ ಮೂಲಕ ದಾಳಿ ನಡೆದಿದೆ. ವಿದೇಶಾಂಗ ಸಚಿವಾಲಯದ ಪ್ರಕಾರ, ' ಎಂವಿ ಗೋಲ್ಡನ್ ಲಿಯೋ ' ಹೆಸರಿನ ಈ ಸರಕು ಸಾಗಣೆ ಹಡಗಿನಲ್ಲಿ ಐವರು ಭಾರತೀಯರು ಸೇರಿದಂತೆ ಒಟ್ಟು 17 ಸಿಬ್ಬಂದಿ ಇದ್ದರು.
ಘಟನೆ ಕುರಿತು ಸೋಮವಾರ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯ, ಲಭ್ಯವಿರುವ ಮಾಹಿತಿಯ ಪ್ರಕಾರ ದಾಳಿಯಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿದ್ದು, ಒರ್ವ ಭಾರತೀಯರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದೆ. ಗಾಯಗೊಂಡ ಭಾರತೀಯನಿಗೆ ಅಗತ್ಯ ವೈದ್ಯಕೀಯ ನೆರವು ದೊರೆಯುವಂತೆ ಉಕ್ರೇನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಸಚಿವಾಲಯ ಹೇಳಿದೆ.
ಮೃತಪಟ್ಟ ಭಾರತೀಯರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಕೇಂದ್ರ ಸರ್ಕಾರ, ಗಾಯಗೊಂಡ ನಾವಿಕ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದೆ. ವಾಣಿಜ್ಯ ನೌಕೆಗಳನ್ನು ಗುರಿಯಾಗಿಸುವುದು, ಅಮಾಯಕ ನಾಗರಿಕ ಸಿಬ್ಬಂದಿಯ ಜೀವಕ್ಕೆ ಅಪಾಯ ಉಂಟುಮಾಡುವುದು ಹಾಗೂ ಅಂತರರಾಷ್ಟ್ರೀಯ ಸಾಗರ ಸಂಚಾರಕ್ಕೆ ಅಡ್ಡಿಪಡಿಸುವಂತಹ ಕೃತ್ಯಗಳನ್ನು ಭಾರತ ಖಂಡಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ಕೈವ್ ಪೋಸ್ಟ್ ವರದಿಯ ಪ್ರಕಾರ, ರಷ್ಯಾದ ಕ್ಷಿಪಣಿ ದಾಳಿಯಿಂದ ಟರ್ಕಿ ಒಡೆತನದ ' ಗೋಲ್ಡನ್ ಲಿಯೋ' ಸರಕು ಸಾಗಣೆ ಹಡಗಿಗೆ ಹಾನಿಯಾಗಿದ್ದು, ಒಟ್ಟು 10 ಮಂದಿ ಮೃತಪಟ್ಟಿದ್ದಾರೆ. ಉಕ್ರೇನ್ ವಾಯುಪಡೆಯ ಮಾಹಿತಿಯ ಪ್ರಕಾರ, ರಷ್ಯಾ ಪಡೆಗಳು ಮೂರು ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದ್ದು, ಅವುಗಳಲ್ಲಿ ಒಂದು ಕ್ಷಿಪಣಿ ಹಡಗಿನ ಸ್ಟಾರ್ ಬೋರ್ಡ್ ಭಾಗಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ.
ದಾಳಿಯ ಬಳಿಕ 8 ನಾವಿಕರನ್ನು ರಕ್ಷಿಸಿ ಒಡೆಸ್ಸಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಘಟನೆಯ ಕುರಿತು ಭಾರತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂದಿನ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.