<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಮಳೆಯ ಅಬ್ಬರಕ್ಕೆ ಬೆಳಗಾವಿ ತತ್ತರ : ಉಕ್ಕಿ ಹರಿದ ನದಿಗಳು, ದತ್ತ ಮಂದಿರಕ್ಕೂ ನೀರು

ಮಳೆಯ ಅಬ್ಬರಕ್ಕೆ ಬೆಳಗಾವಿ ತತ್ತರ : ಉಕ್ಕಿ ಹರಿದ ನದಿಗಳು, ದತ್ತ ಮಂದಿರಕ್ಕೂ ನೀರು
Summary: Rivers are overflowing due to heavy rains in Belgaum, with bridges and Datta Mandir submerged in water. Here is a detailed report on the rain, flood situation and the plight of the locals.

Belagavi News :

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಸುರಿಯುತ್ತಿರುವಂತಹ ಧಾರಾಕಾರ ಮಳೆಯ ಪರಿಣಾಮ ಬೆಳಗಾವಿ ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ದೂದ್ ಗಂಗಾ, ವೇದಗಂಗಾ, ಕೃಷ್ಣ ಮತ್ತು ಘಟಪ್ರಭಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಚಿಕ್ಕೋಡಿ ಉಪ ವಿಭಾಗದ ಹಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.

ನಿರಂತರ ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ಹಲವು ಕೆಳಹಂತದ ಸೇತುವೆಗಳು ಜಲಾವೃತಗೊಂಡಿದ್ದು, ಕೆಲ ಮಾರ್ಗಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಮಲ್ಲಿಕವಾಡ ಗ್ರಾಮದ ಬಳಿ ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮಲ್ಲಿಕವಾಡ - ದತ್ತವಾಡ ಸಂಪರ್ಕ ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ.

ನದಿಗಳ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಸ್ಥಳೀಯ ಆಡಳಿತ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದೆ. ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಮುಂದುವರಿಯುತ್ತಿರುವುದರಿಂದ ಕೃಷ್ಣ, ದೂಧಗಂಗಾ, ವೇದಗಂಗಾ ಹಾಗೂ ಘಟಪ್ರಭಾ ನದಿಗಳ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಘಟಪ್ರಭಾ ನದಿಯಂತೂ ಮೈದುಂಬಿ ಹರಿಯುತ್ತಿದ್ದು ಬೆಳಗಾವಿ ಸಮೀಪದ ಪ್ರಮುಖ ಗ್ರಾಮಗಳಲ್ಲಿ ಹೆಚ್ಚಿನ ಆತಂಕ ನಿರ್ಮಾಣವಾಗಿದೆ.

ನರಸಿಂಹವಾಡಿ ದತ್ತ ಮಂದಿರ ಜಲಾವೃತ - ಕೃಷ್ಣಾ, ಪಂಚಗಂಗಾ ನದಿಗಳ ನೀರಿನ ಮಟ್ಟ ಏರಿಕೆ :

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ನದಿಗಳ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿದ್ದು, ಕೊಲ್ಲಾಪುರ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ನರಸಿಂಹ ವಾಡಿ ದತ್ತ ಮಂದಿರ ಪ್ರವಾಹದ ನೀರಿನಿಂದ ಜಲಾವೃತಗೊಂಡಿದೆ.

ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಸಂಗಮ ಸ್ಥಳದಲ್ಲಿರುವ ನರಸಿಂಹ ವಾಡಿ ದತ್ತಮಂದಿರದ ಆವರಣಕ್ಕೆ ನದಿ ನೀರು ನುಗ್ಗಿದ್ದು, ದೇವಾಲಯದ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ನೀರಿನ ಮಟ್ಟ ಏರಿಕೆಯ ನಡುವೆಯೂ ಭಕ್ತರು ನೀರಿನ ಮಧ್ಯದಲ್ಲಿಯೇ ದೇವರ ದರ್ಶನ ಪಡೆಯುತ್ತಿರುವ ದೃಶ್ಯಗಳು ಕಂಡುಬಂದಿವೆ.

ನದಿಗಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಭಕ್ತರ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ಆಡಳಿತ ಪರಿಸ್ಥಿತಿಯನ್ನು ಗಮನಿಸುತ್ತಿದೆ.

