Belagavi News:
ಹೈದರಾಬಾದ್: ಅಂತರರಾಜ್ಯ ಮಾದಕ ವಸ್ತು ಸಾಗಣೆ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ತೆಲಂಗಾಣದ ಮಾದಕ ದ್ರವ್ಯ ನಿಗ್ರಹ ದಳವಾದ 'ಈಗಲ್ ಪಡೆ, ಅಂತಾರಾಷ್ಟ್ರೀಯ ಡ್ರಗ್ ಸಿಂಡಿಕೇಟ್ ನ ಪ್ರಮುಖ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದೆ.
ಬಂಧಿತನು ಕಳೆದ ಹಲವು ವರ್ಷಗಳಿಂದ ಹೈದರಾಬಾದ್ ನ ಗ್ರಾಹಕರಿಗೆ ಡ್ರಗ್ಸ್ ಪೂರೈಸುತ್ತಿದ್ದಾನೆ ಎಂಬ ಆರೋಪ ಇದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಸಹಯೋಗದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ 241 ಗ್ರಾಂ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದ ಹಿಂದೆ ದೊಡ್ಡ ಅಂತರರಾಷ್ಟ್ರೀಯ ಜಾಲವಿದ್ದು, ಅದರ ಸಂಪರ್ಕಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈಜೀರಿಯನ್ ವ್ಯಕ್ತಿಯಿಂದ ಡ್ರಗ್ಸ್ ಮಾರಾಟ: ನೈಜೀರಿಯನ್ ಪ್ರಜೆಯೊಬ್ಬರಯೋ ಸೂಚನೆ ಮೇರೆಗೆ ಬೆಂಗಳೂರಿನಿಂದಲೇ ಡ್ರಗ್ಸ್ ಜಾಲವನ್ನು ನಿರ್ವಹಿಸುತ್ತಿದ್ದ ಆರೋಪದಡಿ ಬಂಧಿತ ಆರೋಪಿಯ ಕುರಿತು ಹೆಚ್ಚಿನ ವಿವರಗಳು ಬಹಿರಂಗವಾಗಿವೆ.
ಈಗಲ್ ಸಂಸ್ಥೆಯ ನಿರ್ದೇಶಕ ಸಂದೀಪ್ ಶಾಂಡಿಲ್ಯ ಅವರ ಪ್ರಕಾರ, ಬಂಧಿತ ಆರೋಪಿ ನೈಜೀರಿಯಾದ ಡ್ರಗ್ ವ್ಯಾಪಾರಿಯ ಮಾರ್ಗದರ್ಶನದಲ್ಲಿ ಹ್ಯಾಂಡ್ಲರ್ ಗಳೊಂದಿಗೆ ಸಂವಹನ ನಡೆಸುತ್ತಿದ್ದನು. ಇದಕ್ಕಾಗಿ ನೈಜೀರಿಯನ್ ಫೋನ್ ಸಂಖ್ಯೆಯನ್ನು ಬಳಸುತ್ತಿದ್ದ ಎನ್ನಲಾಗಿದೆ. ಡ್ರಗ್ಸ್ ವಿತರಣೆಗೆ " ಡೆಡ್ - ಡ್ರಾಪ್ " ವಿಧಾನವನ್ನು ಅಳವಡಿಸಿಕೊಂಡು, ಯಾರು ಗಮನಕ್ಕೂ ಬಾರದಂತೆ ಮುಂಚಿತವಾಗಿ ನಿಗದಿಪಡಿಸಿದ ರಹಸ್ಯ ಸ್ಥಳಗಳಲ್ಲಿ ಮಾದಕ ವಸ್ತುಗಳನ್ನು ಇಡುತ್ತಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ.
ತನಿಖಾಧಿಕಾರಿಗಳ ಶಂಕೆಯ ಪ್ರಕಾರ, ಹೈದರಾಬಾದ್ ನ ಬಹು ಚರ್ಚಿತ ಮಲ್ನಾಡ್ ಡ್ರಗ್ಸ್ ಪ್ರಕರಣ ಹಾಗೂ ಕೊಂಡಾಪುರ ರೇವ್ ಪಾರ್ಟಿ ಪ್ರಕರಣದ ಹಲವಾರು ಆರೋಪಿಗಳಿಗೆ ಇದೇ ಜಾಲದಿಂದ ಡ್ರಗ್ಸ್ ಸರಬರಾಜಾಗಿತ್ತು.
ಬಂಧಿತನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಮೂಲಕ ಪಿ.ವಿ . ರಾಹುಲ್ (24) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕಾರು ಶೋರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅರ್ಶಲಾನ್ ಎಂಬ ಸ್ನೇಹಿತನ ಮೂಲಕ ರಾಹುಲ್ ಮೊದಲಿಗೆ ಡ್ರಗ್ಸ್ ವ್ಯಸನಿಯಾಗಿದ್ದಾನೆ ಎಂದು ಹೇಳಲಾಗಿದೆ. ಬಳಿಕ ಮೈಕಲ್ ಜಾಕ್ಸನ್ ಅಲಿಯಾಸ್ ' ಆನರ್ ' ಎಂಬ ನೈಜೀರಿಯನ್ ಪ್ರಜೆಯಿಂದ ಎಂಡಿಎಂಎ ಖರೀದಿಸಲು ಆರಂಭಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆಯೂ ಬಂಧಿತನಾಗಿದ್ದ: ಕೆಲಸ ಕಳೆದುಕೊಂಡ ಬಳಿಕ ಆರೋಪಿ ಪಿ.ವಿ. ರಾಹುಲ್ ಸಂಪೂರ್ಣವಾಗಿ ಡ್ರಗ್ಸ್ ದಂಧೆಗೆ ಇಳಿದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ನೈಜೀರಿಯನ್ ಪೂರೈಕೆದಾರರಿಂದ ಕಡಿಮೆ ಬೆಲೆಗೆ ಎಂಡಿಎಂಎ ಖರೀದಿಸಿ ಅದನ್ನು ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ.
ಕೆಲವು ತಿಂಗಳ ಹಿಂದೆ ಹೈದರಾಬಾದ್ ನ ಬಾಲಾಪುರ ಅಬಕಾರಿ ಠಾಣೆ ಪೊಲೀಸರು ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ರಾಹುಲ್ ನನ್ನು ಬಂಧಿಸಿ ಜೈಲುಗಟ್ಟಿದ್ದರು. ಜೈಲಿನಲ್ಲಿದ್ದ ಅವಧಿಯಲ್ಲಿ ಆತನಿಗೆ ಪೇಟ್ ಬಶೀರಾಬಾದ್ ನ ಮೋಹಿತ್ ಕುಮಾರ್ (32) ಎಂಬಾತನ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಸಂಪರ್ಕ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 9ರಂದು ಬೆಂಗಳೂರಿನ ರಾಹುಲ್ ನಿವಾಸದಿಂದ ಡ್ರಗ್ಸ್ ಸಂಗ್ರಹಿಸಿ ಹೈದರಾಬಾದ್ ಗೆ ಮರಳುತ್ತಿದ್ದ ಮೋಹಿತ್ ನನ್ನು ಈಗಲ್ ಅಧಿಕಾರಿಗಳು ಬಂಧಿಸಿದ್ದರು. ಈ ಪ್ರಕರಣದ ತನಿಖೆಯ ವೇಳೆ ಸಿಕ್ಕ ಸುಳುವಿನ ಆಧಾರದ ಮೇಲೆ ಈಗಲ್ ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದ ವಿಶೇಷ ತಂಡ ಬೆಂಗಳೂರಿನಲ್ಲಿ ಐದು ದಿನಗಳ ಕಾಲ ನಿಗಾ ಇಟ್ಟು, ಭಾನುವಾರ ರಾಹುಲ್ ನನ್ನು ಯಶಸ್ವಿಯಾಗಿ ಬಂಧಿಸಿದೆ.
ಈ ಅಂತಾರಾಷ್ಟ್ರೀಯ ಡ್ರಗ್ ಜಾಲದಲ್ಲಿ ಇನ್ನೂ ಹಲವು ಸದಸ್ಯರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಹೈದರಾಬಾದ್ ಸೇರಿದಂತೆ ತೆಲಂಗಾಣದ ವಿವಿಧ ಭಾಗಗಳಲ್ಲಿ ಹರಡಿರುವ ಈ ಜಾಲವನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.