belagavi news :
ನವದೆಹಲಿ: ದೇಶದ ಪೊಲೀಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ತಮ್ಮ ಬಳಿ ಇರುವ ಅಪಾರ ಪ್ರಮಾಣದ ಅಪರಾಧ ಸಂಬಂಧಿತ ಮಾಹಿತಿಯನ್ನು ಕಾರ್ಯಸಾಧ್ಯ ಬುದ್ಧಿಮತ್ತೆಯಾಗಿ ಪರಿವರ್ತಿಸಿ ಅಪರಾಧ ನಿಯಂತ್ರಣಕ್ಕೆ ಬಳಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.
ನವದೆಹಲಿದಲ್ಲಿ ನಡೆದ 26ನೇ ಅಖಿಲ ಭಾರತ ಬೆರಳಚ್ಚು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾಭಾರತದ ಸಂದರ್ಭದಲ್ಲಿ ಶ್ರೀ ಕೃಷ್ಣ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ತಂತ್ರಾತ್ಮಕವಾಗಿ ಬಳಸಿಕೊಂಡ ಕಾರಣ ಪಾಂಡವರು ಗೆಲುವು ಸಾಧಿಸಿದರು ಎಂದು ಉದಾಹರಣೆ ನೀಡಿದರು.
"ಮಹಾಭಾರತದಲ್ಲಿ ಕೃಷ್ಣನು ಮಾಹಿತಿಯನ್ನು ಗುಪ್ತವಾಗಿ ಸಂಗ್ರಹಿಸಿ, ಸರಿಯಾದ ಸಮಯದಲ್ಲಿ ಬುದ್ದಿವಂತಿಕೆಯಿಂದ ಬಳಸಿದನು. ಅದೇ ರೀತಿ ತಮ್ಮ ಪೊಲೀಸ್ ವ್ಯವಸ್ಥೆಯು ಅಪರಾಧದ ವಿರುದ್ಧ ಹೋರಾಡುವಾಗ ಮಾಹಿತಿ ಸಂಗ್ರಹಣೆ ವಿಶ್ಲೇಷಣೆ ಮತ್ತು ಸಮಯೋಚಿತ ನಿರ್ಧಾರಗಳತ್ತ ಗಮನ ಹರಿಸಬೇಕು ಎಂದು ಅಮಿತ್ ಶಾ ಹೇಳಿದರು.
ಅವರು ತನಿಖೆ ಹಾಗೂ ಅಪರಾಧ ತಡೆಗಟ್ಟುವಿಕೆಯಲ್ಲಿ ಡೇಟಾ ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಪೊಲೀಸ್ ಪಡೆಗಳಿಗೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ 'ಅಭಿಗ್ಯಾನ್' ಆ್ಯಪ್, ಸಿಆರ್ ಪಿಐ ಸಿಸ್ಟಮ್, ಇ- ಪ್ರಾಸಿಕ್ಯೂಷನ್ 2.0 ಮತ್ತು ಇ- ಫೊರೆನ್ಸಿಕ್ಸ್ 2.0 ಸೇರಿದಂತೆ ಹಲವು ತಾಂತ್ರಿಕ ವೇದಿಕೆಗಳನ್ನು ಉದ್ಘಾಟಿಸಿದರು.
ರಾಷ್ಟ್ರೀಯ ಅಪರಾಧ ದತ್ತಸಂಚಯಗಳ ಮಹತ್ವವನ್ನು ಒತ್ತಿಹೇಳಿದ ಗೃಹ ಸಚಿವರು, ರಾಜ್ಯಗಳು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ನಿರ್ವಹಿಸುವ ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿನ ವ್ಯವಸ್ಥೆ (NAFIS) ಹಾಗೂ ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಕಾಯ್ದೆ -2022ರ ಅಡಿಯಲ್ಲಿ ಲಭ್ಯವಿರುವ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.
ಅಪರಾಧ ನಿಯಂತ್ರಣದಲ್ಲಿ ತಂತ್ರಜ್ಞಾನ, ದತ್ತಾಂಶ ಮತ್ತು ಬುದ್ಧಿವಂತಿಕೆಯ ಸಮನ್ವಯವೇ ಭವಿಷ್ಯದ ಯಶಸ್ಸಿನ ಕೀಲಿ ಕೈ ಎಂದು ಅಮಿತ್ ಶಾ ಅಭಿಪ್ರಾಯ ಪಟ್ಟರು.
ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿನ ವ್ಯವಸ್ಥೆ NAFIS ದೇಶಾದ್ಯಂತ ಹುಡುಕಬಹುದಾದ ಡಿಜಿಟಲ್ ಬೆರಳಚ್ಚು ದತ್ತಸಂಚಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಂಧಿತ ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟ ರಾಷ್ಟ್ರೀಯ ಫಿಂಗರ್ ಪ್ರಿಂಟ್ ಸಂಖ್ಯೆಯನ್ನು ನೀಡುವ ಮೂಲಕ ವಿವಿಧ ನ್ಯಾಯವ್ಯಾಪ್ತಿಗಳಲ್ಲಿ ಅಪರಾಧಿಗಳ ಪತ್ತೆ ಮತ್ತು ಟ್ರ್ಯಾಕಿಂಗ್ ನೆರವಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
26 ನೇ ಅಖಿಲ ಭಾರತ ಬೆರಳಚ್ಚು ಸಮ್ಮಿಲನದಲ್ಲಿ ಮಾತನಾಡಿದವರು, ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಕಾಯ್ದೆ- 2022ರಡಿ ಕಾನೂನು ಜಾರಿ ಸಂಸ್ಥೆಗಳಿಗೆ ಬಂಧಿತ ಅಥವಾ ಶಿಕ್ಷೆಗೊಳಗಾದ ವ್ಯಕ್ತಿಗಳ ಭೌತಿಕ ಮತ್ತು ಜೈವಿಕ ಮಾಹಿತಿಯನ್ನು ಸಂಗ್ರಹಿಸಿ ಸಂರಕ್ಷಿಸುವ ಅಧಿಕಾರವಿದೆ ಎಂದು ಹೇಳಿದರು.
ಅಪರಾಧ ತನಿಖೆಗಳಲ್ಲಿ ಬೆರಳಚ್ಚು ಪುರಾವೆಗಳು ಇಂದಿಗೂ ಅತ್ಯಂತ ವಿಶ್ವಾಸಾರ್ಹ ಸಾಕ್ಷ್ಯಗಳಲ್ಲಿ ಒಂದಾಗಿವೆ. ಆದರೆ, NAFIS ಡೇಟಾಬೇಸ್ ನಲ್ಲಿರುವ ಮಾಹಿತಿಯ ಕೇವಲ ಶೇ. 10ರಷ್ಟು ಮಾತ್ರ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಎಂಬುದು ಆತಂಕಕಾರಿ ವಿಷಯ ಎಂದು ಅಮಿತ್ ಶಾ ಕಳವಳ ವ್ಯಕ್ತಪಡಿಸಿದರು.
ದತ್ತಾಂಶದ ಸಂಗ್ರಹಣೆ, ವಿಶ್ಲೇಷಣೆ ಮತ್ತು ಕಾರ್ಯಚರಣೆಯ ಬಳಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಮುಂದಿನ ಒಂದು ವರ್ಷದ ಅವಧಿಯಲ್ಲಿ ಪೊಲೀಸ್ ಸಿಬ್ಬಂದಿಗೆ ವಾರಕ್ಕೊಮ್ಮೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುವಂತೆ ಅವರು ಎಲ್ಲಾ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರಿಗೆ (ಡಿಜಿಪಿ) ನಿರ್ದೇಶನ ನೀಡಿದರು.
ತಂತ್ರಜ್ಞಾನ ಮತ್ತು ದತ್ತಾಂಶ ಆಧಾರಿತ ತನಿಖಾ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಅಪರಾಧ ನಿಯಂತ್ರಣ ಹಾಗೂ ತನಿಖೆಯ ಗುಣಮಟ್ಟವನ್ನು ಹೆಚ್ಚಿಸಬಹುದು ಎಂದು ಅಮಿತ್ ಶಾ ಅಭಿಪ್ರಾಯಪಟ್ಟರು.
Also Read:
'ಭಯೋತ್ಪಾದನೆ ಹರಡಿದರೆ ನೀರಿಲ್ಲ' ವಿಶ್ವಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್