blagavi news :
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 'ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ' ಎಂಬ ಗೊತ್ತುವಳಿಯನ್ನು ಅಂಗೀಕರಿಸಲು ಯಾವುದೇ ಕಾನೂನು ತೊಡಕು ಇಲ್ಲ ಎಂದು ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಮೋಹನ್ ಕಾತರಕಿ ಅಭಿಪ್ರಾಯ ವ್ಯಕ್ತಪಡಿಸಿದರು.ಇಂತಹ ನಿರ್ಣಯವನ್ನು ಅಂಗೀಕರಿಸಿದರೂ ಅದು ಸಬ್ ಜ್ಯೂಡಿಸ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಯ ಕ್ರಿಯಾ ಸಮಿತಿ ಹಾಗೂ ಇತರ ಕನ್ನಡ ಪರ ಸಂಘಟನೆಗಳು ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಬೆಳಗಾವಿಯ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹೇಳಿದರು.
ಭಾಷಾವಾರು ಪ್ರಾಂತಗಳ ರಚನೆಯ ಸಂದರ್ಭದಲ್ಲಿ ಭಾರತೀಯ ಸಂವಿಧಾನದ ಆರ್ಥಿಕ 3 ಮತ್ತು 4 ಅಡಿಯಲ್ಲಿ ಸಂಸತ್ತು ಪಾಸ್ ಮಾಡಿ ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರಿಸಿದೆ. ಆದ್ದರಿಂದ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಭಾಗವಾಗಿದ್ದು, ಈ ಕುರಿತು ಮಹಾನಗರ ಪಾಲಿಕೆ ನಿರ್ಣಯ ಕೈಗೊಳ್ಳುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಕಾತರಕಿ ಅಭಿಪ್ರಾಯ ವ್ಯಕ್ತಪಡಿಸಿದರು.
60 ವರ್ಷ ಆದಮೇಲೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವ ಪ್ರಶ್ನೆಗೆ ಯಾವುದೇ ಅರ್ಥ ಇಲ್ಲ. ಇದರಲ್ಲಿ ಯಾವುದೇ ರೀತಿ ಗಾಬರಿ ಪಡುವ ಅವಶ್ಯಕತೆ ಇಲ್ಲ. ಆದರೆ, ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ, ಬಹಳ ಎಚ್ಚರಿಕೆಯಿಂದ ನಡೆಸಬೇಕು. ಕರ್ನಾಟಕ ನ್ಯಾಯವಾದಿಗಳ ತಂಡದಲ್ಲಿ ನಾನಿಲ್ಲ. ಆದರೆ, ಹೊರಗಿದ್ದುಕೊಂಡೆ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಈ ವಿಚಾರದಲ್ಲಿ ಯಾರು ಏನನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಮೋಹನ್ ಕಾತರಕಿ ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡುವಾಗ ಯಾವ ದೃಷ್ಟಿ ಕೋನವನ್ನು ಪರಿಗಣಿಸುತ್ತದೆ ಎಂಬುವುದು ಬೇರೆ ವಿಷಯವಾಗಿದ್ದು, ಅದು ಸಬ್ ಜ್ಯೂಡಿಸ್ ವ್ಯಾಪ್ತಿಗೆ ಬರುತ್ತದೆ. ಆದರೆ,'ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ'ಎಂದು ಕರೆಯಲು ಯಾವುದೇ ಆತಂಕ ಅಥವಾ ಕಾನೂನು ಅಡಿ ಇಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾತರಕಿ, ರಾಜ್ಯದ ಜ್ವಲಂತ ಸಮಸ್ಯೆಗಳಾದ ಮಹಾದಾಯಿ, ಕೃಷ್ಣ ಹಾಗೂ ಕಾವೇರಿ ನದಿಗಳ ನೀರಾವರಿ ಯೋಜನೆಗಳು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಅಂತರ್ ರಾಜ್ಯ ಜಲ ವಿವಾದಗಳನ್ನು ಸಮರ್ಥವಾಗಿ ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಅಗತ್ಯ ಮಟ್ಟದ ವಿಶೇಷ ಮುತುವರ್ಜಿಯನ್ನು ತೋರದಿರುವುದು ಪ್ರಮುಖ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ಇಂತಹ ವಿಷಯಗಳಲ್ಲಿ ಸರ್ಕಾರ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಕಾತರಕಿ ಒತ್ತಾಯಿಸಿದರು.
ಮಹದಾಯಿ ನದಿ ನೀರಿನ ಹಂಚಿಕೆ ವಿಚಾರವೂ ಪರಿಸರ ಸಂಬಂಧಿತ ಕೆಲವು ಸಣ್ಣಪುಟ್ಟ ವಿವಾದಗಳ ಹಿನ್ನೆಲೆಯಲ್ಲಿ ಇನ್ನು ನೆನೆಗುದಿಗೆ ಬಿದ್ದಿರುವುದು ವಿಷಾದನಿಯ ಸಂಗತಿಯಾಗಿದೆ ಎಂದು ಮೋಹನ್ ಕಾತರಕಿ ಅಭಿಪ್ರಾಯ ಪಟ್ಟರು. ಈ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಿ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಮಹದಾಯಿ ಯೋಜನೆಯು ಉತ್ತರ ಕರ್ನಾಟಕ ಭಾಗದ ರೈತರು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರ ಬದುಕಿಗೆ ಅತ್ಯಂತ ಮಹತ್ವದ್ದಾಗಿದ್ದು, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ವಿಳಂಬವಾಗಬಾರದು ಎಂದು ಅವರು ಹೇಳಿದರು. ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಮತ್ತು ಅನುಷ್ಠಾನಕ್ಕೆ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಹಣಕಾಸು ವಿನಿಯೋಗ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಸ್ಪಷ್ಟ ಕಾರ್ಯ ಯೋಜನೆ ರೂಪಿಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ರಾಜ್ಯದ ಜಲ ಸಂಪನ್ಮೂಲ ಸಮರ್ಪಕ ಬಳಕೆ ಹಾಗೂ ರೈತರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಸರಕಾರ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಾಮಾಜಿಕ, ರೈತ ಹಾಗೂ ಪ್ರಾದೇಶಿಕ ಸಂಘಟನೆಗಳು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿ ಜನಪರ ಯೋಜನೆಗಳನ್ನು ಶೀಘ್ರ ಜಾರಿಗೆ ತರಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ಚಂದರಗಿ, ವಾಜೀದ್ ಹಿರೇಕೋಡಿ, ಬಲರಾಮ ಮಾಸೇನಟ್ಟಿ, ಶ್ರೀನಿವಾಸ್ ತಾಳೂಕರ, ಬಾಳಪ್ಪ ಗುಡಗೇನಟ್ಟಿ, ಶಂಕರ್ ಬಾಗೇವಾಡಿ, ಮಲ್ಲಪ್ಪ ಅಕ್ಷರದ, ಶಿವಪ್ಪ ಶಮರಂತ, ಸಾಗರ್ ಬೋರಗಲ್ಲ, ಎಂ ಜಿ ಮಕಾನದಾರ. ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಭೆಯಲ್ಲಿ ಮಹಾದಾಯಿ ಯೋಜನೆ, ನೀರಾವರಿ ಅಭಿವೃದ್ಧಿ ಹಾಗೂ ಉತ್ತರ ಕರ್ನಾಟಕದ ನೀರಿನ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಸಂಘಟನೆಗಳ ಪ್ರತಿನಿಧಿಗಳು ಸರ್ಕಾರವು ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಿ, ಬಾಕಿ ಉಳಿದಿರುವ ನೀರಾವರಿ ಯೋಜನೆಗಳಿಗೆ ವೇಗ ನೀಡಬೇಕು ಎಂದು ಒತ್ತಾಯಿಸಿದರು.
Also Read:
ಬಿಜೆಪಿ ರಾಜಕೀಯದಲ್ಲಿ ಸಂಚಲನ - ಯತ್ನಾಳ್ ವೋಟ್ ಕುರಿತು ಲಿಂಗರಾಜ್ ಪಾಟೀಲ್ ಸ್ಪೋಟಕ ಬಹಿರಂಗ