ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಪಾಠ, ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ: ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ ಅವರು ಬಿಹಾರ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ್ದು, ತಮ್ಮ ಪಕ್ಷಕ್ಕೆ ಇದೊಂದು ದೊಡ್ಡ ಪಾಠ ಎಂದಿದ್ದಾರೆ.
ದಾವಣಗೆರೆ :
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ, ಆದ್ರೆ ಬಿಹಾರ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಪಾಠ. ಸೋಲಿಗೆ ಎಲ್ಲೆಲ್ಲಿ ಲೋಪದೋಷ ಆಗಿದೆ ಎನ್ನುವುದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಬಿಹಾರ ರಾಜ್ಯದಲ್ಲಿ ನಡೆದಿದೆ ಎನ್ನಲಾದ ವೋಟ್ ಚೋರಿ ಬಗ್ಗೆ ಮೊದಲಿಂದಲೂ ಆರೋಪ ಕೇಳಿ ಬರುತ್ತಿದೆ. ಅದಕ್ಕೆ ಚುನಾವಣಾ ಆಯೋಗ ಉತ್ತರ ಕೊಡಬೇಕಿದೆ ಎಂದರು.
ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ. ಸಿಎಂ ಬದಲಾವಣೆ ಮಾತೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯ ಅವರ ಪರ ಬ್ಯಾಟ್ ಬೀಸಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದ ಆವರಣದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೂ ಮುನ್ನ ಮಾತನಾಡಿದ ಅವರು, ರಾಜ್ಯದ ಎಲ್ಲಾ ಕಡೆ ಸಂಚಾರ ಮಾಡಲು ಹೆಲಿಕಾಪ್ಟರ್ ಬದಲಾವಣೆ ಮಾಡಲಾಗಿದೆ. ಚುನಾವಣಾ ದೃಷ್ಟಿಯಿಂದ ಹೆಲಿಕಾಪ್ಟರ್ ಬದಲಾಯಿಸಲಾಗಿದೆ. ಇದರಲ್ಲಿ ಏನೂ ವಿಶೇಷತೆ ಇಲ್ಲ ಎಂದು ತಿಳಿಸಿದರು.
ನಾವು ಏಕೆ ಸೋತ್ವಿ ಎಂದು ಪ್ರಮುಖವಾಗಿ ಚರ್ಚೆಯಾಗಬೇಕು. ಬಿಹಾರದಲ್ಲಿ ನಮ್ಮ ಗ್ಯಾರೆಂಟಿ ಇರಲಿಲ್ಲ, ಅವರ ಸರ್ಕಾರ ಇತ್ತು. ಅವರು ಗ್ಯಾರೆಂಟಿ ಘೋಷಣೆ ಮಾಡಿ ಸಕ್ಸಸ್ ಆದರು. ವೋಟ್ ಚೋರಿ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡ್ತಾರೆ, ಮುಂದೆ ಏನ್ ಆಗುತ್ತೋ ಕಾದು ನೋಡ್ಬೇಕಿದೆ ಎಂದರು.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ಕಾಂಗ್ರೆಸ್ನವರು ಏನು ಆರೋಪ ಮಾಡಿದ್ದಾರೋ ಅದಕ್ಕೆ ಅವರು ಉತ್ತರ ಕೊಡಬೇಕಿದೆ. ಬಿಹಾರದ ಜನತೆಯ ಮನಸ್ಥಿತಿ ಇಲ್ಲಿಯ ಜನರ ಮನಸ್ಥಿತಿ ಬೇರೆ ಬೇರೆ. ಕರ್ನಾಟಕದಲ್ಲಿ ಅಹಿಂದಕ್ಕೆ ಹೆಚ್ಚು ಮಹತ್ವ ಇದೆ. ಬಿಹಾರದಲ್ಲಿ ಎಲ್ಲರನ್ನೂ ಒಗ್ಗೂಡಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಎಲ್ಲಾ ಅಹಿಂದ ವರ್ಗವನ್ನು ಒಗ್ಗೂಡಿಸಲು ಸಾಧ್ಯವಿದೆ. ಬಿಹಾರ ಚುನಾವಣೆ ಫಲಿತಾಂಶ ಗೆದ್ದರೂ ಚರ್ಚೆಯಾಗಬೇಕು, ಸೋತರೂ ಚರ್ಚೆಯಾಗಬೇಕು ಎಂದು ಸಚಿವ ಜಾರಕಿಹೊಳಿ ಹೇಳಿದ್ದಾರೆ.
ಸಂಪುಟ ಪುನಾರಚನೆ ಹೈಕಮಾಂಡ್ಗೆ ಬಿಟ್ಟ ವಿಚಾರ. ದೆಹಲಿಗೆ ಹೋಗೋದು ಬರೋದು ಸಚಿವರಿಗೆ ಕೆಲಸ ಇರ್ತವೆ, ಅದಕ್ಕೆ ಹೋಗಿ ಬರುತ್ತಿರುತ್ತೇವೆ. ಸಂಪುಟ ಪುನಾರಚನೆ ಬಗ್ಗೆ ನಮ್ಮ ಜೊತೆ ಚರ್ಚೆ ಮಾಡೋದಿಲ್ಲ. ಅದರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು.
