Belagavi News :
ನೆರೆಯ ಮಹರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆ ಒಂದುವರೆದ ಪರಿಣಾಮ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೃಷ್ಣ ಹಾಗೂ ದೂದಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿರುವ ಕೊಯ್ನಾ ಜಲಾಶಯದಿಂದ 6,100 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿ ಬಿಡಲಾಗಿದೆ. ಇದೇ ವೇಳೆ ರಾಧಾ ನಗರ ಜಲಾಶಯದಿಂದಲೂ 2,800 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರೆದಿರುವುದರಿಂದ, ಮುಂದಿನ ದಿನಗಳಲ್ಲಿ ಕೊಯ್ನಾ ಸೇರಿದಂತೆ ವಿವಿಧ ಜಲಾಶಯಗಳಿಂದ ಇನ್ನಷ್ಟು ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ಇದೆ. ಇದರಿಂದ ಕೃಷ್ಣ ನದಿಯ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಮನ್ಸೂಚನೆ ನೀಡಲಾಗಿದೆ.
ಈಗಾಗಲೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪ್ರಮುಖ ಹರಿಯುವ ಕೃಷ್ಣಾ ನದಿಗೆ ಸುಮಾರು 92 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಮಳೆ ಹಾಗೂ ಜಲಾಶಯಗಳಿಂದ ನೀರಿನ ಅರಿವು ಇದೇ ರೀತಿ ಮುಂದುವರೆದರೆ ನದಿ ಅಪಾಯದ ಮಟ್ಟ ಮೀರುವ ಸಾಧ್ಯತೆ ಇದೆ.
ಕೃಷ್ಣ ಮತ್ತು ದೂದಗಂಗಾ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಲವು ಬ್ಯಾರೇಜ್ ಗಳು ಮುಳುಗಡೆಯ ಹಂತ ತಲುಪಿದ್ದು, ನದೀತೀರದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಜನರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಕೊಯ್ನಾ ನೀರಿನ ಅಬ್ಬರಕ್ಕೆ ನರಸಿಂಹ ವಾಡಿ ದತ್ತ ಮಂದಿರ ಜಲಾವೃತ - ಕೃಷ್ಣಾ - ಪಂಚಗಂಗಾ ನದಿ ವಟ್ಟದಲ್ಲಿ ಭಾರಿ ಏರಿಕೆ :
ಕೊಯ್ನಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆಯಾಗುತ್ತಿರುವ ಪರಿಣಾಮ ಕೃಷ್ಣಾ ಮತ್ತು ಪಂಚಗಂಗಾ ನದಿಗಳ ನೀರಿನ ಮಟ್ಟದಲ್ಲ ಭಾರಿ ಏರಿಕೆಯಾಗಿದೆ. ಇದರ ಪರಿಣಾಮ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಪ್ರಸಿದ್ಧ ನರಸಿಂಹವಾಡಿ ಶ್ರೀ ದತ್ತ ಮಂದಿರ ಸಂಪೂರ್ಣ ಜಲಾವೃತಗೊಂಡಿದೆ.
ಕೃಷ್ಣಾ ಹಾಗೂ ಪಂಚಗಂಗಾ ನದಿಗಳ ಪವಿತ್ರ ಸಂಗಮ ಸ್ಥಳದಲ್ಲಿರುವ ಐತಿಹಾಸಿಕ ದತ್ತ ಮಂದಿರದ ಆವರಣಕ್ಕೆ ನದಿ ನೀರು ನುಗ್ಗಿದ್ದು, ಸುತ್ತಮುತ್ತ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. ನೀರಿನ ಹರಿವು ಹೆಚ್ಚಿದ್ದರು ಭಕ್ತರು ಮೊಣಕಾಲು ಆಳದ ನೀರಿನಲ್ಲಿ ನಿಂತು ಪಿ ದತ್ತಾತ್ರೇಯ ದೇವರ ದರ್ಶನ ಪಡೆದ ದೃಶ್ಯಗಳು ಗಮನ ಸೆಳೆದ್ದಿದೆ.
ಕೊಯ್ನಾ ಜಲಾಶಯದಿಂದ ಮುಂದುವರೆದಿರುವ ನೀರು ಬಿಡುಗಡೆ ಹಾಗೂ ಘಟ್ಟ ಪ್ರದೇಶಗಳಲ್ಲಿ ಉರಿಯುತ್ತಿರುವ ಭಾರಿ ಮಳೆಯಿಂದಾಗಿ ಗಡಿ ಭಾಗದ ನದಿ ಪಾತ್ರಗಳಲ್ಲಿ ಆತಂಕ ಹೆಚ್ಚಾಗಿದೆ. ಕೃಷ್ಣಾ ನದೀ ನೀರಿನ ಮಟ್ಟ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ನದಿ ತೀರದ ಜನರು ಏರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಮತ್ತು ಜಲಾಶಯಗಳಿಂದ ಹರಿದು ಬರುವ ನೀರಿನ ಆಧಾರದ ಮೇಲೆ ಪ್ರವಾಹ ಪರಿಸ್ಥಿತಿ ಮತ್ತಷ್ಟು ತೀವ್ರ ಗೊಳ್ಳುವ ಸಾಧ್ಯತೆ ಇದೆ.