belagavi News:
ನವದೆಹಲಿ: ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರೆಯುವ ಭಾರತೀಯ ನಾಗರಿಕರಿಗೆ ವಿದೇಶಾಂಗ ಸಚಿವಾಲಯ (MEA) ಮಹತ್ವದ ಎಚ್ಚರಿಕೆ ನೀಡಿದೆ. ಯಾತ್ರೆಗೆ ಹೊರಡುವ ಮೊದಲು ತಮ್ಮ ಪ್ರವಾಸ ನಿರ್ವಾಹಕರು ಸರ್ಕಾರದಲ್ಲಿ ಸರಿಯಾಗಿ ನೋಂದಾಯಿಸಲ್ಪಟ್ಟಿರುವ ಮತ್ತು ಅಧಿಕೃತ ಅನುಮತಿ ಪಡೆದಿರುವ ಸಂಸ್ಥೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಸಚಿವಾಲಯ ಸಲಹೆ ನೀಡಿದೆ.
ಸಚಿವಾಲಯದ ಪ್ರಕಾರ, ಅಗತ್ಯವಿರುವ ಚೀನಾ ಪ್ರವೇಶ ಪರವಾನಗಿ ಹಾಗೂ ವೀಸಾ ಇಲ್ಲದೆ ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಯಾತ್ರೆ ಆರಂಭಿಸಿದ ಹಲವು ಭಾರತೀಯರು ನೇಪಾಳದಲ್ಲಿ ಸಿಲುಕಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಸಹಾಯ ಕೋರಿ ವಿದೇಶಾಂಗ ಸಚಿವಾಲಯಕ್ಕೆ ಅನೇಕ ಮನವಿಗಳು ಬಂದಿರುವುದಾಗಿ ತಿಳಿಸಿದೆ.
ಯಾತ್ರಿಕರು ಸಂಪೂರ್ಣ ಪ್ರಯಾಣಕ್ಕೆ ಅಗತ್ಯವಾದ ಎಲ್ಲಾ ದಾಖಲೆಗಳು ಅನುಮತಿಪತ್ರಗಳು ಹಾಗೂ ವೀಸಾಗಳನ್ನು ಪಡೆದ ನಂತರವೇ ಭಾರತದಿಂದ ಪ್ರಯಾಣ ಆರಂಭಿಸಬೇಕು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ದಾಖಲೆಗಳು ದೃಡೀಕರಣವಾಗುವ ಮುನ್ನ ಅಥವಾ ನಂತರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಪ್ರಯಾಣ ಆರಂಭಿಸುವುದು ಅನಗತ್ಯ ತೊಂದರೆ ಹಾಗೂ ಸಿಲುಕುವ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.
ಹೀಗಾಗಿ, ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವರು ಪ್ರವಾಸ ಪ್ಯಾಕೇಜ್ ಆಯ್ಕೆ ಮಾಡುವ ಮುನ್ನ ಸಂಸ್ಥೆಯ ವಿಶ್ವಾಸಾರ್ಹತೆ, ನೋಂದಣಿ ಮತ್ತು ಅಧಿಕೃತ ಅನುಮತಿಗಳನ್ನು ಪರಿಶೀಲಿಸುವ ಮೂಲಕ ಸುರಕ್ಷಿತ ಹಾಗೂ ತೊಂದರೆ ರಹಿತ ಯಾತ್ರೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ವಿದೇಶಾಂಗ ಸಚಿವಾಲಯ ಮನವಿ ಮಾಡಿದೆ.
ಕೈಲಾಸ ಮಾನಸ ಸರೋವರ ಯಾತ್ರೆ ಮತ್ತು ಆರಂಭ - 5 ವರ್ಷಗಳ ಬಳಿಕ ಭಕ್ತರಿಗೆ ಸುವರ್ಣಾವಕಾಶ
ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಈ ವರ್ಷದ ಜೂನ್ ನಿಂದ ಆಗಸ್ಟ್ ವರೆಗೆ ವಾರ್ಷಿಕ ಕೈಲಾಸ ಮಾನಸ ಸರೋವರ ಯಾತ್ರೆ ನಡೆಸುವುದಾಗಿ ಘೋಷಿಸಿದೆ.
ಈ ಬಾರಿ ಯಾತ್ರೆಯನ್ನು ಉತ್ತರಾಖಂಡದ ಲಿಪುಲೇಖ್ ಪಾಸ್ ಹಾಗೂ ಸಿಕ್ಕಿಂನ ನಾಥು ಲಾ ಎಂಬ ಎರಡು ಮಾರ್ಗಗಳ ಮೂಲಕ ಆಯೋಜಿಸಲಾಗಿದೆ.
ಕೋವಿಡ್ ಮಹಾಮಾರಿ ಮತ್ತು ನಂತರ ಪೂರ್ವ ಲಡಾಖ್ ನ LAC ಪ್ರದೇಶದಲ್ಲಿ ಭಾರತ - ಚೀನಾ ನಡುವಿನ ಉದ್ವಿಗ್ನತೆಯಿಂದ 2020ರಲ್ಲಿ ಸ್ಥಗಿತಗೊಂಡಿದ್ದ ಯಾತ್ರೆ, ಸುಮಾರು 5 ವರ್ಷಗಳ ಬಳಿಕ ಮತ್ತೆ ಆರಂಭವಾಗಿದ್ದು, ಭಕ್ತರಲ್ಲಿ ಸಂತಸ ಮೂಡಿಸಿದೆ.
ಭಾರತ- ಚೀನಾ ಸಂಬಂಧಗಳನ್ನು ಸಾಮಾನ್ಯಗೊಳಿಸುವ ಪ್ರಯತ್ನಗಳ ನಡುವೆಯೇ ಯಾತ್ರೆ ಪುನರಾರಂಭವಾಗಿರುವುದು ವಿಶೇಷ ಮಹತ್ವ ಪಡೆದಿದೆ.
Also Read:
ವಾಯುಯಾನ ಕ್ಷೇತ್ರದಲ್ಲಿ ದೇಶದ ಸಾಧನೆಗೆ ಮೆಚ್ಚುಗೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