belagavi news:
ದಲಿತರ ನಿಂದನೆ ಆರೋಪ ಪ್ರಕರಣದಲ್ಲಿ ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ಕಾನೂನು ಕ್ರಮಗಳು ನಡೆಯಲಿವೆ ಎಂದು ತಿಳಿದುಬಂದಿದೆ.
ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶುಭಾಶಯ ಕೋರಲು ಬಂದಿದ್ದ ಪರಿಶಿಷ್ಟ ಜಾತಿಯ ಪೌರಕಾರ್ಮಿಕರನ್ನು ಜಾತಿನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ವಿಚಾರಣೆಗೆ ಗೈರಾಗಿದ್ದ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಾರೆಂಟ್ ಜಾರಿ ಮಾಡಿದೆ.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಶಾಸಕರ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದಾರೆ.
ಪ್ರಕರಣ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಬಿ.ಪಿ. ಹರೀಶ್ ಅವರನ್ನು ಅಭಿನಂದಿಸಲು 2023ರ ಮೇ 16 ರಂದು ಹರಿಹರ ನಗರಸಭೆಯ ಪೌರಕಾರ್ಮಿಕರು ಹಾಗೂ ಮಾದಿಗ ಸಮಾಜದ ಮುಖಂಡರು ಆಗಮಿಸಿದ್ದರು. ಈ ವೇಳೆ ಒಳ ಮೀಸಲಾತಿ ನೀಡಿದರು ನಿಮ್ಮ ಸಮಾಜದವರು ನಮ್ಮ ಪಕ್ಷವನ್ನು ಬೆಂಬಲಿಸಿಲ್ಲ, ನಿಮಗೆ ಕೃತಜ್ಞತೆ ಇಲ್ಲ ಎಂದು ಜಾತಿ ಹೆಸರನ್ನು ಉಲ್ಲೇಖಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಯಿತ್ತು .
ಅದೇ ದಿನ ಸಮಾಜದ ಮುಖಂಡರೊಂದಿಗೆ ರಾಜಿ ಮಾತುಕತೆ ನಡೆದು ಶಾಸಕರು ಕ್ಷಮೆಯಾಚಿಸಿದ್ಧರಿಂದ ವಿವಾದ ತಣ್ಣಗಾಗಿತ್ತು. ಆದರೆ ಮರುದಿನ ಅಭಿನಂದನಾ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕ ಹರೀಶ್ ಅವರು, "ನಾನು ಆ ರೀತಿ ಹಿಡಿದು ನಿಜ ಮತ್ತು ಅದು ಸರಿಯಾಗಿಯೇ ಇದೆ" ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಹನುಮಂತಪ್ಪ ಅವರು ಹರಿಹರ ನಗರ ತಾನೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರಿನ ಸಂಬಂಧ ಎಫ್ ಐ ಆರ್ ದಾಖಲಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುತ್ತಿದೆ.
Also Read: