Belagavi News:
ಬಳ್ಳಾರಿ: ಸರ್ಕಾರದ ವಶಪಡಿಸಿಕೊಂಡ ಭೂಮಿಗೆ ನ್ಯಾಯಯುತ ಪರಿಹಾರ ಹಾಗೂ ಪ್ರಸ್ತುತ ಮಾರುಕಟ್ಟೆ ಮೌಲ್ಯ ನೀಡುವಂತೆ ಆಗ್ರಹಿಸಿ ಬಳ್ಳಾರಿ ತಾಲೂಕಿನ ಕುಡುತಿನಿ ಭಾಗದ ಭೂ ಸಂತ್ರಸ್ತ ರೈತರು ಗುರುವಾರ ಬಳ್ಳಾರಿ ಬಂದ್ ಗೆ ಕರೆ ನೀಡಿ ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಹಿನ್ನೆಲೆ ರೈತರು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ನಗರದ ರಾಯಲ್ ವೃತದಲ್ಲಿ ಜಮಾಯಿಸಿದ ರೈತರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಂದ್ ಗೆ ಸಾರ್ವಜನಿಕರಿಂದ ನಿರೀಕ್ಷಿತ ಮಟ್ಟದ ಬೆಂಬಲ ದೊರೆಯದಿದ್ದರೂ, ಭೂ ಸಂತ್ರಸ್ತ ರೈತರು ತಮ್ಮ ಹೋರಾಟವನ್ನು ಮುಂದುವರಿಸಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.
ಕುಡುತಿನ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ಎಕರೆ ಭೂಮಿಯನ್ನು ಬ್ರಹ್ಮಿಣಿ, ಮಿತ್ತಲ್, ಎನ್ಎಂಡಿಸಿ ಸೇರಿದಂತೆ ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಸುಮಾರು 15 ವರ್ಷಗಳ ಹಿಂದೆ ಸರ್ಕಾರ ವಶಪಡಿಸಿಕೊಂಡಿತ್ತು. ಆದರೆ ಭೂಮಿ ಕಳೆದುಕೊಂಡ ರೈತರಿಗೆ ಇದುವರೆಗೆ ನ್ಯಾಯಯುತ ಪರಿಹಾರ ಹಾಗೂ ಭೂಮಿಯ ನೈಜ ಮಾರುಕಟ್ಟೆ ಬೆಲೆ ದೊರೆತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಭೂಸ್ವಾಧೀನದ ಸಂದರ್ಭದಲ್ಲಿ ನೀಡಲಾದ ಪರಿಹಾರ ಮೊತ್ತ ಮತ್ತು ಪ್ರಸ್ತುತ ಭೂಮಿಯ ಮೌಲ್ಯದ ನಡುವೆ ಭಾರೀ ಅಂತರವಿದ್ದು, ಇದರಿಂದ ಸಾವಿರಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಭೂ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ರೈತರ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು. ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಸುವ ಎಚ್ಚರಿಕೆಯನ್ನು ರೈತ ಮುಖಂಡರು ನೀಡಿದ್ದಾರೆ.
ಪ್ರತಿಭಟನಾಕಾರರ ಪ್ರಕಾರ, ಯಾವುದೇ ನಿರ್ದಿಷ್ಟ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಭೂಮಿಯನ್ನು ಹತ್ತು ವರ್ಷಗಳೊಳಗೆ ಆ ಉದ್ದೇಶಕ್ಕೆ ಬಳಸಬೇಕು. ಒಂದು ವೇಳೆ ಭೂಮಿಯನ್ನು ಬಳಸದೆ ಉಳಿಸಿದರೆ ಅದನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಬೇಕೆಂಬ ನಿಯಮವಿದೆ. ಆದರೆ, ಹಲವು ವರ್ಷಗಳಿಂದ ಭೂಮಿ ಬಳಕೆಯಾಗದೆ ಖಾಲಿ ಇದ್ದರೂ ಅದನ್ನು ರೈತರಿಗೆ ಮರಳಿಸಲಾಗಿಲ್ಲ ಎಂದು ಭೂ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದರು.
ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಭೂ ಬೆಲೆ ಮತ್ತು ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ರೈತರು, ಕೆಐಎಡಿಬಿಯ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದರು. ಇದೇ ಕಾರಣಕ್ಕಾಗಿ ಬಳ್ಳಾರಿ ಬಂದ್ ಗೆ ಕರೆ ನೀಡಲಾಗಿದ್ದು, ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ವಿವಿಧ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಭೂ ಸಂತ್ರಸ್ತರ ಹೋರಾಟ ಸಮಿತಿಗೆ ವಿವಿಧ ರೈತ ಸಂಘಟನೆಗಳು, ಕಾರ್ಮಿಕ ಸಂಘಗಳು, ಮಹಿಳಾ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಕುಡುತಿನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಸ್ವಾಧೀನ, ಪರಿಹಾರ ಮತ್ತು ಭೂ ಹಕ್ಕುಗಳ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದ್ದು, ರೈತರ ಹೋರಾಟ ರಾಜ್ಯದ ಗಮನ ಸೆಳೆಯುತ್ತಿದೆ.
Also Read:
ಬೆಳಗಾವಿ ಕರ್ನಾಟಕದ್ದೇ; ನಿರ್ಣಯ ಸಬ್ ಜ್ಯೂಡಿಸ್ ಆಗುವುದಿಲ್ಲ ಎಂದು ಕಾತರಕಿ