ಶ್ರೀ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ
ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ, ಬಾಬಾ ಅವರ ಜೀವನ, ಬೋಧನೆಗಳು ಮತ್ತು ಸೇವೆಯ ಸ್ಮರಣಾರ್ಥ 100 ರೂಪಾಯಿ ನಾಣ್ಯ ಮತ್ತು 4 ಅಂಚೆ ಚೀಟಿಗಳನ್ನು ಅನಾವರಣಗೊಳಿಸಿದರು.
ಪುಟ್ಟಪರ್ತಿ(ಆಂಧ್ರ ಪ್ರದೇಶ):
ಪುಟ್ಟಪರ್ತಿಯಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸಿದ್ದು ನನ್ನ ಅದೃಷ್ಟ. ಸತ್ಯಸಾಯಿ ಬಾಬಾ ಇಂದು ಭೌತಿಕವಾಗಿ ಇಲ್ಲದಿದ್ದರೂ ಅವರ ಪ್ರೀತಿ ನಮ್ಮೊಂದಿಗಿದೆ. ಸೇವೆ ಭಾರತೀಯ ನಾಗರಿಕತೆಯ ಮೂಲತತ್ವ. ಭಕ್ತಿ, ಜ್ಞಾನ ಮತ್ತು ಕರ್ಮ ಎಲ್ಲವೂ ಸೇವೆಗೆ ಸಂಬಂಧಿಸಿದ್ದೇ ಆಗಿವೆ. ಈ ನಿಟ್ಟಿನಲ್ಲಿ ಬಾಬಾರ ಬೋಧನೆಗಳು ಲಕ್ಷಾಂತರ ಜನರಿಗೆ ದಾರಿ ತೋರಿಸಿವೆ. ಎಲ್ಲರನ್ನೂ ಪ್ರೀತಿಸಿ ಮತ್ತು ಎಲ್ಲರ ಸೇವೆ ಮಾಡಿ ಎಂಬುದು ಬಾಬಾರ ಧ್ಯೇಯವಾಗಿದೆ. ಅವರ ಬೋಧನೆಗಳ ಪ್ರಭಾವ ದೇಶಾದ್ಯಂತ ಗೋಚರಿಸುತ್ತದೆ" ಎಂದು ಹೇಳಿದರು.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ನಟಿ ಐಶ್ವರ್ಯ ರೈ ಬಚ್ಚನ್, ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಆರ್.ಜೆ.ರತ್ನಾಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರಿಂದು ಪುಟ್ಟಪರ್ತಿಗೆ ಭೇಟಿ ನೀಡಿ ಶ್ರೀ ಸತ್ಯಸಾಯಿ ಬಾಬಾ ಅವರ ಮಹಾಸಮಾಧಿಯ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಪುಟ್ಟಪರ್ತಿಗೆ ಹೋಗುವ ಸಂದರ್ಭದಲ್ಲಿ ಅವರು ರೋಡ್ ಶೋ ನಡೆಸಿದರು.
ಇಂದು ಪಿಎಂ ಕಿಸಾನ್ ಯೋಜನೆಯ 21ನೇ ಕಂತು ಬಿಡುಗಡೆ:
ಇಂದು ಮತ್ತು ನಾಳೆ ನಡೆಯಲಿರುವ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆಯನ್ನು ತಮಿಳುನಾಡು ನೈಸರ್ಗಿಕ ಕೃಷಿ ಪಾಲುದಾರರ ವೇದಿಕೆ ಆಯೋಜಿಸುತ್ತಿದೆ. ಆರ್ಥಿಕವಾಗಿ ಸುಸ್ಥಿರ ಮಾದರಿಯಾಗಿ ನೈಸರ್ಗಿಕ ಮತ್ತು ಪುನರುತ್ಪಾದಕ ಕೃಷಿಯತ್ತ ಬದಲಾವಣೆಯನ್ನು ವೇಗಗೊಳಿಸುವ ಗುರಿಯನ್ನು ಈ ಶೃಂಗಸಭೆ ಹೊಂದಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ರೈತ ಉತ್ಪಾದಕ ಸಂಸ್ಥೆಗಳು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಮಾರುಕಟ್ಟೆ ಸಂಪರ್ಕಗಳನ್ನು ಸೃಷ್ಟಿಸುವುದರ ಬಗ್ಗೆ ಈ ಶೃಂಗಸಭೆ ಗಮನಹರಿಸಲಿದ್ದು, ಕೃಷಿ ಸಂಸ್ಕರಣೆ, ಪರಿಸರ ಸ್ನೇಹಿ ಪ್ಯಾಕೇಜಿಂಗ್ ಮತ್ತು ಸ್ಥಳೀಯ ತಂತ್ರಜ್ಞಾನಗಳಲ್ಲಿ ನಾವೀನ್ಯತೆಗಳನ್ನು ಪ್ರದರ್ಶಿಸಲಿದೆ.
ತಮಿಳುನಾಡು, ಪುದುಚೇರಿ, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ 50 ಸಾವಿರಕ್ಕೂ ಹೆಚ್ಚು ರೈತರು, ನೈಸರ್ಗಿಕ ಕೃಷಿ ವೃತ್ತಿಪರರು, ವಿಜ್ಞಾನಿಗಳು, ನೈಸರ್ಗಿಕ ಕೃಷಿ ಉತ್ಪನ್ನ ಮಾರಾಟಗಾರರು ಮತ್ತು ಪಾಲುದಾರರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ತಮಿಳುನಾಡಿನ ಕೊಯಮತ್ತೂರಿಗೆ ಪ್ರಯಾಣಿಸಲಿದ್ದು, ಮಧ್ಯಾಹ್ನ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. ದೇಶಾದ್ಯಂತ ಒಂಬತ್ತು ಕೋಟಿ ರೈತರಿಗೆ 18 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಪಿಎಂ ಕಿಸಾನ್ ಯೋಜನೆಯ 21ನೇ ಕಂತನ್ನು ಅವರು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವರು.
ಇನ್ನಷ್ಟು ಓದಿರಿ :
ಅಲ್ ಫಲಾಹ್ ಗ್ರೂಪ್ ಅಧ್ಯಕ್ಷ ಜವಾದ್ ಸಿದ್ದಿಕಿ ಬಂಧನ