Belagavi news:
ಬೆಂಗಳೂರು: ಭೂಗತ ಲೋಕದ ಕುಖ್ಯಾತ ಆರೋಪಿ ವಿಕ್ಕಿ ಶೆಟ್ಟಿ ಹೆಸರಿನಲ್ಲಿ ನಗರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿಗೆ ಬೆದರಿಕೆ ಕರೆ ಬಂದಿರುವ ಘಟನೆ ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದೆ. ಉದ್ಯಮಿ ಜಿ.ಕೆ. ಶಂಕರ್ ಅವರಿಗೆ ಅಪರಿಚಿತರು ಕರೆ ಮಾಡಿ ಹಣಕ್ಕಾಗಿ ಧಮಕಿ ಹಾಕಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಕರೆ ಮಾಡಿದವರು ತಮ್ಮನ್ನು ವಿಕ್ಕಿ ಶೆಟ್ಟಿ ಆಪ್ತರು ಎಂದು ಪರಿಚಯಿಸಿಕೊಂಡು ಹಣ ನೀಡಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಪೊಲೀಸರು ಕರೆಗಳ ಮೂಲ ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.
ಮೂಲತಃ ಮಂಗಳೂರಿನವನಾದ ವಿಕ್ಕಿ ಶೆಟ್ಟಿ ಭೂಗತ ಪಾತಕಿ ರವಿ ಪೂಜಾರಿಯ ಮಾಜಿ ಸಹಚರನಾಗಿದ್ದು, 2020 ರಲ್ಲಿ ರಾಜ್ಯ ಪೊಲೀಸರಿಂದ ಬಂಧನ ಕ್ಕೊಳಗಾಗಿದ್ದ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಹಿಂದೆ ಅಂಡರ್ ವರ್ಡ್ ಸಂಪರ್ಕ ಇದೆಯೇ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಘಟನೆ ಬೆಂಗಳೂರಿನ ಉದ್ಯಮಿಗಳಲ್ಲಿ ಮತ್ತೆ ಭದ್ರತಾ ಆತಂಕವನ್ನು ಹುಟ್ಟುಹಾಕಿದ್ದು, ಇತ್ತೀಚಿನ ದಿನಗಳಲ್ಲಿ ಬೆದರಿಕೆ ಕರೆಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪೊಲೀಸರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
Also Read: