BELAGAVI NEWS :
ಬೆಳಗಾವಿ : ಬೆಳಗಾವಿ ಮಹಾನಗರ ಸೇರಿದಂತೆ ಜಿಲ್ಲೆಯ ವಿವಿಧಡೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಮಳೆಯ ಪರಿಣಾಮ ಜಿಲ್ಲೆಯ ರೈತಾಪಿ ವರ್ಗದಲ್ಲಿ ಸಂತಸ ಮೂಡಿದು, ಬಹುಕಾಲದಿಂದ ಬೆಳೆಗಾಗಿ ಕಾಯುತ್ತಿದ್ದ ಕೃಷಿಕರಿಗೆ ಈಗ ನಿಟ್ಟುಸಿರು ತಂದಿದೆ. ಜೊತೆಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಪ್ರಮುಖ ನದಿಗಳು ಹಾಗೂ ಜಲಾಶಯಗಳಿಗೆ ನೀರಿನ ಹರಿ ಒಳಹರಿವು ಆರಂಭವಾಗಿದೆ.
ಜೂನ್ ತಿಂಗಳಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ಜಿಲ್ಲೆಯ ಕೃಷ್ಣ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ದೂಧಗಂಗಾ ಹಾಗೂ ವೇದಗಂಗಾ ನದಿಗಳು ಬಹುತೇಕ ನೀರಿಲ್ಲದೆ ಖಾಲಿಯಾಗಿದ್ದವು. ಇದೇ ರೀತಿಯಾಗಿ ಮಲಪ್ರಭಾ ಜಲಾಶಯ, ಹಿಡಕಲ್ ಜಲಾಶಯ ಮತ್ತು ರಾಕಸಕೊಪ್ಪ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದುಕೊಂಡಿತು.
ನೀರಿನ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಜನರು ತೀವ್ರ ಹಾಹಾಕಾರ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮಳೆಯ ಆಗಮನದಿಂದ ನದಿಗಳಲ್ಲಿ ಮತ್ತೆ ನೀರು ಹರಿಯಲು ಆರಂಭವಾಗಿದ್ದು, ಜಲಾಶಯಗಳ ಮಟ್ಟದಲ್ಲಿ ಸುಧಾರಣೆ ಕಂಡು ಬರುವ ನಿರೀಕ್ಷೆ ವ್ಯಕ್ತವಾಗಿದೆ. ರೈತರು ಮತ್ತು ಸ್ಥಳೀಯ ಜನತೆ ಈ ಮಳೆಯನ್ನು ಆಶಾದಾಯಕ ಬೆಳವಣಿಗೆಯಾಗಿ ಪರಿಗಣಿಸುತ್ತಿದ್ದಾರೆ.
ಇನ್ನು ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಿತ್ತನೆ ಕಾರ್ಯವನ್ನು ಕೈಗೊಂಡಿದ್ದರು, ಆದರೆ ಆರಂಭದಲ್ಲಿ ಸರಿಯಾದ ಬೆಳೆ ಇಲ್ಲದ ಕಾರಣ ಬೆಳೆಗಳು ಒಣಗುವ ಭೀತಿಗೆ ಒಳಗಾಗಿದ್ದವು. ಇದೀಗ ಕಳೆದ ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಒಣಗುವ ಸ್ಥಿತಿಯಲ್ಲಿದ್ದ ಬೆಳೆಗಳಿಗೆ ಹೊಸ ಜೀವಕಳೆ ಬಂದಿದೆ. ಈ ಬೆಳವಣಿಗೆಯಿಂದ ರೈತಾಪಿ ವರ್ಗದಲ್ಲಿ ಸಂತಸ ಮತ್ತು ನಿಟ್ಟಿಸಿರು ಮೂಡಿದೆ.
