belagavi news :
ಮಂಗಳೂರು: ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲೆ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ತುರ್ತು ಆದೇಶ ಹೊರಡಿಸಿದ್ದಾರೆ.
ಹವಾಮಾನ ಇಲಾಖೆ ಜಿಲ್ಲೆಗೆ' ಆರೆಂಜ್ ಅಲರ್ಟ್' ಘೋಷಣೆ ಮಾಡುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲೆಯ ವ್ಯಾಪ್ತಿಯು ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಮತ್ತು ಪದವಿ ಕಾಲೇಜುಗಳಿಂದ ಇಂದು ಯಾವುದೇ ತರಗತಿಗಳನ್ನು ನಡೆಸಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಇದೇ ವೇಳೆ, ಸಾರ್ವಜನಿಕರು ಅನಗತ್ಯವಾಗಿ ಹೊರ ಸಂಚಾರ ಮಾಡದಂತೆ, ನದಿ, ಹೊಳೆ ಹಾಗೂ ತಗ್ಗು ಪ್ರದೇಶಗಳ ಬಳಿ ಹೋಗುವುದನ್ನು ತಪ್ಪಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಹವಾಮಾನ ಇಲಾಖೆಯ ಮುಂದಿನ ಎಚ್ಚರಿಕೆಯನ್ನು ಗಮನಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಯಾರಿಗೆಲ್ಲಾ ರಜೆ ?
ಜಿಲ್ಲಾಧಿಕಾರಿಗಳ ಆದೇಶದಂತೆ ಇಂದು ಜಿಲ್ಲೆಯಕೆಳಕಂಡ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
*ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು
*ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು
*ಎಲ್ಲಾ ವಸತಿ ಶಾಲೆಗಳು
*ಎಲ್ಲಾ ಪದವಿ ಪೂರ್ವ ಕಾಲೇಜುಗಳು ಹಾಗೂ ಪದವಿಪೂರ್ವ ವಸತಿ ಕಾಲೇಜುಗಳು (12ನೇ ತರಗತಿಯವರೆಗೆ)
ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ:
ಜಿಲ್ಲಾಧಿಕಾರಿಗಳ ರಜೆ ಆದೇಶವನ್ನು ಯಾವುದೇ ಶಿಕ್ಷಣ ಸಂಸ್ಥೆ ಉಲ್ಲಂಘಿಸಿ ತರಗತಿಯನ್ನು ನಡೆಸಿದರೆ, ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51 (ಬಿ) ಅನ್ವಯ ಸಂಬಂಧಪಟ್ಟ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದ್ದು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕರು ಜಿಲ್ಲಾಡಳಿತದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.
ಸಾರ್ವಜನಿಕರು ಮತ್ತು ಪಾಲಕರು ಪಾಲಿಸಬೇಕಾದ ಜಿಲ್ಲಾಡಳಿತದ ತುರ್ತು ಸೂಚನೆಗಳು
ನಿರಂತರ ಮಳೆ ಹಾಗೂ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮವನ್ನು ಪಾಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಮಕ್ಕಳ ಸುರಕ್ಷತೆಗೆ ಆದ್ಯತೆ:
ಮಕ್ಕಳು ನೀರು ತುಂಬಿರುವ ತಗ್ಗು ಪ್ರದೇಶಗಳು, ಕೆರೆ, ನದಿ, ಹೊಳೆ ಹಾಗೂ ಸಮುದ್ರ ತೀರದ ಬಳಿ ಹೋಗದಂತೆ ಪಾಲಕರು ಕಟ್ಟುನಿಟ್ಟಿನ ನಿಗಾ ವಹಿಸಬೇಕು .
ಮೀನುಗಾರರಿಗೆ ಸಮುದ್ರ ಪ್ರವೇಶ ನಿಷೇಧ:
ಸಮುದ್ರದಲ್ಲಿ ಅಲೆಗಳ ಅಬ್ಬರ ಮತ್ತು ಬಿರುಗಾಳಿ ಸಾಧ್ಯತೆ ಇರುವುದರಿಂದ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಡಳಿತ ಸೂಚಿಸಿದೆ.
ಪ್ರವಾಸಿಗರಿಗೆ ಎಚ್ಚರಿಕೆ:
ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ ತೀರ, ಜಲಪಾತ, ಕೆರೆ ಹಾಗೂ ಸಮುದ್ರ ತೀರ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ಅಧಿಕಾರಿಗಳು ಸನ್ನದ:
ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಉಳಿದು ವಿಪತ್ತು ನಿರ್ವಹಣಾ ಕಾರ್ಯಕ್ಕೆ ಸನ್ನದ್ಧರಾಗಿರಬೇಕು ಎಂದು ಸೂಚಿಸಲಾಗಿದೆ. ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಸ್ಪಂದಿಸಲು ಎಲ್ಲಾ ತಾಲೂಕುಗಳಲ್ಲಿ ಕಾಳಜಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.
ಹವಾಮಾನ ಇಲಾಖೆ ಎಚ್ಚರಿಕೆ:
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಜುಲೈ ಒಂದರಿಂದ ಮೂರರ ಬೆಳಗ್ಗೆ ವರೆಗೆ ಜಿಲ್ಲೆಯಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ. ಕೆಲವೆಡೆಗೆ 204.5 ಮಿ.ಮೀ ಗಿಂತಲೂ ಅಧಿಕ ಮಳೆಯಾಗುವ ಸಾಧ್ಯತೆ ಇರುವುದಾಗಿ ತಿಳಿಸಲಾಗಿದೆ.
ಅದೇ ವೇಳೆಯಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದು, ಟೀ ಡ್ರೆಸ್ ಸಿಡಿಲು ಸಹ ಸಂಭವಿಸಬಹುದಾದ ಕಾರಣ ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಸಂಚರಿಸದೆ, ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.