ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಸಾವು
ಮೂರು ದಿನಗಳ ಅಂತರದಲ್ಲಿ 28 ಕೃಷ್ಣಮೃಗಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ನಡೆದಿದೆ.
ಬೆಳಗಾವಿ/ಬೆಂಗಳೂರು:
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಮೊನ್ನೆ (ನ.13) 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇಂದು ಬೆಳಗ್ಗೆ ಮತ್ತೆ 20 ಕೃಷ್ಣಮೃಗಗಳು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಿತ್ತೂರು ಚೆನ್ನಮ್ಮ ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಗಳು ಇದ್ದವು. ಅದರಲ್ಲಿ ಈಗ 10 ಕೃಷ್ಣಮೃಗಗಳು ಮಾತ್ರ ಉಳಿದಿವೆ. ಎಸಿಎಫ್ ನಾಗರಾಜ ಬಾಳೇಹೊಸೂರ, ಮೃಗಾಲಯ ಸಂರಕ್ಷಣಾಧಿಕಾರಿ ಪವನ್ ಕುರನಿಂಗ, ಆರೋಗ್ಯ ಅಧಿಕಾರಿ ಸೇರಿ ಮತ್ತಿತರು ಸ್ಥಳದಲ್ಲಿಯೇ ಇದ್ದು, ಇನ್ನುಳಿದ ಪ್ರಾಣಿಗಳ ಆರೋಗ್ಯ ತಪಾಸಣೆಯಲ್ಲಿ ನಿರತರಾಗಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಎಸಿಎಫ್ ನಾಗರಾಜ ಬಾಳೇಹೊಸೂರ, ''ಬ್ಯಾಕ್ಟಿರಿಯಲ್ ಇಂಜೆಕ್ಷನ್ನಿಂದ ಕೃಷ್ಣಮೃಗಗಳು ಸಾವನ್ನಪ್ಪಿವೆ ಅಂತ ಮೇಲ್ನೋಟಕ್ಕೆ ವೈದ್ಯರಿಂದ ತಿಳಿದುಬಂದಿದೆ. 28ರಲ್ಲಿ 25 ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಿಯಮಾನುಸಾರ ಅವುಗಳ ಅಂತ್ಯಕ್ರಿಯೆ ಮುಗಿಸಲಾಗಿದೆ. ಇನ್ನುಳಿದಂತೆ 3 ಕೃಷ್ಣಮೃಗಳ ಮೃತದೇಹವನ್ನು ಶೇಖರಿಸಿಡಲಾಗಿದೆ. ಬನ್ನೇರುಘಟ್ಟದ ಮೃಗಾಲಯದಿಂದ ತಜ್ಞರು ಬಂದ ಬಳಿಕ ಅವುಗಳ ಪರೀಕ್ಷೆ ನಡೆಸಲಾಗುತ್ತದೆ. ಇನ್ನುಳಿದಂತೆ, 10 ಕೃಷ್ಣಮೃಗಗಳ ಆರೋಗ್ಯ ಚೆನ್ನಾಗಿದೆ. ಅವು ಚಟುವಟಿಕೆಯಿಂದ ಇವೆ'' ಎಂದರು.
ಈ ಸಂಬಂಧ ಡಿಎಫ್ಒ ಎನ್.ಇ.ಕ್ರಾಂತಿ ಅವರನ್ನು ''ಬ್ಯಾಕ್ಟಿರಿಯಲ್ ಇಂಜೆಕ್ಷನ್ನಿಂದ ಕೃಷ್ಣಮೃಗಗಳು ಮೃತಪಟ್ಟಿವೆ. ಬೆಂಗಳೂರಿನ ಬನ್ನೇರುಘಟ್ಟದ ಪಶು ವಿಜ್ಞಾನ ಸಂಸ್ಥೆಯ ತಜ್ಞ ವೈದ್ಯರು ಬರುತ್ತಿದ್ದು, ಅವರು ಪರೀಕ್ಷೆ ನಡೆಸಲಿದ್ದಾರೆ. ಮೊನ್ನೆ 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇಂದು ಮತ್ತೆ 20 ಮೃತಪಟ್ಟಿವೆ. ಇದರಿಂದ ಒಟ್ಟು 28 ಜಿಂಕೆಗಳು ಸಾವನ್ನಪ್ಪಿರುವುದು ಆಘಾತಕಾರಿ ಸಂಗತಿ'' ಎಂದು ತಿಳಿಸಿದರು.
ತನಿಖೆಗೆ ಸಚಿವ ಖಂಡ್ರೆ ಆದೇಶ:
ಕೃಷ್ಣಮೃಗಗಳು ಅಸಹಜವಾಗಿ ಮೃತಪಟ್ಟಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ತನಿಖೆಗೆ ಆದೇಶ ನೀಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಈ ಕೃಷ್ಣಮೃಗಗಳು ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಮೃಗಾಲಯದ ಬೇರೆ ಯಾವುದೇ ಪ್ರಾಣಿಗೆ ಸೋಂಕು ತಗುಲದಂತೆ ಎಲ್ಲ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.
ಈ ಕೃಷ್ಣಮೃಗಗಳು ಕಲುಷಿತ ನೀರು, ಆಹಾರ ಸೇವಿಸಿ ಕಾಯಿಲೆಗೆ ತುತ್ತಾಗಿ ಮೃತಪಟ್ಟಿವೆಯೇ ಅಥವಾ ಬೆಕ್ಕು ಇತ್ಯಾದಿ ಸಾಕು ಪ್ರಾಣಿಗಳಿಂದ ಈ ಕಾಯಿಲೆ ಹರಡಿದೆಯೇ ಎಂಬ ಬಗ್ಗೆ ಒಂದು ತಜ್ಞರ ಸಮಿತಿ ರಚಿಸಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಖಂಡ್ರೆ ಆದೇಶಿಸಿದ್ದಾರೆ.
ಮೃಗಾಲಯದಲ್ಲಿರುವ ಪ್ರಾಣಿಗಳು ಈ ರೀತಿ ಸಾವಿಗೀಡಾಗುವುದು ಆತಂಕದ ವಿಚಾರವಾಗಿದ್ದು, ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವಿದ್ದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
''ಅಲ್ಲದೇ ಮೊನ್ನೆ ಮೃತಪಟ್ಟಿದ್ದ ಕೃಷ್ಣಮೃಗಗಳ ವರದಿಯನ್ನು ಬನ್ನೇರುಘಟ್ಟಕ್ಕೆ ಕಳಿಸಲಾಗಿದೆ. ಆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಸ್ಪಷ್ಟವಾಗಲಿದೆ. ದಿನನಿತ್ಯ ನೀಡುವ ಆಹಾರವನ್ನೇ ಕೊಡುತ್ತಿದ್ದೆವು. ಹಾಗಾಗಿ, ಅದರಿಂದ ಯಾವುದೇ ಸಮಸ್ಯೆ ಆಗಿಲ್ಲ. ಇನ್ನುಳಿದ ಬೇರೆ ಪ್ರಾಣಿಗಳಿಗೂ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಲಾಗುವುದು'' ಎಂದು ನಾಗರಾಜ ಬಾಳೇಹೊಸೂರ ತಿಳಿಸಿದರು.
ಇನ್ನಷ್ಟು ಓದಿರಿ :
ಹುಬ್ಬಳ್ಳಿಯಲ್ಲಿ ಅನಧಿಕೃತ ಬ್ಯಾನರ್ಗಳ ಹಾವಳಿ