BELAGAVI NEWS :
ತಮಿಳುನಾಡಿನಲ್ಲಿ ಅಮೋನಿಯ ಅನಿಲ ದುರಂತ : ಮೃತರ ಸಂಖ್ಯೆ ಏಳಕ್ಕೆ ಏರಿಕೆ, 74 ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ
ತಮಿಳುನಾಡಿನ ತಿಳುವಳ್ಳೂರಿನಲ್ಲಿರುವ ಸೀಗಡಿ ಸಂಸ್ಕರಣಾ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಅಮೋನಿಯ ಅನಿಲ ಸೋರಿಕೆಯಾಗಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದೆ. ಮೃತರೆಲ್ಲರೂ ಮಹಿಳೆಯರಾಗಿದ್ದಾರೆ. ಘಟನೆಯಲ್ಲಿ 74 ಹೆಚ್ಚು ಕಾರ್ಮಿಕರು ಅಸ್ವಸ್ಥರಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ 15 ಕಾರ್ಮಿಕರು, ಚಿಕಿತ್ಸೆ ಪಡೆಯುತ್ತಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ 27 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 27 ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗಿದೆ. ಕಾರ್ಮಿಕರ ಆರೋಗ್ಯದ ಸ್ಥಿತಿಯನ್ನು ವೈದ್ಯರು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿದು ತಕ್ಷಣ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ನೀಡುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ದುರಂತದ ಕಾರಣಗಳ ಕುರಿತು ತನಿಖೆ ಆರಂಭವಾಗಿದ್ದು, ಕಾರ್ಖಾನೆಯ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.
ಏನಾಯ್ತು?
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಪೆರಿಯಪಾಳಯಂ ಸಮೀಪದ ಕನ್ನಿಗೈಪೈರ್ ಗ್ರಾಮದಲ್ಲಿರುವ ಖಾಸಗಿ ಸೀಗಡಿ ರಫ್ತು ಮತ್ತು ಸಂಸ್ಕಾರಣಾ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ವೇಳೆಗೆ ಅಮೋನಿಯ ಅನಿಲ ಸೋರಿಕೆಯಾಗಿದೆ. ಅನಿಲ ಸೋರಿಗೆಯಾದ ಕೆಲವೇ ನಿಮಿಷಗಳಲ್ಲಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಉಸಿರಾಟದ ತೊಂದರೆ ಅನುಭವಿಸಿ ಒಬ್ಬರ ಹಿಂದೆ ಒಬ್ಬರು ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ಸಾರ್ವಜನಿಕರ ನೆರವಿನಿಂದ ಅಸ್ವಸ್ಥಗೊಂಡ ಸಮೀಪದ ಎರಡು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 7 ಮಹಿಳಾ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟಣೆಯಲ್ಲಿ 74 ಹೆಚ್ಚು ಕಾರ್ಮಿಕರು ಅಸ್ವಸ್ಥಗೊಂಡಿದ್ದು, ಹಲವರು ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮೋನಿಯ ಅನಿಲ ಸೋರಿಕೆಗೆ ಕಾರಣವೇನು ಎಂಬುದರ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಕಾರ್ಖಾನೆಯ ಸುರಕ್ಷತಾ ವ್ಯವಸ್ಥೆಗಳ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ಈ ದುರಂತ ರಾಜ್ಯಾದ್ಯಂತ ಆತಂಕ ಮೂಡಿಸಿದ್ದು, ಮೃತರ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಿಸಿದೆ.
ತುರ್ತು ಪರಿಸ್ಥಿತಿಯ ಬಗ್ಗೆ ತಿಳಿದ ನಂತರ ಅರಕ್ಕೋಣಂನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ(ಎನ್‌ಡಿಆರ್‌ಎಫ್) ನಾಲ್ಕನೇ ಬೆಟಾಲಿಯನ್ನಿನ ಪ್ರಧಾನ ಕಚೇರಿ ತಕ್ಷಣವೇ ತನ್ನ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ.
ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ?
ತಿರುವಳ್ಳೂರಿನ ಸೀಗಡಿ ಸಂಸ್ಕರಣಾ ಕಾರ್ಖಾನೆಯಲ್ಲಿ ಅಮೋನಿಯ ಅನಿಲ ಸೋರಿಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮನವಿ ಮೇರೆಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ ವಿಶೇಷ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ. ಎನ್‌ಡಿಆರ್‌ಎಫ್‌ನ ನಾಲ್ಕನೇ ಬೆಟಾಲಿಯನ್ ನ ಹಿರಿಯ ಕಮಾಂಡೆಂಟ್ ಅಖಿಲೇಶ್ ಕುಮಾರ್ ಅವರ ನಿರ್ದೇಶನದಂತೆ ವಿಶೇಷ ರಾಸಾಯನಿಕ, ಜೈವಿಕ ವಿಕಿರಣಶೀಲ ಮತ್ತು ಪರಮಾಣು ಪ್ರತಿಕ್ರಿಯೆ ತಂಡ ತುರ್ತು ಕಾರ್ಯಾಚರಣೆಗೆ ಮುಂದಾಗಿದೆ.
ಚೆನ್ನೈನಿಂದ 30 ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ಒಳಗೊಂಡ ರಕ್ಷಣಾ ತಂಡವು ವೈಯಕ್ತಿಕ ರಕ್ಷಣಾ ಸಾಧನಗಳು, ಅನಿಲ ಪತ್ತೆ ಸಾಧನಗಳು ಹಾಗೂ ವಿಶೇಷ ಸಿಬಿಆರ್‌ಎನ್ ಸುರಕ್ಷತಾ ಉಪಕರಣಗಳೊಂದಿಗೆ ಘಟನೆ ಸ್ಥಳಕ್ಕೆ ಆಗಮಿಸಿದೆ. ಅನಿಲ ಸೋರಿಕೆಯ ತೀವ್ರತೆಯನ್ನು ಅಳೆಯುವುದು, ಪರಿಣಾಮಿತ ಪ್ರದೇಶವನ್ನು ಸುರಕ್ಷಿತಗೊಳಿಸುವುದು ಹಾಗೂ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ತಂಡದ ಪ್ರಮುಖ ಉದ್ದೇಶವಾಗಿದೆ.
ಪ್ರಸ್ತುತ ಎನ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ, ಅಪಾಯಕಾರಿ ವಲಯವನ್ನು ಪ್ರತ್ಯೇಕಿಸುವುದು, ಸುತ್ತಮುತ್ತಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವುದು, ಅನಿಲ ಸೋರಿಕೆಯ ಪರಿಣಾಮಗಳನ್ನು ಪರಿಶೀಲಿಸುವುದು ಮತ್ತು ಹೆಚ್ಚಿನ ಅಪಾಯವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊತ್ತಿಕೊಂಡಿದ್ದಾರೆ. ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಕ್ಕೆ ತರಲು ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ .
Also Read:
ಕರ್ಬೂಜ ತಿನ್ನಿ ಬೀಜ ಎಸೆಯುವ ಮೊದಲ ಓದಿ! ಇವುಗಳ ಶಕ್ತಿ ಗೊತ್ತಾದ್ರೆ ಅಚ್ಚರಿ