ಇನ್ನೂ ಗಮನಾರ್ಹ ಸಂಗತಿ ಎಂದರೆ, ಮಹಾರಾಷ್ಟ್ರದ ಯಾವುದೇ ಪ್ರಮುಖ ಜಲಾಶಯಗಳಿಂದ ಈವರೆಗೆ ನದಿಗಳಿಗೆ ನೀರು ಹರಿಬಿಟ್ಟಿಲ್ಲ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ನೀರೇ ಕೃಷ್ಣ ಹಾಗೂ ಅದರ ಉಪನದಿಗಳಿಗೆ ಹರಿದು ಬರುತ್ತಿದೆ. ಇದರಿಂದ ವೇದಗಂಗಾ, ದೂಧಗಂಗಾ, ಮತ್ತು ಕೃಷ್ಣಾ ನದಿಗಳ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.

ಮುಂಗಾರು ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದ ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದ್ದು, ಪ್ರವಾಹ ಪರಿಸ್ಥಿತಿಯ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ಬೆಳಗಾವಿಯಲ್ಲಿ ಮಳೆ ಅಬ್ಬರ - ಕೃಷ್ಣಾ ನದಿಯಲ್ಲಿ 98 ಸಾವಿರ ಕ್ಯೂಸೆಕ್ ನೀರು ಹರಿವು ; ನದಿ ತೀರದ ಜನರಿಗೆ ಎಚ್ಚರಿಕೆ :

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಬೆಳಗಾವಿ ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಯಲ್ಲಿ 98 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದೆ. ನದಿಗಳ ಒಳ ಹರಿವು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು, ನದಿ ಪಾತ್ರಗಳು, ಜಲಪಾತಗಳ ಸುತ್ತಮುತ್ತ ಪೊಲೀಸರ ಬ್ಯಾರಿಕೇಡ್ ಅಳವಡಿಸಿ ನಿಗ ವಹಿಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ಮಳೆಯಿಂದ ಕರ್ನಾಟಕದಲ್ಲಿ ಸಂತಸದ ವಾತಾವರಣ - ಸಚಿವ ಸತೀಶ್ ಜಾರಕಿಹೊಳಿ :

ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿ ಬರದ ಆತಂಕ ದೂರವಾಗಿದ್ದು, ಇತ್ತೀಚಿನ ಮಳೆಯಿಂದ ಸಂತಸದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಬರಗಾಲ ಬಂದರೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ದೊಡ್ಡ ಸಮಸ್ಯೆಯಾಗುತ್ತಿತ್ತು. ಆದರೆ ಕಳೆದ ಎರಡು ಮೂರು ದಿನಗಳಲ್ಲಿ ಮಳೆಯ ದಿಕ್ಕು ಬದಲಾಗಿದ್ದು, ಕರ್ನಾಟಕಕ್ಕೆ ಉತ್ತಮ ಪರಿಸ್ಥಿತಿ ನಿರ್ಮಾಣವಾಗಿದೆ " ಎಂದು ಹೇಳಿದರು.

ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗುತ್ತಿದ್ದು, ಕೃಷ್ಣಾ , ಮಲಪ್ರಭಾ ಮತ್ತು ಹಿರಣ್ಯಕೇಶಿ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದೆ. ಘಟಪ್ರಭಾ ನದಿಗೂ ಇನ್ನಷ್ಟು ನೀರು ಬರಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೃಷ್ಣಾ ಭಾಗದಲ್ಲಿ ಕೆಳಹಂತದ ಸೇತುವೆಗಳು ಪ್ರತಿ ಮಳೆಗಾಲದಲ್ಲೂ ಮುಳುಗಡೆ ಆಗುತ್ತಿದ್ದು,ಅವುಗಳನ್ನು ಎತ್ತರಿಸುವ ಕೆಲಸ ಅಗತ್ಯವಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮುಂದಿನ ನಾಲ್ಕೈದು ದಿನ ಮಳೆ ಸಾಧ್ಯತೆ :

ಮುಂಗಾರು ಮಳೆ ಇನ್ನು ಮುಂದುವರೆಯುವ ಸಾಧ್ಯತೆಯಿದ್ದು, ಮುಂದಿನ ನಾಲ್ಕೈದು ದಿನಗಳ ಕಾಲ ಮಳೆ ಆಗುವ ನಿರೀಕ್ಷೆ ಇದೆ. ಜನರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಮೋಡ ಬಿತ್ತನೆ ಕುರಿತು ಪ್ರಸ್ತಾಪ :

ಹಾವೇರಿಯಲ್ಲಿ ನಡೆದ ಮೋಡ ಬಿತ್ತನೆ ಬಳಿಕ ಹೆಚ್ಚಿನ ಮಳೆಯಾಗಿದೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ಕಾರ್ಯ ಮುಂದುವರಿಸುವಂತೆ ಮುಖ್ಯಮಂತ್ರಿ ಅವರಿಗೆ ಒತ್ತಾಯಿಸುವುದಾಗಿ ಸಚಿವರು ಹೇಳಿದರು.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online