ಬೆಂಗಳೂರು: ATM ವಾಹನ ತಡೆದು ₹7 ಕೋಟಿಗೂ ಹೆಚ್ಚು ಹಣ ದರೋಡೆ
ಬೆಂಗಳೂರು ನಗರದೆಲ್ಲೆಡೆ ಪೊಲೀಸರು ನಾಕಾಬಂದಿ ಹಾಕಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
ಬೆಂಗಳೂರು:
ನಗರದಲ್ಲಿಂದು ಕೋಟ್ಯಂತರ ರೂಪಾಯಿ ದರೋಡೆ ನಡೆದಿದೆ. ಅಧಿಕಾರಿಗಳ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಎಟಿಎಂ ಯಂತ್ರಗಳಿಗೆ ಹಣ ತುಂಬಿಸಲು ಕೊಂಡೊಯ್ಯುತ್ತಿದ್ದ ವಾಹನದಿಂದ 7.11 ಕೋಟಿ ರೂಪಾಯಿ ದೋಚಿದ್ದಾರೆ. ನಗರದ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ದುಷ್ಕೃತ್ಯ ನಡೆದಿದೆ.
ಏನಾಯ್ತು?:
ಚಾಲಕನನ್ನು ಮಾತ್ರ ಕೂರಿಸಿಕೊಂಡು ಜಯದೇವ ಆಸ್ಪತ್ರೆ ಕಡೆಯಿಂದ ಡೈರಿ ಸರ್ಕಲ್ ಕಡೆಗೆ ವಾಹನವನ್ನು ಕರೆದೊಯ್ದಿದ್ದಾರೆ.
ಫ್ಲೈ ಓವರ್ ಮೇಲೆ ಕಸ್ಟೋಡಿಯನ್ ವಾಹನವನ್ನು ನಿಲ್ಲಿಸಿ ಚಾಲಕನನ್ನು ಬೆದರಿಸಿ, 7.11 ಕೋಟಿ ರೂ ಹಣವಿದ್ದ ಪೆಟ್ಟಿಗೆಯನ್ನು ತಮ್ಮ ಕಾರಿಗೆ ಹಾಕಿಕೊಂಡು ಪರಾರಿಯಾಗಿದ್ದಾರೆ.
ಸರ್ಕಾರಿ ವಾಹನದಂತೆ ಸ್ಟಿಕ್ಕರ್ ಹಾಕಿದ್ದ ಇನ್ನೋವಾ ಕಾರಿನಲ್ಲಿ ಬಂದಿದ್ದ 5ರಿಂದ 6 ಜನರಿದ್ದ ದರೋಡೆಕೋರರ ಗುಂಪು ಸೌತ್ ಎಂಡ್ ಸರ್ಕಲ್ ಬಳಿ ಎಟಿಂಎಗೆ ಹಣ ತುಂಬಿಸಿ ಹೊರಟಿದ್ದ ಕಸ್ಟೋಡಿಯನ್ ವಾಹನವನ್ನು ತಡೆದಿದ್ದಾರೆ.
ಬಳಿಕ ತಾವು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಹಾಗೂ ಆರ್ಬಿಐ ಎನ್ನುತ್ತಾ ಕಸ್ಟೋಡಿಯನ್ ವಾಹನದಲ್ಲಿದ್ದ ಗನ್ಮ್ಯಾನ್ ಸಹಿತ ಎಲ್ಲ ಸಿಬ್ಬಂದಿಯನ್ನು ಕೆಳಗಿಳಿಸಿದ್ದಾರೆ.
ದರೋಡೆ ವರದಿಯಾಗುತ್ತಿದ್ದಂತೆ ಸ್ಥಳಕ್ಕೆ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು, ಸೋಕೋ ಟೀಂ ಅಧಿಕಾರಿಗಳು ಆಗಮಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಭೇಟಿ ನೀಡಿದ್ದು ಮಾಹಿತಿ ಪಡೆದಿದ್ದಾರೆ. ಬೆಂಗಳೂರಿನ ಎಲ್ಲ ವಿಭಾಗಗಳ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ಆರೋಪಿಗಳ ಪತ್ತೆ ಕಾರ್ಯ ತೀವ್ರಗೊಂಡಿದೆ.
ಶಂಕಿತ ಆರೋಪಿಗಳ ಚಿತ್ರ ಬಿಡುಗಡೆ:
ಚಾಲಕ ನೀಡಿದ ಪ್ರಾಥಮಿಕ ಮಾಹಿತಿ ಅನುಸಾರ ಹಳೆ ಆರೋಪಿಗಳು ಹಾಗು ಕೆಲವು ಶಂಕಿತರೂ ಸೇರಿ 6 ಜನರ ಫೋಟೋ ಬಿಡುಗಡೆ ಮಾಡಲಾಗಿದೆ. ನಾಕಾ ಬಂದಿಯಲ್ಲಿರುವ ಸಿಬ್ಬಂದಿಗೆ ಈ ಫೋಟೊಗಳನ್ನು ರವಾನಿಸಿದ್ದು, ಪರಿಶೀಲನೆ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಅಂದಾಜು 7 ಕೋಟಿ ಹಣ ದರೋಡೆ- ಪೊಲೀಸ್ ಕಮೀಷನರ್:
ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, "ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದಕ್ಷಿಣ ಡಿಸಿಪಿ ಮತ್ತು ಪಶ್ಚಿಮ ವಿಭಾಗ ಜಂಟಿ ಪೊಲೀಸ್ ಆಯುಕ್ತರು ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಅಂದಾಜು 7 ಕೋಟಿ ಹಣ ದರೋಡೆಯಾಗಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಚಾಲಕನ ಹೇಳಿಕೆ ಕೂಡ ಪಡೆಯಲಾಗುತ್ತಿದೆ.
ದರೋಡೆಕೋರರು ಶಸ್ತ್ರಾಸ್ತ್ರ ಹೊಂದಿದ್ದರಾ ಎಂಬ ಕುರಿತು ಕೂಡ ವಿಚಾರಣೆ ನಡೆಸಲಾಗುತ್ತಿದೆ. ನಗರದ ಸುತ್ತ ನಾಕಾಬಂದಿ ಹಾಕಿದ್ದು, ತಮ್ಮ ತಂಡ ಎಲ್ಲೆಡೆ ಕಾರ್ಯಪ್ರವೃತ್ತವಾಗಿದೆ. ಕಂಟ್ರೋಲ್ ರೂಮ್, ಬೇರೆ ಬೇರೆ ತಾಂತ್ರಿಕ ವಿಭಾಗ ಸೇರಿದಂತೆ ಎಲ್ಲರೂ ಆರೋಪಿಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದೇವೆ" ಎಂದು ಮಾಹಿತಿ ನೀಡಿದರು.
ಇನ್ನಷ್ಟು ಓದಿರಿ :
ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ದಂಪತಿಯ ಮಗುವಿನ ಹೆಸರು ರಿವೀಲ್