ಖಾನಾಪುರ ಅರಣ್ಯ ಪ್ರದೇಶ ಹಾಗೂ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಭಾರಿ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ನದಿಗಳಾದ ಕೃಷ್ಣಾ,ಮಲಪ್ರಭಾ, ಹಿರಣ್ಯಕೇಶಿ, ಮತ್ತು ಮಾರ್ಕಂಡೇಯ ಸೇರಿದಂತೆ ಹಲವಾರು ನದಿಗಳಲ್ಲಿ ನೀರಿನ ಅರಿವು ಹೆಚ್ಚಾಗಿದೆ . ಇದರ ಪರಿಣಾಮವಾಗಿ ಜಲಮೂಲಗಳು ಮತ್ತೆ ತುಂಬಲು ಆರಂಭಿಸಿವೆ.
ಪ್ರಸ್ತುತ ಕೃಷ್ಣಾ ನದಿಗೆ ಸುಮಾರು 15 ಸಾವಿರ ಕ್ಯೂಸಕ್ ನೀರು ಹರಿದು ಬರುತ್ತಿದ್ದು, ಹಿಡಕಲ್ ಜಲಾಶಯಕ್ಕೆ ಸುಮಾರು 1600 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಇದೇ ರೀತಿಯಾಗಿ ಮಹಾರಾಷ್ಟ್ರ
ಭಾಗದಲ್ಲಿ ಮಳೆ ಮುಂದುವರಿದರೆ, ಬೆಳಗಾವಿ ಜಿಲ್ಲೆಯ ನದಿ, ಹಳ್ಳ - ಕೊಳ್ಳಗಳು ಇನ್ನಷ್ಟು ತುಂಬುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಈ ಮಳೆಯು ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣ ಮಾಡಿದ್ದು, ರೈತರು ಉತ್ತಮ ಬೆಳೆ ನಿರೀಕ್ಷೆಯಲ್ಲಿ ಇದ್ದಾರೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಬಾರಿ ಮಳೆಯ ಪರಿಣಾಮವಾಗಿ ವಿಶ್ವಪ್ರಸಿದ್ಧ ಗೋಕಾಕ್ ಫಾಲ್ಸ್ ಗೆ ಮತ್ತೆ ಜೀವಕಳೆ ಬಂದಿದೆ. ಹಾಲ್ನೊರೆಯಂತೆ ಜಲಪಾತದಿಂದ ನೀರು ಧುಮುಕುತ್ತಿದ್ದು, ಈ ಅದ್ಭುತ ಜಲ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕೇವಲ ಒಂದು ವಾರದ ಹಿಂದೆ ನೀರಿನ ಹರಿವು ಕಡಿಮೆಯಾಗಿದ್ದ ಫಾಲ್ಸ್, ಇದೀಗ 3-4 ದಿನಗಳ ನಿರಂತರ ಮಳೆಯಿಂದ ಸಂಪೂರ್ಣವಾಗಿ ತುಂಬಿ ಹರಿಯುತ್ತಿರುವುದು ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ.
ಈ ನಡುವೆ ನಿರಂತರ ಮಳೆಯಿಂದ ಬೆಳಗಾವಿಯ ವೀರಭದ್ರ ನಗರದಲ್ಲಿ ಅವಾಂತರ ಉಂಟಾಗಿದೆ.ನಾಲ್ಕು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮಳೆಯಲ್ಲಿದ್ದ ಸಾಮಾಗ್ರಿಗಳು ಹಾಗೂ ದವಸ-ಧಾನ್ಯಗಳು ಹಾನಿಗೊಳಗಾಗಿವೆ. ಚರಂಡಿ ವ್ಯವಸ್ಥೆ ಬ್ಲಾಕ್ ಆಗಿರುವುದೇ ಈ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿಗಳು ತಕ್ಷಣವೇ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ. ಒಂದೆಡೆ ಮಳೆ ಜಲವೈಭವ ಸೃಷ್ಟಿಸಿದರೆ, ಮತ್ತೊಂದೆಡೆ ನಗರ ಪ್ರದೇಶಗಳಲ್ಲಿ ಮೂಲ ಸೌಕರ್ಯ ಸೌಲಭ್ಯ ಎದುರಾಗಿದೆ.