ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆ: ಸಭಾಪತಿ ಬಸವರಾಜ ಹೊರಟ್ಟಿ
ದಕ್ಷಿಣ ಕರ್ನಾಟಕದ ಶಾಸಕರು ಉತ್ತರ ಕರ್ನಾಟಕದ ಜನರ ಸಮಸ್ಯೆ ಚರ್ಚಿಸುತ್ತಾರೆ. ಆದರೆ ಉತ್ತರ ಕರ್ನಾಟಕದ ಶಾಸಕರು ಇಲ್ಲಿಯ ಸಮಸ್ಯೆ ಬಗ್ಗೆ ಚರ್ಚಿಸುವುದಿಲ್ಲ ಎಂದು ಬಸವರಾಜ್ ಹೊರಟ್ಟಿ ಹೇಳಿದರು.
ಹಾವೇರಿ:
ಹಾವೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಚಳಿಗಾಲದ ಅಧಿವೇಶನ ಎಂದರೆ ಪ್ರತಿಭಟನೆಗೆ ಸೀಮಿತ ಎನ್ನುವ ಮಾತು ಇದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಆರೋಪದಿಂದ ಅದನ್ನು ದೂರ ಮಾಡಬೇಕು. ಶಿಕ್ಷಣ, ಉದ್ಯೋಗ ಸೇರಿದಂತೆ ಅಭಿವೃದ್ಧಿ ವಿಷಯ ಚರ್ಚೆಯಾಗಬೇಕು ಎಂದು ತಿಳಿಸಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಮುಗಿದ ಬಳಿಕ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ಮಾಡುತ್ತೇವೆ. ಕಳೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಉತ್ತರ ಕರ್ನಾಟಕದ ಶಾಸಕರು ಮಾತನಾಡಲಿಲ್ಲ. ದಕ್ಷಿಣ ಕರ್ನಾಟಕದ ಶಾಸಕರು ಮಾತನಾಡಿದ್ದಾರೆ. ಅದನ್ನು ಬರೆದು ಇಟ್ಟಿದ್ದೇನೆ. ಫೋನ್ ಮಾಡಿ ಎಲ್ಲಾ ಶಾಸಕರಿಗೂ ಹೇಳುತ್ತಿದ್ದೇನೆ ಎಂದು ಹೇಳಿದರು.
ಶಾಸಕ ರಾಜು ಕಾಗೆ ಪ್ರತ್ಯೇಕ ರಾಜ್ಯದ ಕೂಗಿನ ಬಗ್ಗೆ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ಪ್ರತ್ಯೇಕ ರಾಜ್ಯ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕರ್ನಾಟಕದ ಏಕೀಕರಣಕ್ಕಾಗಿ ಬಹಳಷ್ಟು ಜನರು ಹೋರಾಟ ಮಾಡಿದ್ದಾರೆ. ಅಖಂಡ ಕರ್ನಾಟಕ ಇರಬೇಕು. ಪ್ರತ್ಯೇಕತೆಗೆ ನನ್ನ ಸಹಮತ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸದನದಲ್ಲಿ ಭಾಗವಹಿಸುವಂತೆ ಈಗಾಗಲೇ 38 ಜನರಿಗೆ ಮಾತನಾಡಿದ್ದೇನೆ. ಉಳಿದವರ ಜೊತೆಯೂ ಮಾತನಾಡುತ್ತೇನೆ. ಎಲ್ಲರೂ ಅಧಿವೇಶನದಲ್ಲಿ ಭಾಗವಹಿಸಿ ಸದನದ ಗೌರವ ಹೆಚ್ಚಿಸಬೇಕು ಎಂದು ಹೊರಟ್ಟಿ ಮನವಿ ಮಾಡಿದರು.
ಸಭಾಪತಿ ಹುದ್ದೆಯಿಂದ ಕೆಳಗಡೆ ಇಳಿಸುವ ವಿಚಾರದ ಕುರಿತು ಮಾತನಾಡಿದ ಅವರು, ನಾನು ಒಂದು ಸಲ ಪರಿಷತ್ ಸಭಾಪತಿ ಆಗಿದ್ದೇನೆ. ಎಷ್ಟು ವರ್ಷ ಆಗಿದ್ದರೂ ಮಾಜಿ ಆಗಲೇಬೇಕು. ವಿಧಾನ ಪರಿಷತ್ ಸಭಾಪತಿ ಹುದ್ದೆ ಬಗ್ಗೆ ನಾನು ತಲೆ ಕೆಡೆಸಿಕೊಳ್ಳುವುದಿಲ್ಲ. ಸರ್ಕಾರ ಮತ್ತು ಶಾಸಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ತಿಳಿಸಿದರು.
ಕಬ್ಬು ಬೆಳೆಗಾರರ ಅನೇಕ ಸಮಸ್ಯೆಗಳು ಇವೆ. ಸದನದಲ್ಲಿ ಗದ್ದಲ ಗಲಾಟೆ ಆಗದಂತೆ ನೋಡಿಕೊಳ್ಳವುದು. ಸದನವನ್ನು ಮುಂದೂಡದೆ ಚರ್ಚೆ ಮಾಡಬೇಕು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ದಕ್ಷಿಣ ಕರ್ನಾಟಕದ ಶಾಸಕರು ಉತ್ತರ ಕರ್ನಾಟಕದ ಜನರ ಸಮಸ್ಯೆ ಚರ್ಚಿಸುತ್ತಾರೆ. ಆದರೆ, ಉತ್ತರ ಕರ್ನಾಟಕದ ಶಾಸಕರು ಇಲ್ಲಿಯ ಸಮಸ್ಯೆ ಬಗ್ಗೆ ಚರ್ಚಿಸುವುದಿಲ್ಲ ಎಂದು ತಿಳಿಸಿದರು.
ಇನ್ನಷ್ಟು ಓದಿರಿ :
ಕೇಂದ್ರ ಕಬ್ಬು ನಿರ್ದೇಶನಾಲಯದ ನಿರ್ದೇಶಕರ ಜೊತೆ ಚರ್ಚೆ ನಡೆಸಿದ ಸಚಿವ ತಿಮ್ಮಾಪುರ