ಬೆಂಗಳೂರು ಟೆಕ್ ಸಮಿಟ್ 2025ಗೆ ಸ್ಟಾರ್ಟಪ್ ನಗರಿಯಲ್ಲಿ 3 ದಿನ ತಂತ್ರಜ್ಞಾನ ಶಕ್ತಿ ಅನಾವರಣ
CM Siddaramaiah inaugurates Bengaluru Tech Summit 2025: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಗಳವಾರ 28ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್ ಅನ್ನು ಉದ್ಘಾಟಿಸಿದ್ದಾರೆ. ತುಮಕೂರು ರಸ್ತೆಯ ಬಿಇಐಸಿಯಲ್ಲಿ ಈ ಸಮಿಟ್ ನ. 20ರವರೆಗೂ 3 ದಿನ ಕಾಲ ನಡೆಯಲಿದೆ. ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಮೊದಲಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಇದ್ದರು.
ಬೆಂಗಳೂರು:
ಮೂರು ದಿನಗಳ ಬೆಂಗಳೂರು ಟೆಕ್ ಸಮಿಟ್ಗೆ (Bengaluru Tech Summit 2025) ಇಂದು ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಗಳವಾರ 28ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್ ಅನ್ನು ಉದ್ಘಾಟಿಸಿದ್ದಾರೆ. ನವೆಂಬರ್ 18ರಿಂದ 20ರವರೆಗೆ ಮೂರು ದಿನಗಳ ಕಾಲ ಈ ತಂತ್ರಜ್ಞಾನ ಶೃಂಗಸಭೆ ನಡೆಯಲಿದೆ. 50ಕ್ಕೂ ಹೆಚ್ಚು ದೇಶಗಳ ತಂತ್ರಜ್ಞಾನ ಪರಿಣಿತರು, ನಾಯಕರು, ವಿವಿಧ ಕ್ಷೇತ್ರಗಳ ಉದ್ಯಮಪತಿಗಳು ಈ ಟೆಕ್ ಸಮಿಟ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ತುಮಕೂರು ರಸ್ತೆಯಲ್ಲಿರುವ ಮಾದಾವರ ಮೆಟ್ರೋ ನಿಲ್ದಾಣ ಸಮೀಪದ ಬಿಇಐಸಿ ಮೈದಾನದಲ್ಲಿ ಮಂಗಳವಾರದಿಂದ ಗುರುವಾರದವರೆಗೂ ಈ ಟೆಕ್ ಸಮಿಟ್ ನಡೆಯಲಿದೆ. ಭವಿಷ್ಯದ ತಂತ್ರಜ್ಞಾನದ ಥೀಮ್ ಈ ಬಾರಿ ಸಮಿಟ್ನದ್ದಾಗಿದೆ. ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಬಿಟಿ ಇಲಾಖೆ, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಸಂಸ್ಥೆ ಈ ತಂತ್ರಜ್ಞಾನ ಶೃಂಗಸಭೆಯನ್ನು ಆಯೋಜಿಸಿವೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಎಂಬಿ ಪಾಟೀಲ್, ಪ್ರಿಯಾಕ್ ಖರ್ಗೆ, ಬೆಂಗಳೂರಿನ ಪ್ರಮುಖ ಉದ್ಯಮಿಗಳಾದ ಕಿರಣ್ ಮಜುಮ್ದಾರ್, ಕ್ರಿಸ್ ಗೋಪಾಲಕೃಷ್ಣನ್, ಪ್ರಶಾಂತ್ ಪ್ರಕಾಶ್ ಮೊದಲಾದವರು ವೇದಿಕೆ ಹಂಚಿಕೊಂಡರು.
ಈ ಬಾರಿಯ ಟೆಕ್ ಸಮಿಟ್ನಲ್ಲಿ ಹಲವು ವಿಶೇಷತೆಗಳಿವೆ. ಫ್ಯೂಚರ್ ಮೇಕರ್ಸ್ ಕಾಂಕ್ಲೇವ್ ಕಾರ್ಯಕ್ರಮವನ್ನು ಈ ಬಾರಿ ನಡೆಸಲಿದ್ದು, ಇದರಲ್ಲಿ 10,000 ಉದ್ದಿಮೆ ಸಂಸ್ಥಾಪಕರು, ಹೂಡಿಕೆದಾರರು ಮತ್ತು ಇನ್ನೋವೇಟರ್ಗಳ ಸಮ್ಮಿಳನ ಆಗಲಿದೆ. ಹೊಸ ಆಕಾಂಕ್ಷಿಗಳಿಂದ ಹಿಡಿದು ಅನುಭವಸ್ಥ ಆಂಟ್ರಪ್ರನ್ಯೂರ್ಗಳವರೆಗೆ ಪ್ರತಿಯೊಬ್ಬ ಪ್ರತಿಭೆಗೂ ಒಳ್ಳೆಯ ವೇದಿಕೆ ಸಿಗಲಿದೆ.
ಈ ಟೆಕ್ ಸಮಿಟ್ಗೆ 50,000 ಹೆಚ್ಚು ಮಂದಿ ಭೇಟಿ ನೀಡಲಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಹೂಡಿಕೆದಾರರು, 500ಕ್ಕೂ ಹೆಚ್ಚು ಮಂದಿ ಭಾಷಣಕಾರರು, ಸಾವಿರಕ್ಕೂ ಅಧಿಕ ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ. 60ಕ್ಕೂ ಹೆಚ್ಚು ದೇಶಗಳಿಂದ ಪ್ರತಿನಿಧಿಗಳು ಬರಲಿದ್ದಾರೆ. ಸಮಿಟ್ನಲ್ಲಿ 80 ಜ್ಞಾನ ಅಧಿವೇಶನಗಳು, 5,000ಕ್ಕೂ ಅಧಿಕ ಸಭೆಗಳು ನಡೆಯಲಿವೆ.
ಈ ವೇಳೆ, ಕರ್ನಾಟಕ ಸರ್ಕಾರದ ಹೊಸ ಐಟಿ, ಸ್ಟಾರ್ಟಪ್ ಮತ್ತು ಸ್ಪೇಸ್ಟೆಕ್ ನೀತಿಗಳನ್ನೂ ಅನಾವರಣಗೊಳಿಸಲಾಗುತ್ತದೆ. ಎಐ ಸಿದ್ಧ ಕಂಪ್ಯೂಟರ್ ಸೇರಿದಂತೆ ಹಲವು ವಿಶೇಷತೆಗಳು ಈ ಸಮಿಟ್ನಲ್ಲಿ ಕಾಣಸಿಗಲಿವೆ.
ಇನ್ನಷ್ಟು ಓದಿರಿ:
ಪಾಕಿಸ್ತಾನದ ಜಿಡಿಪಿ ಬೆಂಗಳೂರಿನ ರಸ್ತೆಯಲ್ಲಿ, ರೋಲ್ಸ್ ರಾಯ್ಸ್ ಕಾನ್ವೊಯ್