belagavi news :
ವಾಷಿಂಗ್ಟನ್ (ಅಮೆರಿಕ): ಬಲವಂತದ ದುಡಿಮೆಗೆ ಒಳಪಟ್ಟ ಕಾರ್ಮಿಕರಿಂದ ತಯಾರಿಸಲಾದ ಸರಕುಗಳ ಆಮದಿಗೆ ಅಮೆರಿಕ ಹೊಸ ಸುಂಕ ಕ್ರಮ ಜಾರಿಗೆ ತಂದಿದೆ. ಭಾರತ ಸೇರಿದಂತೆ 17 ದೇಶಗಳ ಸರಕುಗಳ ಮೇಲೆ ಶೇ. 10 ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗಿದ್ದು, ಶುಕ್ರವಾರ ಮಧ್ಯರಾತ್ರಿಯಿಂದ ಈ ಕ್ರಮ ಜಾರಿಗೆ ಬರಲಿದೆ.
ಬಲವಂತದ ದುಡಿಮೆಯಿಂದ ಉತ್ಪಾದಿಸಲಾದ ವಸ್ತುಗಳ ಆಮದನ್ನು ತಡೆಯುವ ಉದ್ದೇಶದಿಂದ ಅಮೆರಿಕ ಕಳೆದ ತಿಂಗಳು ಹಾಗೂ 60 ದೇಶಗಳ ವಿರುದ್ಧ ಸೆಕ್ಷನ್ 301ರ ಅಡಿಯಲ್ಲಿ ತನಿಖೆ ಆರಂಭಿಸಿತ್ತು. ಈ ಪಟ್ಟಿಯಲ್ಲಿ ಭಾರತವನ್ನು ಸೇರಿಸಲಾಗಿತ್ತು. ಭಾರತವು ತನ್ನ ವಿದೇಶಿ ವ್ಯಾಪಾರ ನೀತಿಯಲ್ಲಿ ಬಲವಂತದ ದುಡಿಮೆಯಿಂದ ತಯಾರಾದ ಸರಕುಗಳ ಆಮದನ್ನು ನಿಷೇಧಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಅಮೆರಿಕ ಪರಿಗಣಿಸಿದೆ.
ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, ಬಲವಂತದ ದುಡಿಮೆಯನ್ನು ತಡೆಯುವ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ದೇಶಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರಕುಗಳ ಮೇಲೆ ಶೇ. 10 ರಷ್ಟು ಸುಂಕ ವಿಧಿಸುವಂತೆ ವ್ಯಾಪಾರ ಪ್ರತಿನಿಧಿಗಳು ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರು ಸೆಕ್ಷನ್ 301ರ ಅಡಿಯಲ್ಲಿ 60 ದೇಶಗಳ ಮೇಲೆ ಹೊಸ ಸುಂಕಗಳನ್ನು ಘೋಷಿಸಿದ್ದಾರೆ. ಚೀನಾ, ಯುನೈಟೆಡ್ ಕಿಂಗ್ ಡಮ್ ಮತ್ತು ಜಪಾನ್ ಸೇರಿದಂತೆ ಕೆಲವು ದೇಶಗಳ ಸರಕುಗಳ ಮೇಲೆ ಶೇ. 12.5 ರಷ್ಟು ಸುಂಕ ವಿಧಿಸಲಾಗಿದೆ.
ದೇಶೀಯ ಪೂರೈಕೆಯಲ್ಲಿ ಕೊರತೆ ಉಂಟುಮಾಡಬಹುದಾದ ಕಚ್ಚಾ ವಸ್ತುಗಳ ಅಮೆರಿಕದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗದ ವಸ್ತುಗಳು ಹಾಗೂ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವ ಉತ್ಪನ್ನಗಳಿಗೆ ಈ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಹೊಸ ಸುಂಕ ಕ್ರಮದ ಪ್ರಕಾರ, ಭಾರತ ಕೆನಡಾ, ಯುಕೆ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ್ ಸೇರಿದಂತೆ 17 ದೇಶಗಳಿಗೆ ಶೇ. 10 ರಷ್ಟು ಸುಂಕ ಅನ್ವಯವಾಗಲಿದೆ. ಉಳಿದ 43 ದೇಶಗಳು ಶೇ. 12.5 ರಷ್ಟು ಸುಂಕ ಪಾವತಿಸಬೇಕಾಗುತ್ತದೆ.
ಈ ಹಿಂದೆ ಜಾರಿಯಲ್ಲಿದ್ದ ಶೇ.10 ರಷ್ಟು ತಾತ್ಕಾಲಿಕ ಆಮದು ಸುಂಕದ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಕ್ರಮ ಜಾರಿಗೆ ಬರುತ್ತಿದೆ. ಅಮೆರಿಕದ ವ್ಯಾಪಾರ ನೀತಿ ಮತ್ತು ಬಲವಂತದ ದುಡಿಮೆ ವಿರುದ್ಧದ ಕ್ರಮಗಳು ಮುಂದಿನ ದಿನಗಳಲ್ಲಿ ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.