ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಹೆಸರಲ್ಲಿ ಬೆಂಗಳೂರಿನ ವ್ಯಕ್ತಿಗೆ ಲಕ್ಷ ಲಕ್ಷ ಹಣ ಪಂಗನಾಮ
ಬೆಂಗಳೂರಿನ ವ್ಯಕ್ತಿಯೊಬ್ಬರು ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಹೆಸರಿನಲ್ಲಿ ಸೈಬರ್ ವಂಚನೆಗೆ ಒಳಗಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಇನ್ಸ್ಟಾಗ್ರಾಂ ಮತ್ತು ಟೆಲಿಗ್ರಾಂ ಮೂಲಕ ಪರಿಚಯವಾದ ಖದೀಮರು ಅಧಿಕ ಲಾಭದ ಆಮಿಷವೊಡ್ಡಿ ಹಣ ಹೂಡಿಸುವಂತೆ ಪ್ರೇರೇಪಿಸಿದ್ದರು. ಲಾಭಾಂಶ ನೀಡುವ ನೆಪದಲ್ಲಿ ಹೆಚ್ಚು ಹಣ ಹಾಕಿಸಿಕೊಂಡು, ಕೊನೆಗೆ ವಿವಿಧ ಶುಲ್ಕಗಳ ಹೆಸರಿನಲ್ಲಿ ವಂಚಿಸಿದ್ದಾರೆ.
ಬೆಂಗಳೂರು:
ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಹೆಸರಲ್ಲಿ ಸೈಬರ್ ವಂಚಕರು ಬೆಂಗಳೂರಿನ ವ್ಯಕ್ತಿಗೆ ಬರೋಬ್ಬರಿ 42 ಲಕ್ಷ ಪಂಗನಾಮ ಹಾಕಿದ್ದಾರೆ. ಅಧಿಕ ಲಾಭ ಸಿಗುವ ಆಸೆಯಿಂದ ಅಪರಿಚಿತ ವ್ಯಕ್ತಿ ನೀಡಿದ ಆಮಿಷ ನಂಬಿ ಹಣ ಹೂಡಿಕೆ ಮಾಡಿದ್ದಾತ ಈಗ ಇರುವ ಹಣವನ್ನೂ ಕಳೆದುಕೊಂಡಿದ್ದಾನೆ. ತಾನು ವಂಚನೆಗೆ ಒಳಗಾಗಿರುವ ಬಗ್ಗೆ ಅರಿವಾಗುತ್ತಿದ್ದಂತೆ ಆತ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ವ್ಯಕ್ತಿಯ ಟ್ರೇಡಿಂಗ್ ಖಾತೆಯಲ್ಲಿ 138,687.22 USDT ಬ್ಯಾಲೆನ್ಸ್ ತೋರಿಸುತ್ತಿತ್ತು. ಆದರೆ ಆ ಹಣವನ್ನು ಪಡೆಯಲು ಪ್ರಯತ್ನಿಸಿದಾಗ,
ಆಪರೇಟರ್ಗಳು ಬ್ಯಾಂಕ್ ವಿವರಗಳು ತಪ್ಪಾಗಿದೆ ಎಂದು ಹೇಳಿದ್ದರು. ಅಲ್ಲದೆ ಅದನ್ನು ಸರಿಪಡಿಸಲು 4 ಲಕ್ಷ ಪಾವತಿಸಬೇಕೆಂದು ತಿಳಿಸಿದ್ದರು. ಬಳಿಕ ತಡ ಪಾವತಿ ದಂಡ, ಕರೆನ್ಸಿ ಪರಿವರ್ತನೆ ಶುಲ್ಕ ಮತ್ತು RBI ತೆರಿಗೆ ಹೆಸರಿನಲ್ಲಿ ಇನ್ನಷ್ಟು ಹಣ ಬೇಡಿಕೆ ಇಟ್ಟಿದರು. ಹೀಗಾಗಿ ತಾನು ಗಳಿಸಿದ್ದೇನೆಂದು