ಸಂಪುಟ ಪುನಾರಚನೆಯಾದ್ರೆ ಇನ್ನು ಎರಡು ಸ್ಥಾನವನ್ನು ವಾಲ್ಮೀಕಿ ಸಮಾಜಕ್ಕೆ ಕೇಳಿದ್ದೇವೆ. ಈ ಬಾರಿ ಎರಡು ಸಚಿವ ಸ್ಥಾನ ಕೊಡಲೇಬೇಕು, ಇದರಿಂದ ನಮ್ಮ ಸಮುದಾಯಕ್ಕೆ ಒಳ್ಳೇದಾಗುತ್ತೆ. ನಮ್ಮ ಸಮಾಜದಲ್ಲಿ ಯಾರಿಗಾದ್ರು ಸಚಿವ ಸ್ಥಾನ ಕೊಟ್ಟರೂ ನಡೆಯುತ್ತೆ. ಅವರಿಗೆ, ಇವರಿಗೆ ಕೊಡಿ ಎಂದು ನಾವು ಡಿಮ್ಯಾಂಡ್ ಮಾಡೋದಿಲ್ಲ ಎಂದು ಹೇಳಿದರು.
ಹೊಸ ಹೆಲಿಕಾಪ್ಟರ್ ಖರೀದಿ, ಹೆಲಿಕಾಪ್ಟರ್ ವೀಕ್ಷಿಸಲು ಮುಂದಾದ ಅಭಿಮಾನಿಗಳು :
ಸಚಿವ ಸತೀಶ್ ಜಾರಕಿಹೊಳಿ ಅವರು ಹೊಸ ಹೆಲಿಕಾಪ್ಟರ್ ಖರೀದಿ ಬಳಿಕ ಅದೇ ಹೆಲಿಕಾಪ್ಟರ್ನಲ್ಲಿ ಮೊದಲ
ಬಾರಿ ದಾವಣಗೆರೆ ಜಿಲ್ಲೆಗೆ ಪ್ರವಾಸ ಕೈಗೊಂಡರು.
ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದ ಹೆಲಿಪ್ಯಾಡ್ಗೆ ಆಗಮಿಸಿ ರಸ್ತೆಯ ಕಾಮಗಾರಿಯ ಶಂಕುಸ್ಥಾಪನೆಗೆ ಬಂದರು. ಈ ವೇಳೆ ಸಚಿವರನ್ನು ವೀಕ್ಷಿಸಲು ಅಭಿಮಾನಿಗಳು ಮುಗಿಬಿದ್ದರು. ಇನ್ನು ಹೆಲಿಕಾಪ್ಟರ್ ಸುತ್ತ ಜನಜಂಗುಳಿ ನೆರೆದಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಹೆಲಿಕಾಪ್ಟರ್ಗೆ ರಕ್ಷಣೆ ಒದಗಿಸಿ ಜನರನ್ನು ಅಲ್ಲಿಂದ ಚದುರಿಸಿದರು. ಹೆಲಿಕಾಪ್ಟರ್ ಸುತ್ತ ನಿಂತು ಜನರು ಸೆಲ್ಫಿಗೆ ಪೋಸ್ ಕೊಟ್ಟರು. ಜನರನ್ನು ಕಂಡ ಪೈಲೆಟ್ ಕಕ್ಕಾಬಿಕ್ಕಿಯಾದರು.
ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ:
ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಬೆಳ್ಳೂಡಿ ಗ್ರಾಮದ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಜಗಳೂರು ಶಾಸಕ ಬಿ ದೇವೆಂದ್ರಪ್ಪ, ಮಾಯಕೊಂಡ ಶಾಸಕ ಬಸವಂತಪ್ಪ, ಹರಿಹರ ಶಾಸಕ ಬಿ. ಪಿ. ಹರೀಶ್ ಸಾಥ್ ನೀಡಿದರು.
ಶಂಕುಸ್ಥಾಪನೆ ಮುನ್ನ ಸಚಿವರು ರಾಜನಹಳ್ಳಿ ವಾಲ್ಮೀಕಿ ಮಠ ಹಾಗೂ ಬೆಳ್ಳೂಡಿಯ ಕನಕ ಗುರು ಪೀಠಕ್ಕೆ ಭೇಟಿ ನೀಡಿ ಇಬ್ಬರು ಶ್ರೀಗಳ ಆಶೀರ್ವಾದ ಪಡೆದರು. ಸಿಎಂ ಬದಲಾವಣೆ ಕೂಗು ಕೇಳಿ ಬರುತ್ತಿರುವ ನಡುವೆ ಸಚಿವರು ಮಠಗಳಿಗೆ ಭೇಟಿ ನೀಡಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತು.
ಇನ್ನು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಸಂತಾಪ ಸೂಚಿಸಿದರು. ಸಚಿವ ಸತೀಶ್ ಜಾರಕಿಹೊಳಿ, ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸೇರಿದಂತೆ ಹಲವರು ಮಠದ ಆವರಣದಲ್ಲಿ ಗಿಡ ನೆಟ್ಟು ವೃಕ್ಷ ಮಾತೆಗೆ ಸಂತಾಪ ಸೂಚಿಸಿದರು. ಎರಡು ನಿಮಿಷಗಳ ಮೌನಾಚರಣೆ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಇನ್ನಷ್ಟು ಓದಿರಿ :
ಕಾಂಗ್ರೆಸ್ ನಾಯಕರಿಂದ ಮತ ಚೋರಿ ವಿರುದ್ಧ ಪ್ರತಿಭಟನೆ: ಸಚಿವ ಸಂತೋಷ್ ಲಾಡ್