BELAGAVI NEWS :
ಬೆಂಗಳೂರು: ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಚಿಕ್ಕಜಾಲ ಪೊಲೀಸ್ ಠಾಣೆಯ ರೌಡಿಶೀಟರ್ ಎಂದು ಗುರುತಿಸಲ್ಪಟ್ಟಿರುವ ದಾಸ್ ಅಲಿಯಾಸ್ "ಕಿಂಗ್ ಮೇಕರ್ ದಾಸ್" ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಕಾರಣವಾಗಿದೆ.
ಯಲಹಂಕ ಕ್ಷೇತ್ರದ ಆಲೂರು ಗ್ರಾಮದಲ್ಲಿ ಈ ಹುಟ್ಟುಹಬ್ಬದ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಶಾಸಕ ವಿಶ್ವನಾಥ್ ಭಾಗವಹಿಸಿ ಕೇಕ್ ತಿನ್ನಿಸಿರುವ ದೃಶ್ಯಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.
ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕಾರ್ಯಕ್ರಮದ ಹಿನ್ನೆಲೆ ಹಾಗೂ ಶಾಸಕರ ಹಾಜರಾತಿ ಕುರಿತು ಸಂಬಂಧಪಟ್ಟವರಿಂದ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಹೊರಬರಬೇಕಿದೆ.
ಪೊಲೀಸ್ ಮೂಲಗಳ ಪ್ರಕಾರ, ದಾಸ್ ಅಲಿಯಾಸ್, ' ಕಿಂಗ್ ಮೇಕರ್ ದಾಸ್' ಯಲಹಂಕ, ನೆಲಮಂಗಲ ಹಾಗೂ ದಾಸರಹಳ್ಳಿ ಭಾಗಗಳಲ್ಲಿ ಭೂ ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಭೂ ವ್ಯವಹಾರಗಳಿಗೆ ಸಂಬಂಧಿಸಿದ ಆರೋಪಿಗಳು ಈತನ ವಿರುದ್ಧ ಕೇಳಿಬಂದಿವೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ನಡೆದಿದ್ದ ದಾಸನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲೂ ಪೊಲೀಸ್ ಅಧಿಕಾರಿಯೊಬ್ಬರು ಭಾಗವಹಿಸಿದ್ದ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ್ ಅವರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು.
ಈ ಘಟನೆ ಬಳಿಕ ಇಲಾಖೆ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಇನ್ಸ್ಪೆಕ್ಟರ್ ನಾಗರಾಜ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು ಎಂದು ತಿಳಿದುಬಂದಿದೆ.