ಸರ್ಕಾರದಿಂದ ಹಣ ಗ್ಯಾರಂಟಿ ಆಂಧ್ರ ಸಿಎಂ ಕ್ರಮಕ್ಕೆ ಉದ್ಯಮ ವಲಯ ಶ್ಲಾಘನೆ
Andhra CM Chandrababu Naidu announces escrow system for investors: ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಉದ್ಯಮ ಸಂಸ್ಥೆಯ ಹೆಸರಿನಲ್ಲಿ ಎಸ್ಕ್ರೋ ಅಕೌಂಟ್ ತೆರೆಯಲಾಗುತ್ತದೆ. ಸರ್ಕಾರದಿಂದ ಆ ಸಂಸ್ಥೆಗೆ ಬರಬೇಕಾದ ಯಾವುದೇ ಹಣವು ನೇರವಾಗಿ ಆ ಅಕೌಂಟ್ಗೆ ಹೋಗುತ್ತದೆ. ಈ ಇನ್ಸೆಂಟಿವ್ ಹಣಕ್ಕಾಗಿ ಉದ್ಯಮಿಗಳು ಸರ್ಕಾರಿ ಕಚೇರಿಗಳನ್ನು ಸುತ್ತುವ ಅವಶ್ಯಕತೆಯೇ ಇರುವುದಿಲ್ಲ. ಭಾರತದಲ್ಲಿ ಇಂಥದ್ದೊಂದು ನೀತಿ ಪ್ರಪ್ರಥಮ ಬಾರಿಗೆ ಜಾರಿಯಾಗುತ್ತಿದೆ.
ವಿಶಾಖಪಟ್ಟಣಂ:
ಉದ್ದಿಮೆಗಳಿಗೆ ಸರ್ಕಾರಗಳು ವಿವಿಧ ರೀತಿಯ ಉತ್ತೇಜಕ ಪ್ಯಾಕೇಜ್ಗಳನ್ನು ಘೋಷಿಸುತ್ತವೆ. ಆದರೆ, ಅದನ್ನು ಪಡೆಯುವಷ್ಟರಲ್ಲಿ ಉದ್ಯಮಗಳು ಬೇಸ್ತುಬಿದ್ದಿರುತ್ತಾರೆ. ಸರ್ಕಾರಿ ಕಚೇರಿಗಳನ್ನು ಅಲೆದಾಡಿ, ಒರಲಿ, ಕಾಡಿ ಬೇಡಿ ಹಣ ಪಡೆಯಬೇಕಾಗುತ್ತದೆ. ಇದನ್ನು ತಪ್ಪಿಸಲು ಆಂಧ್ರ ಸರ್ಕಾರ ಎಸ್ಕ್ರೋ ಅಕೌಂಟ್ (Escrow account) ನೀತಿಯನ್ನು ಜಾರಿಗೆ ತಂದಿದೆ. ಆಂಧ್ರದ ಈ ಕ್ರಮಕ್ಕೆ ಉದ್ಯಮ ವಲಯ ಶ್ಲಾಘನೆ ವ್ಯಕ್ತಪಡಿಸಿದೆ.
ಏನಿದು ಎಸ್ಕ್ರೋ ಅಕೌಂಟ್:
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕಳೆದ ವಾರ
ಆರಂಭವಾದ 30ನೇ ಸಿಐಐ ಪಾರ್ಟ್ನರ್ಶಿಪ್ ಸಮಿಟ್ನಲ್ಲಿ ಈ ಘೋಷಣೆ ಮಾಡಿದ್ದಾರೆ. ತಮ್ಮ ಸರ್ಕಾರ ಹೂಡಿಕೆದಾರರಿಗೆ ಅನುಕೂಲವಾಗುವ ನೀತಿ ಮತ್ತು ವಾತಾವರಣ ನೀಡಿದೆ. ಈಗ ಎಸ್ಕ್ರೋ ಅಕೌಂಟ್ ವ್ಯವಸ್ಥೆಯನ್ನೂ ಮಾಡಿದೆ. ಈಗ ಹೂಡಿಕೆದಾರರು ಈ ರಾಜ್ಯಕ್ಕೆ ಬಂದು ತೊಡಗಿಸಿಕೊಳ್ಳುವುದು ಬಾಕಿ ಇದೆ ಎಂದಿದ್ದಾರೆ.
ಒಂದು ಉದ್ಯಮವು ಸರ್ಕಾರದ ಜೊತೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದ ಬಳಿಕ ಆ ಸಂಸ್ಥೆಯ ಹೆಸರಿನಲ್ಲಿ ಎಸ್ಕ್ರೋ ಅಕೌಂಟ್ ಅನ್ನು ತೆರೆಯಲಾಗುತ್ತದೆ. ಎಂಒಯುನಲ್ಲಿ ಸರ್ಕಾರವು ಆ ಸಂಸ್ಥೆಗೆ ಪ್ರೋತ್ಸಾಹಕ ಧನ ಕೊಡುವುದಾಗಿ ತಿಳಿಸಿದ್ದರೆ, ಆ ಹಣವನ್ನು ಬ್ಯಾಂಕ್ ಮೂಲಕ ಎಸ್ಕ್ರೋ ಅಕೌಂಟ್ಗೆ ಕಳುಹಿಸಲಾಗುತ್ತದೆ. ಉದ್ಯಮಿಗಳು ಈ ಹಣಕ್ಕಾಗಿ ಸರ್ಕಾರಿ ಕಚೇರಿಗಳನ್ನೋ, ಮಂತ್ರಿ ಮಾಗಧರನ್ನೋ ಭೇಟಿ ಮಾಡಲು ಅಲೆದಾಡಬೇಕಿಲ್ಲ. ರಿಯಲ್ ಟೈಮ್ನಲ್ಲಿ ಫಂಡ್ಗಳನ್ನು ಎಸ್ಕ್ರೋ ಅಕೌಂಟ್ಗೆ ಸರ್ಕಾರ ರಿಲೀಸ್ ಮಾಡುತ್ತದೆ.
ಸಿಎಂ ನಾಯ್ಡುರನ್ನು ಹೊಗಳಿದ ಆನಂದ್ ಮಹೀಂದ್ರ:
‘ಈ ಮನುಷ್ಯನನ್ನು ಹಿಡಿದು ನಿಲ್ಲಿಸಲು ಆಗಲ್ಲ. ದಶಕಗಳಿಂದ ನಾನು ಅವರನ್ನು ಕಾಣುತ್ತಾ ಬಂದಿದ್ದೇನೆ. ಅಭಿವೃದ್ಧಿ ಬಗ್ಗೆ ಅವರಿಗಿರುವ ಅಭಿಲಾಷೆ ಮಾತ್ರವಲ್ಲ, ಅವರ ಹೊಸತನದ ನೀತಿ ತರಲು ಅವರಿಗಿರುವ ಬಯಕೆಯನ್ನು ನಾನು ಮೆಚ್ಚಿಕೊಳ್ಳುತ್ತೇನೆ’ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.
ಹೂಡಿಕೆದಾರರಿಗೆ ಎಸ್ಕ್ರೋ ಅಕೌಂಟ್ ತೆರೆಯುವ ಕ್ರಮದ ಬಗ್ಗೆ ಚಂದ್ರಬಾಬು ನಾಯ್ಡು ಮಾತನಾಡುತ್ತಿರುವ ವಿಡಿಯೋವೊಂದನ್ನು ಉದ್ಯಮಿ ಆನಂದ್ ಮಹೀಂದ್ರ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
90 ಲಕ್ಷ ಕೋಟಿ ರೂ ಹೂಡಿಕೆಯ ಗುರಿ:
ಕಳೆದ 18 ತಿಂಗಳಲ್ಲಿ ಆಂಧ್ರವು 20
ಬಿಲಿಯನ್ ಡಾಲರ್ ಹೂಡಿಕೆ ಆಕರ್ಷಿಸಿದೆ. ಇದರಿಂದ 20 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಮುಂದಿನ ಮೂರು ವರ್ಷದಲ್ಲಿ 500 ಬಿಲಿಯನ್ ಡಾಲರ್ ಹೂಡಿಕೆಯ ಗುರಿ ಇದೆ. ಅದು ಈಡೇರಿದರೆ 50 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಮುಂದಿನ ಒಂದು ದಶಕದಲ್ಲಿ 1 ಟ್ರಿಲಿಯನ್ ಡಾಲರ್ (89 ಲಕ್ಷ ಕೋಟಿ ರೂ) ಹೂಡಿಕೆ ಆಕರ್ಷಿಸುವ ಹೆಗ್ಗುರಿ ಇದೆ ಎಂದು ಚಂದ್ರಬಾಬು ನಾಯ್ಡು ತಮ್ಮ ಆಕಾಂಕ್ಷೆ ಬಿಚ್ಚಿಟ್ಟಿದ್ದಾರೆ.
ಇನ್ನಷ್ಟು ಓದಿರಿ:
ಬರಲಿದೆ ಹೊಸ ಆಧಾರ್ ಹೆಸರು, ನಂಬರ್, ವಿಳಾಸ ಮರೆಮಾಚಿರುವ ಕಾರ್ಡ್ ಸದ್ಯದಲ್ಲೇ