ನಂಬಿದ್ದ ಹಣವನ್ನು ಪಡೆಯಲು ಹಾತೊರೆಯುತ್ತಿದ್ದ ವ್ಯಕ್ತಿ, ಡಿಜಿಟಲ್ ಸಾಲದಾತರಿಂದ ಹಾಗೂ ಸ್ನೇಹಿತರಿಂದ ಹಣ ಪಡೆದು ಅನೇಕ ಬಾರಿ ಆರೋಪಿಗಳ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಜುಲೈ 3ರಿಂದ ಆಗಸ್ಟ್ 1ರವರೆಗೆ ಒಟ್ಟು 42.62 ಲಕ್ಷ ರೂ. ಹಣವನ್ನು ದೂರುದಾರ ವ್ಯಕ್ತಿ ಪಾವತಿಸಿದ್ದರೂ ಆತ ಗಳಿಸಿದ್ದಾನೆ ಎನ್ನಲಾದ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಈ ವೇಳೆಗೆ ಇದು ವಂಚನೆ ಎಂದು ಆತನಿಗೆ ಜ್ಞಾನೋದಯವಾಗಿದ್ದು, ಅಪರಾಧಿಗಳನ್ನು ಪತ್ತೆಹಚ್ಚಿ ಹಣ ವಾಪಸ್ ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾನೆ. ಸಂತ್ರಸ್ತ ನೀಡಿದ ದೂರಿನ ಅನ್ವಯ ಕ್ರಿಪ್ಟೋ ವಾಲೆಟ್ ವಿವರಗಳು, ಫೋನ್ ಸಂಖ್ಯೆಗಳು ಹಾಗೂ ಅನುಮಾನಾಸ್ಪದ ವೆಬ್ ಡೊಮೇನ್ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
45 ವರ್ಷದ ಬೆಂಗಳೂರಿನ ವ್ಯಕ್ತಿಗೆ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಬಗ್ಗೆ ಮಾಹಿತಿ ಇನ್ಸ್ಟಾಗ್ರಾಂ ಮೂಲಕ ದೊರೆತಿದ್ದು, ಅಶುತೋಷ್ ಶರ್ಮಾ ಎಂಬ ವ್ಯಕ್ತಿ ಕ್ರಿಪ್ಟೋ ಹೂಡಿಕೆಗಳ ಕುರಿತು ಮಾರ್ಗದರ್ಶನ ನೀಡುತ್ತಿದ್ದ. ಬಳಿಕ ಇದಕ್ಕೆ ಸಂಬಂಧಿಸಿದ ಟೆಲಿಗ್ರಾಂ ಗುಂಪನ್ನೂ ವ್ಯಕ್ತಿಗೆ ಪರಿಚಯಿಸಿದ್ದ. ಹೂಡಿಕೆ ಹಣಕ್ಕೆ ಶೇ. 15ರಷ್ಟು ಲಾಭ ನೀಡುವ ಭರವಸೆ ಸಿಕ್ಕ ಹಿನ್ನಲೆ ಸ್ವಲ್ಪ ಹಣವನ್ನ ಸಂತ್ರಸ್ತ ಹೂಡಿಕೆ ಮಾಡಿದ್ದ. ಈ ವೇಳೆ ಲಾಭ ತನ್ನ ಖಾತೆಗೆ ಜಮಾ ಆಗುತ್ತಿದ್ದ ಕಾರಣ ಆತ ಸೈಬರ್ ಖದೀಮರನ್ನು ಮತ್ತಷ್ಟು ನಂಬಿದ್ದ. ಇನ್ನೂ ಹಣ ಹೂಡಿಕೆ ಮಾಡಿದ್ದ ಎನ್ನಲಾಗಿದೆ.
ಇನ್ನಷ್ಟು ಓದಿರಿ:
ಆಸ್ತಿ ತೆರಿಗೆ ಬಾಕಿ: ಬೆಂಗಳೂರಿನ ಮಂತ್ರಿಮಾಲ್ಗೆ ಮತ್ತೆ ಬೀಗ